ರೇಷ್ಮೆ ಸೀರೆಗಳು ಮತ್ತು ಕರಕುಶಲ ವಸ್ತುಗಳ ಮಾರಾಟ ಮಳಿಗೆಗಳ ಮೇಲೆ ದಾಳಿ

Spread the love

ಮೈಸೂರು: ಮೈಸೂರಿನ ಕೆಲವು ರೇಷ್ಮೆ ಸೀರೆಗಳು ಮತ್ತು ಕರಕುಶಲ ವಸ್ತುಗಳ ಮಾರಾಟ ಮಳಿಗೆಗಳಲ್ಲಿ ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಶ್ರೀಗಂಧದ ತುಂಡುಗಳು ಮತ್ತಿತರ ವಸ್ತುಗಳನ್ನು ಅರಣ್ಯಾಧಿಕಾರಿಗಳು ದಾಳಿ ನಡೆಸಿ ವಶಪಡಿಸಿಕೊಂಡಿದ್ದಾರೆ.

ಶ್ರೀಗಂಧದ ಚಕ್ಕೆ, ರಕ್ತಚಂದನದ ತುಂಡುಗಳು ಹಾಗೂ ಶ್ರೀಗಂಧ, ರಕ್ತಚಂದನದ ಪುಡಿಯನ್ನು ಆಕ್ರಮವಾಗಿ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಸಂಗ್ರಹಿಸಿ ಮೈಸೂರಿನ ಅರಣ್ಯ ಸಂಚಾರಿದಳದ ಉಪ ಆರಣ್ಯ ಸಂರಕ್ಷಣಾಧಿಕಾರಿ ಚಂದ್ರಶೇಖರ ಗೌಡ ಪಾಟೀಲ್ ಮತ್ತು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ರುದೇಶ್ ಸಿ ಅವರ ನೇತೃತ್ವದಲ್ಲಿ 2 ತಂಡಗಳನ್ನು ರಚನೆ ಮಾಡಿ ಕಾರ್ಯಾಚರಣೆ ನಡೆಸಲಾಯಿತು.

ಕಾರ್ಯಾಚರಣೆ ವೇಳೆ ಮೈಸೂರು ನಗರದ 4 ಪ್ರತ್ಯೇಕ ರೇಷ್ಮೆ ಸೀರೆಗಳು ಮತ್ತು ಕರಕುಶಲ ವಸ್ತುಗಳ ಮಾರಾಟ ಮಳಿಗೆಗಳಲ್ಲಿ ಶ್ರೀಗಂಧದ ತುಂಡುಗಳು 249,(15.83 ಕೆ.ಜಿ,) ರಕ್ತಚಂದನದ ತುಂಡುಗಳು 537( 25.905 ಕೆ.ಜಿ,) ಶ್ರೀಗಂಧ ಪುಡಿ 4.680 ಕೆ.ಜಿ, ಶ್ರೀಗಂಧದ ಚಕ್ಕೆ 0.730 ಕೆ.ಜಿ ಮತ್ತು ರಕ್ತಚಂದನದ ಪುಡಿ 5.20 ಕೆ.ಜಿ ಯನ್ನು ವಶಪಡಿಸಿಕೊಳ್ಳಲಾಗಿದೆ.

4 ಅಂಗಡಿಗಳ ಮೇಲೆ ಕರ್ನಾಟಕ ಅರಣ್ಯ ಕಾಯಿದೆ 1963 ಹಾಗೂ ಕರ್ನಾಟಕ ಅರಣ್ಯ ನಿಯಮಾವಳಿ 1969 ರಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

ವಲಯ ಅರಣ್ಯಾಧಿಕಾರಿ ಸುರೇಂದ್ರ ಕೆ.
ಉಪ ವಲಯ ಅರಣ್ಯಾಧಿಕಾರಿ ಮುತ್ತುರಾಜು ವಿ, ಉಪ ವಲಯ ಅರಣ್ಯಾಧಿಕಾರಿ ದೇಸಾಯಿ ಯೋಗೇಶ್ವರಿ,
ಗಸ್ತು ಅರಣ್ಯ ಪಾಲಕರಾದ ಕುಮಾರ,
ಕುಮಾರ್ ಆ‌ರ್ ಹಾಗೂ
ರಾಣಿ ಕೆ.ಬಿ,ಉಪ ವಲಯ ಅರಣ್ಯಾಧಿಕಾರಿಗಳಾದ ಹೆಚ್ ರಾಘವೇಂದ್ರ,
ಕನ್ನಿಕಾ ಟಿ.ಸಿ, ಸುಮಲತ ಎ.ಎಂ, ಮೋಹನ್ ಸಿ.ಎಸ್, ಗಸ್ತು ಅರಣ್ಯ ಪಾಲಕರಾದ
ಸಿದ್ದರಾಜಶೆಟ್ಟಿ, ತಿರುಪತಿ ಪೂಜಾರ ಅವರುಗಳು ದಾಳಿಯಲ್ಲಿ ಭಾಗವಹುಸಿದ್ದರು.

ಮೈಸೂರಿನಲ್ಲಿ ಖಾಸಗಿ ಅಂಗಡಿ/ಮಳಿಗೆಗಳಿಗೆ ಶ್ರೀಗಂಧದ ತುಂಡುಗಳು, ಚಿಕ್ಕೆ, ಪುಡಿ, ಎಣ್ಣೆ ಯನ್ನು ಮಾರಾಟ ಮಾಡಲು ಇಲಾಖೆಯಿಂದ ಪರವಾನಿಗೆಯನ್ನು ನೀಡಿರುವುದಿಲ್ಲ ಆದುದರಿಂದ ಸಾರ್ವಜನಿಕರು ಅನಧಿಕೃತ ಅಂಗಡಿ ಮಳಿಗೆಗಳಲ್ಲಿ ಮಾರಾಟ ಮಾಡುವ ಶ್ರೀಗಂಧದ ತುಂಡುಗಳು, ಚಕ್ಕೆ, ಪುಡಿ, ಎಣ್ಣೆ ಯನ್ನು ಖರೀದಿ ಮಾಡಬಾರದು,ಒಂದು ವೇಳೆ ಆಗತ್ಯ ಇದ್ದರೆ ಸರ್ಕಾರಿ ಶ್ರೀಗಂಧದ ಕೋಠಿ, ಆರಣ್ಯ ಭವನ, ಅಶೋಕಪುರಂ ಮೈಸೂರು ಇಲ್ಲಿ ಖರೀದಿ ಮಾಡಬಹುದೆಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.