ನವದೆಹಲಿ: ಕರ್ನಾಟಕದ ಕೋಲಾರ ಜಿಲ್ಲೆಯ ಮಾಲೂರು ವಿಧಾನಸಭಾ ಕ್ಷೇತ್ರದ ವಿಚಾರದಲ್ಲಿ ಹೈಕೋರ್ಟ್ ಮರುಮತ ಎಣಿಕೆಗೆ ಸೂಚನೆ ನೀಡಿದ್ದನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ.
ಕರ್ನಾಟಕದ ಕೋಲಾರ ಜಿಲ್ಲೆಯ ಮಾಲೂರು ವಿಧಾನಸಭಾ ಕ್ಷೇತ್ರದ 2023ರ ವಿಧಾನಸಭೆ ಚುನಾವಣೆಯಲ್ಲಿ ನಡೆದಿರುವ ಕೆಲವು ತಪ್ಪುಗಳನ್ನು ಗಮನಿಸಿ, ರಾಜ್ಯ ಹೈಕೋರ್ಟ್ ಮರು ಮತ ಎಣಿಕೆಗೆ ಆದೇಶ ನೀಡಿತ್ತು.
ಆದರೆ, ಈ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಲಾಗಿತ್ತು, ಇದೀಗ ಸುಪ್ರೀಂ ಕೋರ್ಟ್ ಕೂಡ ರಾಜ್ಯ ಹೈಕೋರ್ಟ್ ಆದೇಶವನ್ನು ಎತ್ತಿಹಿಡಿದಿದೆ. ಮರು ಮತ ಎಣಿಕೆ ಬಗ್ಗೆ ಕಠಿಣ ಸೂಚನೆ ಹೊರಡಿಸಿದೆ.
ಶಾಸಕ ಕೆ.ವೈ ನಂಜೇಗೌಡ ಮತ್ತು ಮಾಜಿ ಶಾಸಕ ಮಂಜುನಾಥಗೌಡ ಮಧ್ಯೆ ಚುನಾವಣೆ ಪ್ರಾರಂಭವಾದಾಗಿನಿಂದಲೂ ಇರಿಸುಮುರಿಸು ಇತ್ತು,ಫಲಿತಾಂಶ ಬಂದಾಗ ಕೇವಲ 248 ಮತಗಳಿಂದ ಗೆದ್ದಿರುವುದಕ್ಕೆ ಭಾರೀ ಆಕ್ಷೇಪಗಳು ಕೇಳಿಬಂದಿದ್ದವು. ಮರು ಮತಎಣಿಕೆ ಬಗ್ಗೆ ಭಾರೀ ಚರ್ಚೆ ನಡೆದಿತ್ತು, ಇದೀಗ ಸುಪ್ರೀಂ ಕೋರ್ಡ್ ಕೂಡ ಇದನ್ನೇ ಹೇಳಿದೆ.
ಇಂದಿನಿಂದ ನಾಲ್ಕು ವಾರಗಳ ಒಳಗೆ ಮರು ಎಣಿಕೆ ನಡೆಸುವಂತೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ. ಈ ನಿರ್ಧಾರವು ಕಾಂಗ್ರೆಸ್ ಅಭ್ಯರ್ಥಿ ಕೆ.ವೈ. ನಂಜೇಗೌಡರ ಭವಿಷ್ಯ ಅಡಗಿದ್ದು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸ ಒದಗಿಸಿದೆ, ಬಿಜೆಪಿಯ ಮಾಜಿ ಶಾಸಕ ಮಂಜುನಾಥಗೌಡ ಬಣ ಗೆಲುವಿನ ನಿರೀಕ್ಷೆಯಲ್ಲಿದೆ.
ಮಾಜಿ ಶಾಸಕರಾಗಿದ್ದ ಮಂಜುನಾಥ್ ಗೌಡರು, ಚುನಾವಣೆಯ ನಂತರ ಮೂರು ದಿನಗಳಲ್ಲಿ ರಾಜ್ಯ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು,ಮತ ಎಣಿಕೆಯ ಸಮಯದಲ್ಲಿ ದಾಖಲೆಯ ದೋಷಗಳು, ತಪ್ಪು ಎಣಿಕೆ, ಮತ್ತು ಅನಧಿಕೃತ ವ್ಯಕ್ತಿಗಳ ಪ್ರವೇಶ ಇದೆ ಎಂದು ಆರೋಪ ಮಾಡಿದ್ದರು.
ಜೊತೆಗೆ, ಎಣಿಕೆಯ ವೀಡಿಯೋ ದಾಖಲೆಗಳನ್ನು ಚುನಾವಣಾ ಅಧಿಕಾರಿಗಳು ಒದಗಿಸಲಾಗಲಿಲ್ಲ ಎಂದು ಆರೋಪಿಸಿದ್ದರು. ಹೈಕೋರ್ಟ್ ಈ ಅರ್ಜಿಯನ್ನು ಪರಿಗಣಿಸಿ, ಚುನಾವಣೆಯನ್ನು ರದ್ದುಗೊಳಿಸಿ ಮರು ಎಣಿಕೆಗೆ ಆದೇಶಿಸಿತು. ಜೊತೆಗೆ, ನಂಜೇಗೌಡರ ಶಾಸಕ ಸ್ಥಾನವನ್ನು ಅಸಿಂಧುಗೊಳಿಸಿ, ನಾಲ್ಕು ವಾರಗಳ ತಡೆಯಾಜ್ಞೆ ನೀಡಿತು.
ಹೈಕೋರ್ಟ್‌ನ ನ್ಯಾಯಾಧೀಶ ಆರ್. ದೇವದಾಸ್ ಅವರ ನೇತೃತ್ವದ ತೀರ್ಪು ವಿಭಾಗವು, ಚುನಾವಣಾ ಸಂಬಂಧಿತ ಕಾನೂನುಗಳನ್ನು ಉಲ್ಲಂಘಿಸಲಾಗಿದೆ ಎಂದು ತೀರ್ಪು ನೀಡಿತು.
ಚುನಾವಣಾ ಆಯುಕ್ತರಿಗೆ ಮತಗಳನ್ನು ಮರು ಎಣಿಕೆ ಮಾಡಿ, ಹೊಸ ಫಲಿತಾಂಶವನ್ನು ಘೋಷಿಸುವಂತೆ ಸೂಚಿಸಿತು. ಆದರೆ, ನಂಜೇಗೌಡರ ವಾದವನ್ನು ಗಮನಿಸಿ, ಈ ಆದೇಶವನ್ನು 30 ದಿನಗಳ ಕಾಲ ನಿಲ್ಲಿಸಿತು. ಈ ಸಮಯದಲ್ಲಿ ನಂಜೇಗೌಡರು ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸಬಹುದು ಎಂದು ಅವಕಾಶ ನೀಡಿತು. ಇದರಿಂದ,ಅವರಿಗೆ ಶಾಸಕ ಸ್ಥಾನವು ತಾತ್ಕಾಲಿಕವಾಗಿ ಉಳಿಸಿಕೊಳ್ಳಲು ಸಾಧ್ಯವಾಗಿತ್ತು.
ಸುಪ್ರೀಂ ಕೋರ್ಟ್ ಇದೀಗ ಹೈಕೋರ್ಟ್ ಆದೇಶವನ್ನು ಎತ್ತಿಹಿಡಿದಿದೆ. ಇಂದಿನಿಂದ ನಾಲ್ಕು ವಾರಗಳ ಒಳಗೆ ಮರು ಮತ ಎಣಿಕೆ ನಡೆಸುವಂತೆ ಚುನಾವಣಾ ಆಯುಕ್ತರಿಗೆ ಸೂಚನೆ ನೀಡಿದೆ. ಜೊತೆಗೆ, ಹೈಕೋರ್ಟ್‌ನ ಅಸಿಂಧು ಆದೇಶದ ತಡೆಯಾಜ್ಞೆಯನ್ನು ಮುಂದುವರೆಸಿದೆ. ಮರು ಎಣಿಕೆಯ ನಂತರ ಮಾತ್ರ ಶಾಸಕ ಸ್ಥಾನದ ಬಗ್ಗೆ ನಿರ್ಧಾರ ತೆಗೆದುಕೊಳ್ಳಬೇಕು ಎಂದೂ ಆದೇಶಿಸಿದೆ.
ಎಣಿಕೆಯ ವೀಡಿಯೋ ದಾಖಲೆಗಳ ಕೊರತೆಯಿಂದಾಗಿ ಉಂಟಾದ ಗೊಂದಲವನ್ನು ತಪ್ಪಿಸಲು, ಭವಿಷ್ಯದಲ್ಲಿ ಇಂತಹ ದೋಷಗಳನ್ನು ತಡೆಯುವಂತೆಯೂ ಸೂಚಿಸಿದೆ.