ಶ್ರೀರಂಗಪಟ್ಟಣದಲ್ಲಿ ದಸರಾ ಗೊಂಬೆಗಳ ವಿಶಿಷ್ಟ ಪ್ರದರ್ಶನ

Spread the love

ಶ್ರೀರಂಗಪಟ್ಟಣ: ದಸರಾ ಉತ್ಸವಕ್ಕೂ ಬೊಂಬೆಗಳ ಪ್ರದರ್ಶನಕ್ಕೂ ಶತಮಾನಗಳ ನಂಟಿದ.

ಶ್ರೀರಂಗಪಟ್ಟಣದ ಹಳೇ ಅಂಚೆ ಕಚೇರಿ ಬೀದಿಯ ನಾಗರತ್ನಮ್ಮ ನಾರಾಯಣಭಟ್ಟ ಭವನದಲ್ಲಿ ಏರ್ಪಡಿಸಿರುವ ದಸರಾ ಬೊಂಬೆಗಳ ಪ್ರದರ್ಶನ ಜನರನ್ನು ಆಕರ್ಷಿಸುತ್ತಿದೆ.

ಪಟ್ಟಣದ ಲಕ್ಷ್ಮಿ ದೇವಾಲಯದ ಪ್ರಧಾನ ಅರ್ಚಕ ಕೃಷ್ಣಭಟ್ ಮತ್ತು ಮಂಗಳಾ ದಂಪತಿ ಈ ಬೊಂಬೆಗಳ ಪ್ರದರ್ಶನವನ್ನು ಏರ್ಪಡಿಸಿದ್ದಾರೆ.

ಸುಮಾರು 3 ಸಾವಿರಕ್ಕೂ ಹೆಚ್ಚು ಬೊಂಬೆಗಳನ್ನು ಓರಣವಾಗಿ ಜೋಡಿಸಲಾಗಿದೆ. ಮೂರು ದಿನಗಳ ಸತತ ಪರಿಶ್ರಮದಿಂದ ಬೊಂಬೆಗಳನ್ನು ಜೋಡಿಸಿದ್ದಾರೆ.

ದೇಶದ ವಿವಿಧ ರಾಜ್ಯಗಳ ಜಾನಪದ ಕಲೆಗಳನ್ನು ಮತ್ತು ಸಂಸ್ಕೃತಿಯನ್ನು ಈ ಬೊಂಬೆಗಳು ಬಿಂಬಿಸುತ್ತಿವೆ.

ದಸರಾ ಉತ್ಸವದಲ್ಲಿ ಜಂಬೂ ಸವಾರಿಯ ಮೆರವಣಿಗೆ, ಮಂಗಳ ವಾದ್ಯ, ಸಪ್ತ ಮಾತೃಕೆಯರು, ನವ ದುರ್ಗೆಯರು, ಶ್ರೀನಿವಾಸ ಕಲ್ಯಾಣ, ವೈಕುಂಠ, ಕಂಚಿ ಗರುಡೋತ್ಸವ, ಶಿವ- ಪಾರ್ವತಿ, ಲಕ್ಷ್ಮಿನಾರಾಯಣ, ವಿಷ್ಣುವಿನ ದಶಾವತಾರ, ರಾಜಸ್ತಾನಿ ವಾದ್ಯವೃಂದ, ಸಿಪಾಯಿ, ಮೈಸೂರಿನ ಚನ್ನಯ್ಯ ಕುಸ್ತಿ ಅಖಾಡವನ್ನು ಬಿಂಬಿಸುವ ಬೊಂಬೆಗಳು ಮತ್ತೆ ಮತ್ತೆ ನೋಡಬೇಕೆನಿಸುತ್ತವೆ. ಶ್ರೀಕೃಷ್ಣ ಕುಟೀರವಂತೂ ನೋಡುಗರಲ್ಲಿ ಭಕ್ತಿ, ಭಾವ ಮೂಡಿಸುತ್ತದೆ.

ಆಧುನಿಕತೆಯನ್ನು ಬಿಂಬಿಸುವ ಕ್ರಿಕೆಟ್ ಕ್ರೀಡಾಂಗಣ, ಲಲನೆಯರ ಜಲಕ್ರೀಡೆ, ಹಣ್ಣು ಮತ್ತು ತರಕಾರಿ ಅಂಗಡಿ, ದಿನಸಿ ಅಂಗಡಿ, ಮೆಟಲ್ ಸ್ಪೋರ್, ಬೇಕರಿ, ಆಭರಣದ ಅಂಗಡಿ, ಪಾದರಕ್ಷೆ ಅಂಗಡಿಗಳು ಕೂಡ ಬೊಂಬೆ ಪ್ರದರ್ಶನದಲ್ಲಿದ್ದು ಒಂದು ಊರನ್ನೇ ಪ್ರಸ್ತುತ ಪಡಿಸುವಂತಿದೆ.

ಶಿವನ ಜಡೆಯಿಂದ ಧುಮುಕುವ ಗಂಗೆ ಎಲ್ಲರ ಗಮನ ಸೆಳೆಯುತ್ತಿವೆ.

ಪ್ರದರ್ಶನಕ್ಕೆ ಇರಿಸಿರುವ ಬೊಂಬೆಗಳ ಪೈಕಿ ಅರ್ಧದಷ್ಟು ಬೊಂಬೆಗಳನ್ನು ಕೃಷ್ಣಭಟ್‌ ಅವರ ಪತ್ನಿ ಮಂಗಳ ಅವರೇ ಸಿದ್ದಪಡಿಸಿರುವುದು ವಿಶೇಷ.ಅವರು ರಾಜಸ್ತಾನ ಇತರ ರಾಜ್ಯಗಳಿಂದ ಬೊಂಬೆಗಳು ತರಿಸಿದ್ದಾರೆ.

ಮಾರುಕಟೆಯಲಿ ಸಿಗುವ ಬೊಂಬೆಗಳಿಗೆ ಪಾರಂಪರಿಕ ಸ್ಪರ್ಶ ನೀಡಿ
ಆಕರ್ಷಕಗೊಳಿಸಲಾಗಿದೆ.

ನವರಾತ್ರಿ ಆಚರಣೆಯ ಆರಂಭದ ದಿನದಿಂದ ಪ್ರಾರಂಭವಾಗಿರುವ ಬೊಂಬೆಗಳ ಪ್ರದರ್ಶನ
ದಸರಾ ಮುಗಿದ ನಂತರವೂ ಕೆಲದಿನ ಇರಲಿದೆ.

ಬೆಳಿಗ್ಗೆ 10ರಿಂದ ರಾತ್ರಿ 8 ಗಂಟೆ ವರೆಗೆ ಬೊಂಬೆಗಳನ್ನು ನೋಡಲು ಮುಕ್ತ ಅವಕಾಶವಿದೆ. ಬೊಂಬೆಗಳನ್ನು ನೋಡಲು ಬರುವವರಿಗೆ ಸಿಹಿ ತಿನಿಸು, ಚಕ್ಕುಲಿ, ಕೋಡುಬಳೆ, ನಿಪ್ಪಟ್ಟು ಕೂಡಾ ಕೊಡುತ್ತಿರುವುದು ಇನ್ನೂ ವಿಶೇಷ.

ಮೂವತ್ತೈದು ವರ್ಷಗಳಿಂದ ನಮ್ಮ ತಾಯಿ ದಸರಾ ಬೊಂಬೆಗಳನ್ನು ಮನೆಯಲ್ಲಿ ಕೂರಿಸುತ್ತಿದ್ದರು.ಇತ್ತೀಚಿನ ವರ್ಷಗಳಲ್ಲಿ ಸಾರ್ವಜನಿಕರ ವೀಕ್ಷಣೆಗಾಗಿ ಪ್ರತ್ಯೇಕ ಭವನದಲ್ಲಿ ದಸರಾ ಬೊಂಬೆಗಳ ಪ್ರದರ್ಶನವನ್ನು ಏರ್ಪಡಿಸಲಾಗುತ್ತಿದೆ.

ಪ್ರತಿ ದಿನ 300ರಿಂದ 400 ಜನರು ಭೇಟಿ ನೀಡುತ್ತಿದ್ದಾರೆ. ನಮ್ಮ ಪರಂಪರೆಯನ್ನು ಮುಂದಿನ ಪೀಳಿಗೆಗೆ ದಾಟಿಸುವ ಉದ್ದೇಶದಿಂದ ಬೊಂಬೆಗಳ ಪ್ರದರ್ಶನವನ್ನು ಏರ್ಪಡಿಸಲಾಗುತ್ತಿದೆ ಎಂದು ಕೃಷ್ಣಭಟ್ ಅವರು ಹೇಳುತ್ತಾರೆ.

ಬೊಂಬೆ ಪ್ರದರ್ಶನ ವೀಕ್ಷಣೆ ಜತೆಗೆ ತಿಂಡಿ ಕೂಡಾ ಸಿಗುವ ಇಂತಹ ಅದ್ಭುತ ಪ್ರದರ್ಶನವನ್ನು ಯಾರೂ ಮಿಸ್ ಮಾಡಿಕೊಳ್ಳಬೇಡಿ.