ಮೈಸೂರು: ಮೈಸೂರಿನ
ಮೂಕಾಂಬಿಕಾ ಸಮೃದ್ದಿ ಬಡಾವಣೆಯಲ್ಲಿ ಭಾರತೀಯ ಸೇನೆಯ ಬಲವರ್ಧನೆಗಾಗಿ ಕಲ್ಯಾಣ ವೃಷ್ಠಿ ಸ್ತವ ಪಾರಾಯಣ ಜತೆಗೆ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.
ಇತ್ತೀಚೆಗೆ ಕಾಶ್ಮೀರದ ಪಹಲ್ಗಾಮ್ ನಲ್ಲಿ ಭಯೋತ್ಪಾದಕರ ದಾಳಿಯಿಂದ ನಡೆದ ಹಿಂದುಗಳ ನರಮೇಧದ ಭಾಗವಾಗಿ ಭಾರತ ಮತ್ತು ಭಯೋತ್ಪಾದಕ ದೇಶ ಪಾಕಿಸ್ತಾನದ ನಡುವೆ ಯುದ್ದ ಸನ್ನೀವೇಶ ಎದುರಾಗಿದ್ದು ಅಂತಹ ಸಂದರ್ಭ ಎದುರಾದಲ್ಲಿ ಭಾರತದ ಸೈನಿಕರಿಗೆ ಶಕ್ತಿ, ಧೈರ್ಯ, ಸ್ಥೈರ್ಯ ಹಾಗೂ ವಿಜಯ ಲಭಿಸಲಿ ಎಂದು ಮೈಸೂರಿನ ಶ್ರೀರಾಂಪುರದ ಮೂಕಾಂಬಿಕಾ ಸಮೃದ್ದಿ ಬಡಾವಣೆಯಲ್ಲಿ ಮೂಕಾಂಬಿಕಾ ಸತ್ಸಂಗ ಬಳಗದಿಂದ ಭಾರತಮಾತೆ ಹಾಗೂ ಶಂಕರಾಚಾರ್ಯರಿಗೆ ಪೂಜೆ ಸಲ್ಲಿಸಲಾಯಿತು.

ಇದೇ ವೇಳೆ ಕಲ್ಯಾಣ ವೃಷ್ಠಿ ಸ್ತವ, ಶಿವ ಪಂಚಾಕ್ಷರ ಸ್ತೋತ್ರ ಹಾಗೂ ಲಕ್ಷ್ಮೀ ನರಸಿಂಹ ಕರಾವಲಂಬ ಸ್ತೋತ್ರಗಳ ಸಾಮೂಹಿಕ ಪಾರಾಯಣ ಮಾಡಿ ಪ್ರಾರ್ಥಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ವಿಶ್ವ ಹಿಂದೂ ಪರಿಷತ್ ಜಿಲ್ಲಾ ಸಹ ಕಾರ್ಯದರ್ಶಿ ಪುನೀತ್ ಜಿ ಕೂಡ್ಲೂರು ಅವರು, ಅಕ್ಷಯ ತದಿಗೆಯ ಈ ದಿನ ಮಹಿಳೆಯರು ಚಿನ್ನ ಬೆಳ್ಳಿಗಳ ಬಗ್ಗೆ ಹೆಚ್ಚು ಒಲವು ತೋರುತ್ತಾರೆ ಆದರೆ ಮೂಕಾಂಬಿಕಾ ಸತ್ಸಂಗದ ಮಹಿಳೆಯರು ಹಾಗೂ ಶ್ರೀನಗರ ಲಲಿತಾ ಸಹಸ್ರನಾಮ ಬಳಗದ ಮಹಿಳೆಯರು ಭಾರತದ ಸೈನಿಕರಿಗೆ ಶಕ್ತಿ ತುಂಬಲಿ,ನಮ್ಮ ಸೈನಿಕರಿಗೆ ವಿಜಯವಾಗಲಿ ಎಂದು ಸಾಮೂಹಿಕ ಸ್ತೋತ್ರ ಪಾರಾಯಣ ಮಾಡುತ್ತಿರುವುದು ಬಹಳ ಸಂತೋಷದ ವಿಷಯ ಎಂದು ಹೇಳಿದರು.
ಅಕ್ಷಯ ತದಿಗೆಯ ಈ ಸ್ತೋತ್ರ ಪಾರಾಯಣದಿಂದ ನಮ್ಮ ದೇಶ ಹಾಗೂ ಸೈನ್ಯಕ್ಕೆ ವಿಜಯವಾಗುವುದು ನಿಶ್ಚಿತ ಹಾಗೂ ಭಾರತಮಾತೆಯು ದುರ್ಗಿ ಅವತಾರದಲ್ಲಿ ಸೈನಿಕರ ಮೂಲಕ ಶತೃ ಸಂಹಾರ ಮಾಡುವುದು ಶತಸಿದ್ಧ ನಿಮ್ಮೆಲ್ಲರ ಪ್ರಾರ್ಥನೆ ಫಲ ಕೊಟ್ಟೇ ಕೊಡುತ್ತದೆ ಅದರಲ್ಲಿ ಅನುಮಾನವೇ ಬೇಡ ಎಂದು ತಿಳಿಸಿದರು.
ಸತ್ಸಂಗದ ಪ್ರಮುಖರಾದ ಶುಭಾ ಅರುಣ್ ಮಾತನಾಡಿ ಭಾರತೀಯರೆಲ್ಲರೂ ಪ್ರತಿ ದಿನ ನಮ್ಮ ದೇಶ ಹಾಗೂ ಸೈನಿಕರಿಗಾಗಿ ಪ್ರಾರ್ಥನೆ ಮಾಡಬೇಕು ಎಂದು ಸಲಹೆ ನೀಡಿದರು.

ಶ್ರೀನಗರ ಲಲಿತಾ ಸಹಸ್ರನಾಮದ ಪ್ರಮುಖರಾದ ಹೇಮಾ ಮಂಜುನಾಥ್ ಮಾತನಾಡಿ ಲಕ್ಷ್ಮೀ ನರಸಿಂಹ ಕರಾವಲಂಬ ಸ್ತೋತ್ರದಲ್ಲಿ ನಾವು ಲಕ್ಷ್ಮೀ ನರಸಿಂಹ ಮಮ ದೇಹಿ ಕರಾವಲಂಬಂ ಎಂದು ಹೇಳುತ್ತೇವೆ ಅಂದರೆ ಲಕ್ಷ್ಮೀ ನರಸಿಂಹ ನನ್ನ ಕೈಯನ್ನು ಹಿಡಿ ಎಂದು ಪ್ರಾರ್ಥನೆ, ಆದರೆ ಇಂದು ಮಮ ದೇಹಿ ಕರಾವಲಂಬಂ ಎಂದರೆ ಮಮ ದೇಶ ಕರಾಲಂಬಂ ಎಂದು ದೇಶದ ಕೈಯನ್ನು ಹಿಡಿ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮೂಕಾಂಬಿಕಾ ಸತ್ಸಂಗದ ಪ್ರಮುಖರು, ಸತ್ಸಂಗ ಬಳಗದ ಸದಸ್ಯರು, ಮೂಕಾಂಬಿಕಾ ಸಮೃದ್ದಿ ಬಡಾವಣೆ ನಿವಾಸಿಗಳು ಹಾಗೂ ಶ್ರೀನಗರ ಲಲಿತಾ ಸಹಸ್ರನಾಮ ಬಳಗದ ಸದಸ್ಯರು ಹಾಜರಿದ್ದರು.