ಕೊಳ್ಳೇಗಾಲ: ಧೂಮಪಾನದಿಂದ ಉಂಟಾಗುವ ಹಾನಿಯನ್ನು ಜನರಿಗೆ ತಿಳಿಸಿ ಅದನ್ನು ತ್ಯಜಿಸಲು ಪ್ರೋತ್ಸಾಹಿಸುವ ಸಲಯವಾಗಿ ಪ್ರತಿ ವರ್ಷ ಮೇ 31ರಂದು ವಿಶ್ವ ಆರೋಗ್ಯ ಸಂಸ್ಥೆ ಜಾಗತಿಕ ಧೂಮಪಾನ ವಿರೋಧಿ ದಿನವನ್ನ ಆಚರಿಸುತ್ತದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ಸುನಿತಾ ತಿಳಿಸಿದರು.
ಪಟ್ಟಣದ ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ವಿಶ್ವ ತಂಬಾಕು ವಿರೋಧಿ ದಿನ ಕಾನೂನು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಧೂಮಪಾನದಿಂದ ಅನೇಕ ಜಟಿಲ ರೋಗಗಳು ನಮ್ಮನ್ನು ಕಾಡುತ್ತವೆ. ಕ್ಯಾನ್ಸರ್, ಹೃದಯ ಸಂಬಂಧಿ ಸಮಸ್ಯೆಗಳು, ಶಾಶ್ವಕೋಶ ಸಮಸ್ಯೆಗಳು ಮತ್ತು ಅನೇಕ ಇತರ ಮಾರಕ ಕಾಯಿಲೆಗಳು ಹರಡಿ ವ್ಯಕ್ತಿಯ ಶಕ್ತಿಯನ್ನು ನಾಶಮಾಡುತ್ತದೆ ಮತ್ತು ಕುಟುಂಬದ ಮೇಲೆ ಆರ್ಥಿಕ ಹಾಗೂ ಮಾನಸಿಕ ಬಾದೆ ತರುತ್ತದೆ ಎಂದು ತಿಳಿಹೇಳಿದರು.
ನಾವು ಯುವ ಜನತೆಗೆ ಧೂಮಪಾನದಿಂದ ದೂರವಿರುವ ಮಹತ್ವವನ್ನು ತಿಳಿಸಬೇಕು. ಮಕ್ಕಳಿಗೆ ಯುವ ಜನತೆಗೆ ಆರೋಗ್ಯಕರ ಜೀವನ ಶೈಲಿಯನ್ನು ರೂಪಿಸಲು ಪ್ರೇರಣೆ ನೀಡಬೇಕು ಎಂದು ಕರೆ ನೀಡಿದ ಸುನೀತಾ, ಧೂಮಪಾನದಿಂದ ದೂರವಿರುವುದು ಹೊಸ ತಲೆಮಾರಿಗೆ ಉಜ್ವಲ ಭವಿಷ್ಯವನ್ನು ಒದಗಿಸಬಲ್ಲದು ಎಂದು ತಿಳಿಸಿದರು.

ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವುದು ಕಾನೂನುಬಾಹಿರ. ಇದಕ್ಕೆ ತಪ್ಪಿದರೆ ದಂಡ ವಿಧಿಸಲಾಗುತ್ತದೆ. ಯಾವುದೇ ಮಾಧ್ಯಮದಲ್ಲಿ ತಂಬಾಕು ಉತ್ಪನ್ನಗಳ ನೇರ ಅಥವಾ ಅಪ್ರತ್ಯಕ್ಷ ಜಾಹೀರಾತು ನಿಷೇಧಿಸಲಾಗಿದೆ.18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ತಂಬಾಕು ಉತ್ಪನ್ನಗಳನ್ನು ಮಾರಲು ನಿರ್ಬಂಧಿಸಲಾಗಿದೆ ಶಾಲಾ-ಕಾಲೇಜುಗಳ 100 ಮೀಟರ್ ವ್ಯಾಪ್ತಿಯಲ್ಲಿ ತಂಬಾಕು ಮಾರಾಟ ನಿಷೇಧ, ತಂಬಾಕು ಉತ್ಪನ್ನಗಳ ಪ್ಯಾಕಿಂಗ್ ಮೇಲೆ ಆರೋಗ್ಯ ಎಚ್ಚರಿಕೆ ಹಾಗೂ ಭೀತಿದಾಯಕ ಚಿತ್ರಗಳನ್ನು ಹೊಂದಿರಬೇಕು ಪ್ಯಾಕಿಂಗ್ ಮೇಲೆ ಎಚ್ಚರಿಕೆಗಳು ದೃಶ್ಯ ಮತ್ತು ಓದಲು ಅನುಕೂಲವಾಗಿರಬೇಕು ಎಂದು ತಿಳಿಸಿದರು.
ಈ ಕಾಯಿದೆ ನಿಯಮಗಳನ್ನು ಉಲ್ಲಂಘಿಸಿದವರಿಗೆ ರೂ 200 ರಿಂದ ಹೆಚ್ಚು ದಂಡ ಅಥವಾ ಜೈಲು ಶಿಕ್ಷೆ ವಿಧಿಸಬಹುದಾಗಿದೆ. ಸಾರ್ವಜನಿಕ ಆರೋಗ್ಯ ರಕ್ಷಣೆ ಯುವ ಜನತೆಗೆ ತಂಬಾಕು ವ್ಯಸನದಿಂದ ದೂರವಿರಿಸಬೇಕು. ತಂಬಾಕು ಉತ್ಪನ್ನಗಳ ಬಳಕೆ ಕಡಿಮೆ ಮಾಡಬೇಕು ಎಂದು ಸಲಹೆ ನೀಡಿದರು.
ತಾಲೂಕು ಆರೋಗ್ಯ ಅಧಿಕಾರಿ ಡಾ. ಎನ್ ಗೋಪಾಲ್ ಮಾತನಾಡಿ ತಂಬಾಕು ಉತ್ಪನ್ನಗಳ ಸೇವನೆಯಿಂದ ಆಗುತ್ತಿರುವ ಸಮಸ್ಯೆಗಳನ್ನು ಪರಿಗಣಿಸಿ ತಂಬಾಕು ಉತ್ಪಾದನೆ ಸರಬರಾಜು ಮತ್ತು ಮಾರಾಟದ ಮೇಲೆ ನಿಯಂತ್ರಣ ಹೇರಲು ಭಾರತ ಸರ್ಕಾರ 2003 ರಲ್ಲಿ cotpa ಕಾಯ್ದೆಯನ್ನು ಜಾರಿಗೆ ತಂದಿತು ಎಂದು ಹೇಳಿದರು.
ವಕೀಲರಾದ ಚಿನ್ನರಾಜು ಎಸ್ ಅವರು ಮಾತನಾಡಿ ಸೆಕ್ಷನ್ ನಾಲ್ಕರ ಪ್ರಕಾರ ಯಾವುದೇ ವ್ಯಕ್ತಿ ಕಚೇರಿಗಳು, ಆಸ್ಪತ್ರೆಗಳು, ರೆಸ್ಟೋರೆಂಟ್ಗಳು, ರೈಲ್ವೆ ನಿಲ್ದಾಣಗಳು, ಬಸ್ ನಿಲ್ದಾಣಗಳು, ಬೇಕರಿ, ಟೀ ಸ್ಟಾಲ್, ಕೋರ್ಟ್ ಆವರಣ, ಹೋಟೆಲ್, ಸಾರ್ವಜನಿಕ ಗ್ರಂಥಾಲಯಗಳು ಇತ್ಯಾದಿ, ಸ್ಥಳಗಳಲ್ಲಿ ಧೂಮಪಾನ ಮಾಡಲು ಅವಕಾಶವಿಲ್ಲ ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ಮಾಡುವುದು ಕಂಡು ಬಂದರೆ ಹತ್ತಿರದ ಪೊಲೀಸ್ ಠಾಣೆಗೆ ದೂರು ನೀಡಬಹುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ವಕೀಲರ ಸಂಘದ ಅಧ್ಯಕ್ಷರಾದ ಸಿ ರವಿ, ಖಜಾಂಚಿ ರೋಹಿತಶ್ವ, ಹಿರಿಯ ವಕೀಲರಾದ ಮಲ್ಲಿಕಾರ್ಜುನ. ಎಂ, ವೈದ್ಯಾಧಿಕಾರಿಯಾದ ಲೋಹಿತ್, ಮರಿಯಪ್ಪ ರೊಟ್ಟಿ ಮತ್ತಿತರರು ಹಾಜರಿದ್ದರು.