ಮೈಸೂರು: ಶಾಶ್ವತ ಚಿತ್ರಾತ್ಮಕ ಮುದ್ರೆಗಳು ಪ್ರವಾಸಿಗರನ್ನು ಆಕರ್ಷಿಸುವ ಜೊತೆಗೆ ಆ ಸ್ಥಳದ ಪ್ರಾಮುಖ್ಯತೆಯನ್ನು ಜಗತ್ತಿಗೆ ಪ್ರಚುರ ಪಡಿಸುತ್ತವೆ ಎಂದು ಮೈಸೂರು ಅಂಚೆ ವಿಭಾಗದ ಹಿರಿಯ ಅಂಚೆ ಅಧೀಕ್ಷಕ ಜಿ. ಹರೀಶ್ ತಿಳಿಸಿದರು.
ಮೈಸೂರಿನ ಪ್ರಧಾನ ಅಂಚೆ ಕಚೇರಿಯಲ್ಲಿ ಭಾರತೀಯ ಅಂಚೆ ಹೊರ ತಂದಿರುವ ಮೈಸೂರು ನಗರದ ದೊಡ್ಡ ಗಡಿಯಾರದ (ಸಿಲ್ವರ್ ಜ್ಯುಬಿಲಿ ಕ್ಲಾಕ್ ಟವರ್) ಶಾಶ್ವತ ಚಿತ್ರಾತ್ಮಕ ಮುದ್ರೆಯನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.
ಮೈಸೂರು ದೇಶದ ಪ್ರಮುಖ ಪ್ರವಾಸಿ ತಾಣವಾಗಿದ್ದು ಈ ಶಾಶ್ವತ ಚಿತ್ರಾತ್ಮಕ ಮುದ್ರೆಯು ವಿಶ್ವದ ಪ್ರವಾಸಿಗರಿಗೆ ದೊಡ್ಡ ಗಡಿಯಾರದ ಮಹತ್ವವನ್ನು ತಿಳಿಸುತ್ತದೆ ಎಂದು ಹೇಳಿದರು.
ದೊಡ್ಡಗಡಿಯಾರ ಮೈಸೂರಿನ ಪ್ರಮುಖ ಆಕರ್ಷಣೆಗಳಲ್ಲೊಂದಾಗಿದ್ದು ನಗರದ ಹೆಗ್ಗುರುತಾಗಿದೆ ಎಂದು ಹೇಳಿದ ಮೈಸೂರು ಅಂಚೆವಿಭಾಗದ ಉಪ ಅಧೀಕ್ಷಕ ವಿ.ಎಲ್.ನವೀನ್ ಅವರು ಇನ್ನೆರಡು ವರ್ಷಗಳಲ್ಲಿ ದೊಡ್ಡ ಗಡಿಯಾರ ನಿರ್ಮಾಣವಾಗಿ 100 ವರ್ಷಗಳಾಗಲಿದ್ದು ಅಂಚೆ ಇಲಾಖೆ ವಿಶೇಷ ಲಕೋಟೆ ಅಥವಾ ಚಿತ್ರಿತ ಅಂಚೆ ಕಾರ್ಡ್ ಅನ್ನು ಹೊರತರುವ ಆಶಯವನ್ನು ಹೊಂದಿದೆ ಎಂದು ತಿಳಿಸಿದರು.
ಮೈಸೂರು ಪ್ರಧಾನ ಅಂಚೆಕಚೇರಿಯ ಹಿರಿಯ ಅಂಚೆ ಪಾಲಕ ಸೋಮಯ್ಯ ಅವರು ಮಾತನಾಡಿ ದೊಡ್ಡಗಡಿಯಾರದ ಶಾಶ್ವತ ಚಿತ್ರಾತ್ಮಕ ಮುದ್ರೆಯನ್ನು ಬಿಡುಗಡೆ ಮಾಡುವ ಮೂಲಕ ಅಂಚೆ ಇಲಾಖೆ ಅದರ ಮಹತ್ವವನ್ನು ಮತ್ತಷ್ಟು ಹೆಚ್ಚಿಸಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಲಕ್ಷ್ಮೀಪುರಂ ಅಂಚೆ ಕಚೇರಿಯ ಪ್ರಭಾರ ಅಂಚೆಪಾಲಕರಾದ ಬಿ.ಮಹದೇವಸ್ವಾಮಿ ಹಾಜರಿದ್ದರು. ನಿವೇದಿತಾ ಮಾರುಕಟ್ಟೆ ವ್ಯವಸ್ಥಾಪಕ ಡಾ. ಅಮ್ಮಸಂದ್ರ ಸುರೇಶ್, ರೇಣುಕಾ ಮತ್ತಿತರರು ಹಾಜರಿದ್ದರು.