ಸ್ನೇಹಮಯಿ ಕೃಷ್ಣ ವಿರುದ್ಧ ಮತ್ತೊಂದು ದೂರು ದಾಖಲಿಸಿದ ಲಕ್ಷ್ಮಣ್

Spread the love

ಮೈಸೂರು: ಸಿಎಂ ಸಿದ್ದರಾಮಯ್ಯ ಅವರು ಮುಡಾದಿಂದ ಅಕ್ರಮವಾಗಿ ನಿವೇಶನ ಪಡೆದಿದ್ದಾರೆಂದು ದೂರು ನೀಡಿರುವ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ವಿರುದ್ಧ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಮತ್ತೊಂದು ದೂರು ದಾಖಲಿಸಿದ್ದಾರೆ.

ಮೈಸೂರಿನ ಲಕ್ಷ್ಮೀಪುರಂ ಠಾಣೆಗೆ ಬಂದು ಸ್ನೇಹಮಯಿ ಕೃಷ್ಣ ವಿರುದ್ದ ಎಂ.ಲಕ್ಷಣ್‌ ದೂರು ಸಲ್ಲಿಸಿದ್ದಾರೆ.

ಈ ವೇಳೆ ಮಾತನಾಡಿದ ಅವರು, ಸ್ನೇಹಮಯಿ ಕೃಷ್ಣ ರೌಡಿಶೀಟರ್, ಆತನ ಮೇಲೆ 44 ಕೇಸ್ ಗಳಿವೆ ಎಂದು ದೂರಿದರು.

ಆತ ಸಾಮಾಜಿಕ ಜಾಲತಾಣದ ಮೂಲಕ ಸುಳ್ಳು ದಾಖಲೆ ಬಿಡುಗಡೆ ಮಾಡ್ತಿದ್ದಾನೆ. ಸಾರ್ವಜನಿಕ ವಲಯದಲ್ಲಿ ಸಿಎಂ ಸಿದ್ದರಾಮಯ್ಯ ಮೇಲೆ ಕೆಟ್ಟ ಅಭಿಪ್ರಾಯ ಮೂಡಿಸುತ್ತಿದ್ದಾನೆ ಎಂದು ಏಕವಚನದಲ್ಲೇ ಆರೋಪಿಸಿದರು.

ಸಿಎಂ ಪತ್ನಿ ಪಾರ್ವತಿ ಅವರ ಹೆಸರಲ್ಲಿ ಸುಳ್ಳು ದಾಖಲೆ ನೀಡಿದ್ದಾನೆ, ಆತ ಬಿಡುಗಡೆ ಮಾಡಿರುವ ಚಲನ್ ಹಣ ಕಟ್ಟಿರುವ ದಾಖಲೆ ಸುಳ್ಳು,ಆತ ಬಿಡುಗಡೆ ಮಾಡಿರುವ ದಾಖಲೆ ಸುಳ್ಳು ಅಂತಾ ಮುಡಾ ಅಧಿಕಾರಿಗಳೇ ಹೇಳುತ್ತಿದ್ದಾರೆ.ಸ್ನೇಹಮಯಿ ಕೃಷ್ಣನನ್ನ ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿದರು.

ಆತನನ್ನ ಬಂಧಿಸದಿದ್ದರೆ ಪೋಲಿಸ್ ಠಾಣೆ ಮುಂದೆ ಧರಣಿ ಸತ್ಯಾಗ್ರಹ ಮಾಡುತ್ತೇವೆ ಎಂದು ಲಕ್ಷ್ಮಣ್ ಹೇಳಿದರು.

ಸ್ನೇಹಮಯಿ ಕೃಷ್ಣ ವಿರುದ್ಧ 22 ಎಫ್ಐಆರ್ ಕಾಪಿ ದಾಖಲೆ ಬಿಡುಗಡೆ ಮಾಡಿದ ಎಂ.ಲಕ್ಷ್ಮಣ್,ಆತ ರೌಡಿ ಶೀಟರ್, ಕೊಲೆ,ವಂಚನೆ, ಬ್ಲಾಕ್ ಮೇಲ್ ಸೇರಿದಂತೆ ಹಲವು ಕೇಸ್ ಗಳು ಅವನ ಮೇಲೆ ಇವೆ ಆದರೂ ಪೋಲಿಸರು ಆತನನ್ನು ಅರೆಸ್ಟ್ ಮಾಡಲು ಮೀನಾ ಮೇಷ ಎಣಿಸುತ್ತಿದ್ದಾರೆ ಎಂದು ದೂರಿದರು.