ಶಾಲಾ ಶುಲ್ಕ, ಬ್ಯಾಗ್ ಶುಲ್ಕ ಹೆಚ್ಚಳಕ್ಕೆ ಪೋಷಕರ ಆಕ್ರೋಶ

ಚಾಮರಾಜನಗರ: ನಗರದ ಸಂತ ಫ್ರಾನ್ಸಿಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಶಾಲಾ ಶುಲ್ಕ ಹೆಚ್ಚಳ ಹಾಗೂ ವಿದ್ಯಾರ್ಥಿಗಳಿಗೆ ನೀಡುವ ಬ್ಯಾಗ್‌ಗಳಿಗೆ ಹೆಚ್ಚುವರಿ ಹಣ ವಸೂಲಿ ಮಾಡಲಾಗುತ್ತಿದೆ ಎಂದು ಪೋಷಕರು ಕಿಡಿಕಾರಿದರು.

ಬುಧವಾರ ಏಕಾಏಕಿ ಪೋಷಕರು ಶಾಲೆಗೆ ಧಾವಿಸಿ ಈ‌ ಬಗ್ಗೆ ಪ್ರಾಂಶುಪಾಲರನ್ನು ತರಾಟೆಗೆ ತೆಗೆದುಕೊಂಡರು.

ಶಾಲೆಯ ಪ್ರಾಂಶುಪಾಲರ ಕೊಠಡಿಗೆ ಆಗಮಿಸಿದ ಪೋಷ ಕರು ಶುಲ್ಕ ಹೆಚ್ಚಳದ ಬಗ್ಗೆ ಪ್ರಶ್ನಿಸಿ‌,ಹೀಗೆ‌ ಧಿಡೀರನೆ ಹೆಚ್ಚಳ ಮಾಡಿದ್ದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ಅಡ್ಮಿಷನ್ ಫಾರಂಗೆ 300 ರೂ. ತೆಗೆದುಕೊಳ್ಳಲಾಗುತ್ತಿದೆ. ಅಲ್ಲದೇ ಶಾಲಾ ಶುಲ್ಕವನ್ನು 3580 ರೂ.ಗಳನ್ನು ಹೆಚ್ಚಳ ಮಾಡಲಾಗಿದೆ. ಅಲ್ಲದೇ ಬ್ಯಾಗ್‌ಗಳಿಗೆ ಹೆಚ್ಚುವರಿ ಶುಲ್ಕ ವಿಧಿಸಲಾಗುತ್ತಿದೆ ಒಂದು ವೇಳೆ ಬ್ಯಾಗ್‌ ಬೇಡ ಎಂದರೆ ಪಠ್ಯಪುಸ್ತಕಗಳನ್ನು ಕೊಡುವುದಿಲ್ಲ ಆದ್ದರಿಂದ ಕಡ್ಡಾಯವಾಗಿ ಬ್ಯಾಗ್‌ಗಳನ್ನು ತೆಗೆದುಕೊಳ್ಳುವ ಅನಿವಾರ್ಯತೆ ಎದುರಾಗಿದೆ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದರು.

ಕಮ್ಯುನಿಟಿ ಇಂಗ್ಲೀಷ್ ಕಲಿಕೆ ಅಂತ ಹೇಳಿ 4500 ರೂ. ಹೆಚ್ಚುವರಿ ಶುಲ್ಕ ವಸೂಲಿ ಮಾಡಲಾಗುತ್ತಿದೆ. ಈ ಸಂಬಂಧ ಜಿಲ್ಲಾಧಿಕಾರಿ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ದೂರು ಸಲ್ಲಿಸಲಾಗುವುದು ಎಂದು ನೊಂದ ಪೋಷಕರು ಎಚ್ಚರಿಸಿದರು.

ಪೋಷಕರು ಹಾಗೂ ಆಡಳಿತ ಮಂಡಳಿ ಚರ್ಚೆಯಿಂದ ಪರಿಸ್ಥಿತಿ ವಿಕೋಪಕ್ಕೆ ಹೋಗಬಹುದೆಂಬುದನ್ನು ಅರಿತು ಸ್ಥಳಕ್ಕೆ ಪಟ್ಟಣ ಠಾಣೆಯ ಪೊಲೀಸರು ಆಗಮಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.