ನವದೆಹಲಿ: ಆಕ್ಸಿಯಂ-4 ಅಂತರಿಕ್ಷ ಕಾರ್ಯಕ್ರಮದ ಭಾಗವಾಗಿ ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಸೇರಿದಂತೆ ನಾಲ್ವರು ಗಗನಯಾತ್ರಿಗಳನ್ನು ಹೊತ್ತ ಸ್ಪೇಸ್‌ಎಕ್ಸ್‌ನ ಫಾಲ್ಕನ್-9 ರಾಕೆಟ್ ಫ್ಲಾರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಯಶಸ್ವಿಯಾಗಿ ನಭಕ್ಕೆ ಹಾರಿತು.
ಬುಧವಾರ ಮಧ್ಯಾಹ್ನ 12.3ರ ಸುಮಾರಿಗೆ ಆಕ್ಸಿಯಂ-4 ನೌಕೆ ಯಶಸ್ವಿಯಾಗಿ ಉಡಾವಣೆ ಆಯಿತು.
ಅಮೆರಿಕದ ಕಮಾಂಡರ್ ಪೆಗ್ಗಿ ವಿಟ್ಸನ್ ಈ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದಾರೆ.
ಭಾರತದ ಐಎಎಫ್ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಮಿಷನ್ ಪೈಲಟ್ ಆಗಿ ಮತ್ತು ಹಂಗೇರಿಯನ್ ಗಗನಯಾತ್ರಿ ಟಿಬೋರ್ ಕಾಪು ಮತ್ತು ಪೋಲೆಂಡ್‌ನ ಸ್ಲಾವೋಸ್ಜ್ ಉಜ್ನಾನ್ಸ್ಕಿ-ವಿಸ್ನಿವ್ಸ್ಕಿ ಮಿಷನ್ ತಜ್ಞರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಶುಭಾಂಶು ಶುಕ್ಲಾ ಅವರ ತಂದೆ-ತಾಯಿ ಪುತ್ರನಿಗೆ ಶುಭ ಹಾರೈಸಿದರು. ನೌಕೆ ಯಶಸ್ವಿಯಾಗಿ ಉಡಾವಣೆ ಆಗುತ್ತಿದ್ದಂತೆ ಖುಷಿ ವ್ಯಕ್ತಪಡಿಸಿದರು.
ಆಕ್ಸಿಯಮ್ -4 ಗಗನಯಾತ್ರಿಗಳು ಸುಮಾರು 28 ಗಂಟೆಗಳ ಕಕ್ಷೆಯ ಪ್ರಯಾಣದ ನಂತರ ನಾಳೆ ಸಂಜೆ 4.30 ರ ಸುಮಾರಿಗೆ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ತಲುಪಲಿದ್ದಾರೆ.
1984 ರಲ್ಲಿ ಸೋವಿಯತ್ ಕಾರ್ಯಾಚರಣೆಯ ಭಾಗವಾಗಿ ವಿಂಗ್ ಕಮಾಂಡರ್ ರಾಕೇಶ್ ಶರ್ಮಾ ಬಾಹ್ಯಾಕಾಶ ಪ್ರಯಾಣ ಮಾಡಿದ ನಾಲ್ಕು ದಶಕಗಳ ನಂತರ, ಗ್ರೂಪ್ ಕ್ಯಾಪ್ಟನ್ ಶುಕ್ಲಾ ಬಾಹ್ಯಾಕಾಶಕ್ಕೆ ಪ್ರಯಾಣಿಸಿರುವ ಎರಡನೇ ಭಾರತೀಯ ಗಗನಯಾತ್ರಿಯಾಗಿದ್ದಾರೆ