ಸಿಎಂ‌ ತವರು ಜಿಲ್ಲೆಯಲ್ಲೆ ಅಂಬೇಡ್ಕರ್ ಭಾವಚಿತ್ರ ವಿರೂಪ:ಆರ್ ಡಿ ಎಂ ಎಸ್ ಪ್ರತಿಭಟನೆ

Spread the love

ಮೈಸೂರು: ಸಿದ್ದರಾಮಯ್ಯ ಅವರ ತವರು ಜಿಲ್ಲೆಯಲ್ಲೇ‌ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರವನ್ನು ಕಿಡಿಗೇಡಿಗಳು ವಿರೂಪಗೊಳಿಸಿ ವಿಕೃತಿ ಮೆರೆದಿದ್ದು ರಾಜ್ಯ ದ್ರಾವಿಡ ಮಹಾಸಭಾ ಸದಸ್ಯರು ಸಿಡಿದೆದ್ದಿದ್ದಾರೆ.

ಮೈಸೂರು ತಾಲೂಕು ಕಡಕೊಳ ಬಳಿಯ ಸಿಂಧುವಳ್ಳಿ ಗ್ರಾಮದಲ್ಲಿ ಮಧ್ಯರಾತ್ರಿ ಯಾರೋ ಕಿಡಿಗೇಡಿಗಳು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರವನ್ನು ವಿರೂಪಗೊಳಿಸಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ರಾಜ್ಯ ದ್ರಾವಿಡ ಮಹಾಸಭಾ ರಾಜ್ಯಾಧ್ಯಕ್ಷ ಅಶೋಕಪುರಂ ಶ್ರೀನಿವಾಸ್ ಮತ್ತು ಅವರ ಸದಸ್ಯರು ಬೆಂಬಲಿಗರು ಸಿಂಧುವಳ್ಳಿ ಗ್ರಾಮಕ್ಕೆ ಧಾವಿಸಿ ಘಟನೆಗೆ ತೀವ್ರ ಖಂಡನೆ ವ್ಯಕ್ತಪಡಿಸಿದರು.

ಇಡೀ ಗ್ರಾಮದ ಜನತೆ ಹಾಗೂ ಅಂಬೇಡ್ಕರ್ ಸಂಘಟನೆಗಳ ಸದಸ್ಯರು ಯುವ ಸಂಘಟನೆಗಳ ಸದಸ್ಯರು ಅಶೋಕಪುರಂ ಶ್ರೀನಿವಾಸ್ ಅವರ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ಘಟನೆಯನ್ನು ಖಂಡಿಸಿ ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಮಾತನಾಡಿದ ಅಶೋಕಪುರಂ ಶ್ರೀನಿವಾಸ್ ಅವರು ನಮ್ಮ ದೇಶಕ್ಕೆ ಅತ್ಯುತ್ತಮವಾದ ಸಂವಿಧಾನವನ್ನು ಕೊಟ್ಟ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರವನ್ನು ಹರಿದು ಕಿಡಿಗೇಡುಗಳು ವಿಕೃತಿ ಮೆರೆದಿದ್ದಾರೆ.ಇಂತಹುದನ್ನು ಸಹಿಸಲು ಸಾಧ್ಯ ವಿಲ್ಲ,ನಾವು ಕೈಕಟ್ಟಿ ಕೂರುವುದಿಲ್ಲ ಎಂದು ಕಠಿಣ ಎಚ್ಚರಿಕೆ ನೀಡಿದರು.

ಕೂಡಲೇ ಆರೋಪಿಗಳನ್ನು ಪತ್ತೆ ಹಚ್ಚಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆ ವಿಷಯದಂತೆ ಜೆಡಿಎಸ್ ಶಾಸಕ ಜಿ.ಟಿ ದೇವೇಗೌಡ ಸ್ಥಳಕ್ಕೆ ಧಾವಿಸಿ ಪ್ರತಿಭಟನಾ ನಿರತರನ್ನು ಸಮಾಧಾನ ಪಡಿಸಲು ಯತ್ನಿಸಿದರು.

ನಂತರ ಜಿಲ್ಲಾಧಿಕಾರಿ ಲಕ್ಷ್ಮಿಕಾಂತ ರೆಡ್ಡಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ಭೇಟಿ ನೀಡಿ ಪರಿಶೀಲಿಸಿ ಮುಖಂಡರುಗಳಿಂದ ಮಾಹಿತಿ ಪಡೆದರು.

ಯಾವುದೇ‌ ಅಹಿತಕರ‌ ಘಟನೆ ನಡೆಯದಂತೆ ಪೊಲೀಸ್‌ ಬಂದೋಬಸ್ತ್ ಮಾಡಲಾಗಿತ್ತು.