ಮೈಸೂರು: ರಾಜ್ಯದಲ್ಲಿ ಬೆಲೆ ಏರಿಕೆಯಾದರೆ ಮುಖ್ಯಮಂತ್ರಿಯೇ ಕಾರಣ ಎನ್ನುವ ಬಿಜೆಪಿ ನಾಯಕರು ಕೇಂದ್ರದಲ್ಲಿ ಬೆಲೆ ಏರಿಕೆಯಾದ್ರೆ ಮೋದಿ ಅವರ ರಾಜೀನಾಮೆ ಕೇಳುತ್ತಾರಾ ಎಂದು ಕರ್ನಾಟಕ ಪ್ರದೇಶ ಕುರುಬರ ಸಂಘದ ಮಾಜಿ ಅಧ್ಯಕ್ಷ ಬಿ. ಸುಬ್ರಹ್ಮಣ್ಯ
ಪ್ರಶ್ನಿಸಿದ್ದಾರೆ.
ಸಿದ್ದರಾಮಯ್ಯ ಅವರ ಸರ್ಕಾರ ಹಾಲಿನ ದರ ಏರಿಸಿದ್ದಕ್ಕೆ ಬಿಜೆಪಿ ನಾಯಕರು ಬೊಬ್ಬೆ ಹೊಡೆದರು, ಆದರೆ ಆ ಹಣ ರೈತರಿಗೆ ಸೇರುತ್ತಿದೆ. ಈಗ ಕೇಂದ್ರ ಸರ್ಕಾರ ರೈಲಿನ ಟಿಕೆಟ್ ದರ ಏರಿಕೆ ಮಾಡುತ್ತಿದೆ ಈಗ ಕೇಂದ್ರದ ವಿರುದ್ಧ ಬಿಜೆಪಿಗರ ನಿಲುವೇನು? ಇಲ್ಲಿ ಸಿದ್ದರಾಮಯ್ಯರ ರಾಜೀನಾಮೆ ಕೇಳುವವರು ಕೇಂದ್ರದಲ್ಲಿ ಮೋದಿ ಅವರ ರಾಜೀನಾಮೆ ಕೇಳುವರೆ ಎಂದು ಕಾರವಾಗಿ ಸುಬ್ರಮಣ್ಯ ಪ್ರಶ್ನಿಸಿದ್ದಾರೆ.
ಸಿದ್ದರಾಮಯ್ಯ ಅವರು 2ನೇ ಬಾರಿ ಸಿಎಂ ಆಗಿ ಈಗಾಗಲೇ 2 ವರ್ಷ ಯಶಸ್ವಿಯಾಗಿ ಪೂರೈಸಿದ್ದಾರೆ. 569 ಭರವಸೆಗಳಲ್ಲಿ 249 ಭರವಸೆಗಳನ್ನ ಈಡೇರಿಸಿ ಕರ್ನಾಟಕವನ್ನ ಸಮೃದ್ಧಿಯತ್ತ ಕೊಂಡೊಯ್ಯುತ್ತಿದ್ದಾರೆ. ಆದರೆ ಕೇಂದ್ರ ಸರ್ಕಾರ ವರ್ಷದಿಂದ ವರ್ಷಕ್ಕೆ ರಸಗೊಬ್ಬರ, ಅಡುಗೆ ಅನಿಲ, ಪೆಟ್ರೋಲ್, ಡೀಸೆಲ್ ದರ ಏರಿಸುತ್ತಿದೆ. ಈಗ ರೈಲಿನ ಟಿಕೆಟ್ ದರ ಕೂಡ ಏರಿಕೆ ಮಾಡುತ್ತಿದೆ ಇದೆಲ್ಲ ಬಿಜೆಪಿ ನಾಯಕರ ಕಣ್ಣಿಗೆ ಕಾಣುತ್ತಿಲ್ಲವೇ ಎಂದು ಟೀಕಿದ್ದಾರೆ.
ಮಹಿಳೆಯರಿಗೆ 5 ಕೋಟಿ ರೂವರೆಗೆ ಸ್ವಯಂ ಉದ್ಯೋಗಕ್ಕೆ ಸಾಲ ನೀಡುತ್ತೇವೆ. ಇದರಿಂದ ಗ್ರಾಮೀಣ ಮಹಿಳೆಯರಿಗೆ ಅನುಕೂಲ ಆಗಲಿದೆ ಅಂದಿದ್ದರು, ಆದರೆ ಬ್ಯಾಂಕಿನಲ್ಲಿ ನೂರೆಂಟು ಕಂಡಿಷನ್ ಹಾಕುತ್ತಾರೆ, ಗ್ರಾಮೀಣ ಪ್ರದೇಶದಲ್ಲಿ ಬಹಳ ಮಂದಿಗೆ ಉಳಿತಾಯ ಮಾಡುವುದು ಕಷ್ಟ, ಅಂತಹುದರಲ್ಲಿ ಆದಾಯ ತೆರಿಗೆ ಕಟ್ಟಬೇಕು ಅಂತಾರೆ, ಐಟಿ ರಿಟರ್ನ್ಸ್ ಕೇಳ್ತಾರೆ ಅವರೆಲ್ಲ ಇದನ್ನೆಲ್ಲ ಎಲ್ಲಿಂದ ತರಬೇಕು ಎಂದಿದ್ದಾರೆ ಸುಬ್ರಮಣ್ಯ.
ಈಗ ಟೋಲ್ ಪಾಸ್ ವ್ಯವಸ್ಥೆ ಮಾಡಿದ್ದಾರೆ. ಇದು ನಿಯಮಿತ ಪ್ರಯಾಣಿಕರಾಗಿದ್ದವರಿಗೆ ಮಾತ್ರ ಅನುಕೂಲವಾಗುತ್ತದೆ. ಆದರೆ ಗೂಡ್ಸ್, ಟ್ರಾನ್ಸ್‌ಪೋರ್ಟ್‌ಗೆ ಹೇಗೆ ಉಳಿತಾಯ ಆಗುತ್ತದೆ ಎಂಬುದನ್ನ ಹೇಳಲಿ ಎಂದು ಅವರು ಒತ್ತಾಯಿಸಿದ್ದಾರೆ.
ಒಂದು ಟೋಲ್ ಪಾಸ್‌ಗೆ 1 ವರ್ಷ ಅಥವಾ 200 ಟ್ರಿಪ್ ಅಂದಿದ್ದಾರೆ. ಮೈಸೂರು ಬೆಂಗಳೂರು ಎಕ್ಸ್‌ಪ್ರೆಸ್‌ವೇ ನಲ್ಲಿ 2 ಟೋಲ್ ಇದೆ. ಒಮ್ಮೆ ಹೋಗಿ ಬಂದರೆ 4 ಟ್ರಿಪ್ ಮುಗಿದೇ ಹೋಗುತ್ತದೆ, ಇದು ವಾರ್ಷಿಕ ಪಾಸ್ ಹೇಗಾಗುತ್ತದೆ. ರಾಜ್ಯದಲ್ಲಿರುವ ಬಿಜೆಪಿ ನಾಯಕರು ಹಾಗೂ ರಾಜ್ಯದಿಂದ ಕೇಂದ್ರಕ್ಕೆ ಆಯ್ಕೆಯಾದವರು ಮೊದಲು ಈ ಬಗ್ಗೆ ಪ್ರಶ್ನೆ ಮಾಡುವ ನೈತಿಕತೆ ಬೆಳೆಸಿಕೊಳ್ಳಲಿ ಎಂದು ಬಿ ಸುಬ್ರಹ್ಮಣ್ಯ ಸಲಹೆ ನೀಡಿದ್ದಾರೆ.