ಗ್ಯಾರೆಂಟಿಗಳ ಖರ್ಚಿನ ಅಂದಾಜೇ ಗೊತ್ತಿಲ್ಲದೆ ಮಂಡಿಸಿದ ದೋಷಪೂರಿತ ಬಜೆಟ್ : ಮು. ಮ ಚಂದ್ರು

Spread the love

ಬೆಂಗಳೂರು, ಮಾ.7: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮಂಡಿಸಿರುವ ಈ ಸಾಲಿನ ಬಜೆಟ್ ನಲ್ಲಿ ಪಂಚ ಗ್ಯಾರಂಟಿಗಳ ಖರ್ಚಿನ ನಿಖರ ಮೊತ್ತವೇ ಸರಕಾರಕ್ಕೆ ಗೊತ್ತಿಲ್ಲದಂತಾಗಿದೆ ಎಂದು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಡಾ.ಮುಖ್ಯ ಮಂತ್ರಿ ಚಂದ್ರು ಟೀಕಿಸಿದ್ದಾರೆ

ಸಿದ್ದರಾಮಯ್ಯ ಅವರು ತಮ್ಮ ಎರಡನೇ ಅವಧಿಯ ಪ್ರಥಮ ಬಜೆಟ್ ನಲ್ಲಿ ಗ್ಯಾರಂಟಿಗಳಿಗಾಗಿ 17000 ಕೋಟಿ ಎಂದು ಅಂದಾಜು ಮಾಡಿದ್ದರು. ಆದರೆ ಅದು 28,000 ಕೋಟಿ ರೂಪಾಯಿಗಳಿಗೆ ತಲುಪಿತು. ಕಳೆದ ಬಜೆಟ್ ನಲ್ಲಿಯೂ ಸಹ ಗ್ಯಾರೆಂಟಿಗಳಿಗಾಗಿ ಮೀಸಲಿಟ್ಟಿದ್ದ ಹಣಕ್ಕೂ ಖರ್ಚು ಮಾಡಿದ ಹಣಕ್ಕೂ ಶೇ.47 ನಷ್ಟು ಹೆಚ್ಚಾಯಿತು.

ಅಂದರೆ ಈ ಸರ್ಕಾರಕ್ಕೆ ತಾವು ನೀಡುತ್ತಿರುವ ಗ್ಯಾರಂಟಿಗಳಿಗೆ ಎಷ್ಟು ಖರ್ಚಾಗುತ್ತದೆ ಎಂಬ ಪ್ರಾಥಮಿಕ ಅಧ್ಯಯನವೇ ಇಲ್ಲದಂತಹ ಕೇವಲ ವೋಟ್ ಬ್ಯಾಂಕ್ ಗಾಗಿ ಮಾತ್ರ ಘೋಷಿಸಿರುವಂತಹ ಯೋಜನೆ ಎಂಬುದು ಸಾಬೀತಾಗುತ್ತಿದೆ.

ಇದರಿಂದಾಗಿ ಬಜೆಟ್ ಮೀಸಲಿಟ್ಟಿರುವ ಮೊತ್ತಕ್ಕೂ ಖರ್ಚಾಗುವ ಮುತ್ತಕ್ಕೂ ಅಜಗಜಾಂತರ ವ್ಯತ್ಯಾಸವಾಗಿ ಸರ್ಕಾರವು ಆರ್ಥಿಕ ಕೊರತೆಯಿಂದಾಗಿ ತತ್ತರಿಸುತ್ತಿದೆ ಎಂದು ಮುಖ್ಯಮಂತ್ರಿ ಚಂದ್ರು ಟೀಕಿಸಿದ್ದಾರೆ.

ರಾಜ್ಯದ ಬೃಹತ್ ಹಾಗೂ ಮಧ್ಯಮ ನೀರಾವರಿ ಇಲಾಖೆಗೆ 22 ಸಾವಿರ ಕೋಟಿ ರೂಪಾಯಿಗಳ ಅನುದಾನ ಮೀಸಲಿಟ್ಟಿದ್ದಾರೆ. ಆದರೆ ಈ ಇಲಾಖೆಯಲ್ಲಿ ಈಗಾಗಲೇ 31,000 ಕೋಟಿ ರೂಗಳನ್ನು ಗುತ್ತಿಗೆದಾರರಿಗೆ ಬಾಕಿ ಉಳಿಸಿಕೊಂಡಿದ್ದಾರೆ. ಈ ವರ್ಷವೂ ಸಹ ಯಾವುದೇ ನಯಾ ಪೈಸೆ ನೀರಾವರಿ ಯೋಜನೆಗಳು ಆಗುವುದಿಲ್ಲ ಎಂಬುದು ಇದರಿಂದ ಸಾಬೀತಾಗುತ್ತದೆ. ಇದೊಂದು ಬೋಗಸ್ ಬಜೆಟ್ ಎಂದು ಹೇಳಿದ್ದಾರೆ

ಈ ವರ್ಷವೂ ಸಹ 1,06,000 ಕೋಟಿ ರೂಪಾಯಿಗಳ ಸಾಲವನ್ನು ಪಡೆದಿದ್ದಾರೆ. ರಾಜ್ಯದ ಸಾಲದ ಮೊತ್ತ ಈಗ 4,73, 477 ಕೋಟಿ ರೂಪಾಯಿಗಳಾಗಿದೆ. ಪ್ರತಿ ವರ್ಷ ಕೇವಲ ಬಡ್ಡಿ ಪಾವತಿಗಾಗಿ 50,000 ಕೋಟಿ ರೂಪಾಯಿಗಳನ್ನು ನೀಡಬೇಕಾಗಿರುವುದು ರಾಜ್ಯದ ಪಾಲಿನ ಜನತೆಯ ದುರ್ದೈವದ ಸಂಗತಿ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಸರ್ಕಾರದಿಂದ ಬರಬೇಕಾಗಿದ್ದ ತೆರಿಗೆ ಪಾಲು ಸರಿಯಾಗಿ ಬಂದಿಲ್ಲವೆಂದು ಪದೇ ಪದೇ ರಾಜ್ಯ ಕಾಂಗ್ರೆಸ್ ಸರ್ಕಾರ ಆರೋಪ ಮಾಡುತ್ತಲೇ ಇದೆ. ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ನಡೆಸದೆ ಇರುವುದರಿಂದ ವಾಯು ಮಾಲಿನ್ಯ ನಿಯಂತ್ರಣಕ್ಕಾಗಿ, ಆಸ್ತಿ ತೆರಿಗೆಗಳ ಹೆಚ್ಚಳಕ್ಕಾಗಿ, ನಗರಗಳ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರದಿಂದ ನೀಡುವ ಮೊತ್ತಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಈ ಕೂಡಲೇ ಎಲ್ಲಾ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ನಡೆಸಬೇಕಾಗಿದೆ ಎಂದು ಮಾಧ್ಯಮ ಪ್ರಕಟಣೆಯಲ್ಲಿ ಚಂದ್ರು ತಿಳಿಸಿದ್ದಾರೆ.

ಬೆಂಗಳೂರು ನಗರ ಅಭಿವೃದ್ಧಿಗಾಗಿ 7000 ಕೋಟಿ ರೂಪಾಯಿಗಳನ್ನು ಮೀಸಲಿಟ್ಟಿದ್ದಾರೆ. ಆದರೆ ಸ್ಥಳೀಯ ಆಡಳಿತ ಸಂಸ್ಥೆಯಾದ ಬಿಬಿಎಂಪಿಗೆ ಇದನ್ನು ನೇರವಾಗಿ ನೀಡದೆ ವಿಶೇಷ ಉದ್ದೇಶತ ವಾಹನ ಎಂದು ಪ್ರತ್ಯೇಕಿಸಿ ಈ ಮೂಲಕ ನೇರವಾಗಿ ಭ್ರಷ್ಟಾಚಾರಕ್ಕೆ ಅನುವು ಮಾಡಿಕೊಡುತ್ತಿರುವುದು ಮೇಲ್ನೋಟಕ್ಕೆ ಕಂಡುಬರುತ್ತದೆ.

ವೃತ್ತಿಪರ ತೆರಿಗೆಯನ್ನು 200 ರೂ ಗಳಿಂದ ಏಕಾಏಕಿ 300 ರೂ.ಗಳಿಗೆ ಏರಿಸಿರುವುದು ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳಲ್ಲಿ ಕೆಲಸ ಮಾಡುತ್ತಿರುವ ಕೋಟ್ಯಾಂತರ ಕಾರ್ಮಿಕರ ಭವಿಷ್ಯಕ್ಕೆ ಮಾರಕವಾಗಿದೆ ಎಂದು ಆತಂಕ ಪಟ್ಟಿದ್ದಾರೆ‌

23ರ ಬಜೆಟ್ ನಲ್ಲಿ ಶಿಕ್ಷಣ ಕ್ಷೇತ್ರಕ್ಕೆ 14.8 % ಅನುದಾನವನ್ನು ಮೀಸಲು ಇಡಲಾಗಿತ್ತು.
ಆದರೆ ಸಿದ್ದು ನೇತೃತ್ವದ ಕಾಂಗ್ರೆಸ್ ಸರ್ಕಾರವು ಅನುಕ್ರಮವಾಗಿ ಕಳೆದ ಮೂರು ಬಜೆಟ್ ಗಳಿಂದ 11 % , 11.7% ಈಗ ಕೇವಲ 10% ಗೆ ಇಳಿಸಿರುವುದು ನಿಜಕ್ಕೂ ಶಿಕ್ಷಣ ಕ್ಷೇತ್ರಕ್ಕೆ ಇವರಿಗಿರುವ ತಾತ್ಸಾರ ಮನೋಭಾವನೆ ಎದ್ದು ಕಾಣುತ್ತದೆ.

ಕಳೆದ ಬಜೆಟ್ ನಲ್ಲಿ 4.9% ನಷ್ಟು ಇದ್ದ ಅನುದಾನವನ್ನು ಈಗ ಕೇವಲ 0.1% ನಷ್ಟು ಏರಿಸಿ 4332 ರೂಗಳನ್ನು ಘೋಷಿಸಿದ್ದಾರೆ. ಆನೆಗೆ ಅರೆಕಾಸಿನ ಮಜ್ಜಿಗೆ ಎಂಬಂತೆ ಈಗಾಗಲೇ ಅನೇಕ ಜಿಲ್ಲೆಗಳಲ್ಲಿ ಅನುದಾನದ ಕೊರತೆಯಿಂದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ ಮೂಲಭೂತ ಸೌಕರ್ಯಗಳು ಯಾವುದೂ ಇಲ್ಲದರ ಪ್ರಾಣವನ್ನು ಒತ್ತೆ ಇಡುವಂತಹ ಪರಿಸ್ಥಿತಿ ಇದೆ ಎಂದು ಜರಿದಿದ್ದಾರೆ.

ರಾಜ್ಯ ಸರ್ಕಾರವು ಈಗಾಗಲೇ ಗ್ಯಾರಂಟಿ ಯೋಜನೆಗಳಿಂದಾಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವಾಗ ಬೆಂಗಳೂರಿನ ಸುರಂಗ ಮಾರ್ಗ ನಿರ್ಮಾಣಕ್ಕೆ 40,000 ಕೋಟಿ ರೂಪಾಯಿಗಳ ಬೃಹತ್ ಮೊತ್ತವನ್ನು ನೀಡುತ್ತಿರುವುದು ನಿಜಕ್ಕೂ ಹಾಸ್ಯಾಸ್ಪದ ಎಂದು ಮುಖ್ಯ ಮಂತ್ರಿ ಚಂದ್ರು ಲೇವಡಿ ಮಾಡಿದ್ದಾರೆ.

ಸಿದ್ದರಾಮಯ್ಯನವರು ಅನ್ನ ರಾಮಯ್ಯ ಎಂದು ಪ್ರಖ್ಯಾತವಾಗಿರುವ ಅನ್ನಭಾಗ್ಯ ಯೋಜನೆಯನ್ನು ಕೃಷಿ ಇಲಾಖೆಗೆ ನೀಡುವ ಅನುದಾನದಲ್ಲಿ ಸೇರಿಸಿದ್ದಾರೆ. ರೈತರು, ಯಂತ್ರೋಪಕರಣ , ಬೀಜ ,ರಸಗೊಬ್ಬರ , ಟ್ರ್ಯಾಕ್ಟರ್ ಸೇರಿದಂತೆ ಇನ್ನಿತರ ಕೃಷಿ ಚಟುವಟಿಕೆಗಳಿಗೆ ಬೇಕಾಗುವಂತಹ ಸಾಮಗ್ರಿಗಳ ಸಬ್ಸಿಡಿಗಾಗಿ ಈ ಇಲಾಖೆಗೆ ಒದಗಿಸುವ ಅನುದಾನವನ್ನು ಉಪಯೋಗಿಸಬೇಕಿದೆ. ಆದರೆ ಅನ್ನಭಾಗ್ಯ ಯೋಜನೆಗೆ ಮಾತ್ರವೇ 10,000 ಕೋಟಿ ರೂಪಾಯಿಗಳು ಖರ್ಚಾಗುತ್ತದೆ. ರೈತರ ಯಂತ್ರೋಪಕರಣಗಳ ಖರೀದಿಗೆ ಯಾವುದೇ ಸಬ್ಸಿಡಿ ದೊರಕುವುದಿಲ್ಲ. ರಾಜ್ಯದ ಕೋಟ್ಯಾಂತರ ರೈತರುಗಳಿಗೆ ಮಾಡುತ್ತಿರುವ ಮಹಾ ಮೋಸ ಎಂದು ಹೇಳಬಹುದು ಎಂದು ಮುಖ್ಯ ಮಂತ್ರಿ ಚಂದ್ರು‌ ವಿಶ್ಲೇಷಿಸಿದ್ದಾರೆ

ಈ ಬಜೆಟ್ ರಾಜ್ಯದ ರೈತರು, ಜನಸಾಮಾನ್ಯರಿಗೆ ಯಾವುದೇ ವಿಶೇಷವಾದಂತಹ ಅನುಕೂಲಗಳನ್ನು ನೀಡಲಾಗದಂತಹ ದೋಷಪೂರಿತ ಬಜೆಟ್ ಆಗಿದೆ ಎಂದು ಅವರು ಟೀಕಿಸಿದ್ದಾರೆ.