ಮೈಸೂರು, ಏ.6: ದೈವಿ ಪುರುಷನಾದ ರಾಮನ ಬದುಕಿನ ಆದರ್ಶಗಳು ಎಲ್ಲ ಧರ್ಮದ ಯುವಜನರಿಗೆ ಸ್ಫೂರ್ತಿ ಎಂದು
ಶಾಸಕ ಹರೀಶ್ ಗೌಡ ತಿಳಿಸಿದರು.
ಶ್ರೀ ರಾಮನವಮಿ ಪ್ರಯುಕ್ತ ದೇವರಾಜ ಅರಸು ರಸ್ತೆಯಲ್ಲಿರುವ ಆಂಜನೇಯ ಸ್ವಾಮಿ ದೇವಸ್ಥಾನದ ವಿಶೇಷ ಪೂಜೆಯಲ್ಲಿ ಪಾಲ್ಗೊಂಡು ದೇವರ ದರ್ಶನ ಪಡೆದು
ನಂತರ ಭಕ್ತಾದಿಗಳಿಗೆ ಪಾನಕ, ಮಜ್ಜಿಗೆ ವಿತರಿಸಿ ಮಾತನಾಡಿದ ಶಾಸಕರು ಮಾತನಾಡಿದರು.

ರಾಮ ವನವಾಸಕ್ಕೆ ತೆರಳಿದಾಗ ಪತ್ನಿ ಸೀತೆಯೂ ಜೊತೆಯಾಗಿ ಹೋಗುವ ಸನ್ನಿವೇಶ ಎಲ್ಲ ದಂಪತಿಗೆ ಮಾರ್ಗದರ್ಶಿ ಆಗಿದೆ. ಜೀವನದಲ್ಲಿ ಎಷ್ಟೇ ಕಷ್ಟ ಬಂದಾಗಲೂ ಪತಿ- ಪತ್ನಿ ಕೈಜೋಡಿಸಿ ಸಂಸಾರದ ನೌಕೆ ಸಾಗಿಸಬೇಕು ಎಂಬ ಅಮೂಲ್ಯ ಸಂದೇಶ ಅದು ಸಾರುತ್ತದೆ ಎಂದು ತಿಳಿಸಿದರು.
ಜಯಂತಿಗಳು ಮೆರವಣಿಗೆ ಮಾಡುವುದರಿಂದ ಸಾರ್ಥಕ ಆಗುವುದಿಲ್ಲ, ಬದಲಿಗೆ ಮಹನೀಯರ ಆದರ್ಶಗಳನ್ನು ಬದುಕಿನಲ್ಲಿ ಆಚರಣೆಗೆ ತಂದಾಗ ಮಾತ್ರ ಅರ್ಥ ಬರುತ್ತದೆ ಎಂದು ಹೇಳಿದರು.
ಎಲ್ಲರೂ ರಾಮಾಯಣವನ್ನು ನಿತ್ಯ ಪಾರಾಯಣ ಮಾಡಬೇಕು. ಅದರಲ್ಲಿನ ಮಾನವೀಯ ಮೌಲ್ಯಗಳನ್ನು ಎಲ್ಲರೂ ಪಾಲಿಸಬೇಕು ಎಂದು ಹರೀಶ್ ಗೌಡ ಸಲಹೆ ನೀಡಿದರು.

ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ವರ್ಗದವರು, ಪುರೋಹಿತರಾದ ವೆಂಕಟೇಶ್, ಆನಂದ್, ಧ್ಯಾನ್, ಮುಖಂಡರಾದ ರಾಮರಾಜ, ಪುರುಷೋತ್ತಮ್ , ಸತ್ಯ, ಗುರುರಾಜ್, ರವಿಚಂದ್ರ, ಹರೀಶ್ ಗೌಡ, ನಿತಿನ್, ನವೀನ್, ಸುರಿ ಶೆಟ್ಟಿ ಮತ್ತಿತರರು ಹಾಜರಿದ್ದರು.