ಮೈಸೂರು: ಮೈಸೂರಿನ ಸರಸ್ವತಿಪುರಂ ನಲ್ಲಿರುವ ಶ್ರೀ ಕೃಷ್ಣ ದಾಮದಲ್ಲಿ ಶ್ರೀ ಕೃಷ್ಣ ಮಿತ್ರ ಮಂಡಳಿ ಮತ್ತು ಶ್ರೀ ಕೃಷ್ಣ ಟ್ರಸ್ಟ್ ವತಿಯಿಂದ ಪ್ರಥಮ ಏಕಾದಶಿ ದಿನದಂದು ಭಕ್ತರಿಗೆ ತಪ್ತ ಮುದ್ರಧಾರಣೆ ಮಾಡಲಾಯಿತು.
ಜಗದ್ಗುರು ಮಧ್ವಾಚಾರ್ಯರ ಮೂಲ ಸಂಸ್ಥಾನ, ಉಡುಪಿ ಶ್ರೀ ಪಲಿಮಾರು ಮಠದ ಸಂಸ್ಥಾನಧೀಶರಾದ ಶ್ರೀ ವಿದ್ಯಾಧೀಶ ತೀರ್ಥ ಶ್ರೀ ಪಾದಂಗಳವರು ಹಾಗೂ ಶ್ರೀ ವಿದ್ಯಾರಾಜೇಶ್ವರ ತೀರ್ಥ ಶ್ರೀಪಾದಂಗಳವರ ಅಮೃತ ಹಸ್ತದಿಂದ 2000ಕ್ಕೂ ಹೆಚ್ಚು ಭಕ್ತರಿಗೆ ತಪ್ತ ಮುದ್ರಧಾರಣೆ ನೆರೆವೇರಿತು.

ಈ ವೇಳೆ ಶ್ರೀ ವಿದ್ಯಾಧೀಶ ತೀರ್ಥ ಶ್ರೀ ಪಾದಂಗಳವರು ಮಾತನಾಡಿ, ಇಂದು ಆಶಾಡ ಶುದ್ಧ ಏಕಾದಶಿ. ಈ ದಿನ ಸುದರ್ಶನ ಹೋಮ ಮಾಡಿ ಅದರಲ್ಲಿ ಶಂಕ, ಚಕ್ರವನ್ನು ಬಿಸಿ ಮಾಡಿ ನಮ್ಮ ಮೈಮೇಲೆ ಹಾಕಿಕೊಂಡರೆ ದೇವರ ಕೃಪೆ ಸಿಗುತ್ತದೆ ಎಂಬ ನಂಬಿಕೆ ಇದೆ ಎಂದು ಹೇಳಿದರು.
ಶ್ರೀನಿವಾಸನ ಕೈನಲ್ಲಿರುವ ಶಂಕ, ಚಕ್ರ ಗಳನ್ನು ನಾವು ಮುದ್ರೆ ರೂಪದಲ್ಲಿ ಧಾರಣೆ ಮಾಡಿದರೆ ನಮ್ಮ ಮೈಮೇಲೆ ಶ್ರೀನಿವಾಸ ನೆಲೆಸಿರುತ್ತಾನೆ. ಹಾಗಾಗಿ ಶಂಕ, ಚಕ್ರ ಮುದ್ರ ಧಾರಣೆ ಮಾಡಿದವರು ಮನೆಯಲ್ಲಿದ್ದರೆ ಮನೆಗೆ ಒಂದು ರಕ್ಷೆ ಇದ್ದಂತೆ ಇದು ಅತ್ಯಂತ ಶ್ರೇಷ್ಠವಾದದ್ದು ಎಂದು ಹೇಳಿದರು.
ಸುದರ್ಶನ ಹೋಮ ಮಾಡಿ ನಾಡು, ದೇಶ ಸುಭಿಕ್ಷವಾಗಲಿ ಎಂದು ಪ್ರಾರ್ಥಿಸಿದ್ದೇವೆ ಎಂದು ಶ್ರೀಗಳು ತಿಳಿಸಿದರು.
ಈ ದಿನ ದೇವರು ಮಲಗುತ್ತಾನೆ ಎಂದು ಶಾಸ್ತ್ರದಲ್ಲಿ ಹೇಳಲಾಗುತ್ತದೆ ಅಂದರೆ ದೇವರು ಮಲಗಿದಾಗ ಜಗತ್ತನ್ನು ಹೇಗೆ ನೋಡಬೇಕು ಹಾಗಾಗಿ ನಾವು ದೇವರನ್ನು ಎಬ್ಬಿಸಬೇಕು ಅಂದರೆ ನಾವು ಶುದ್ಧರಾಗಿ ಶುದ್ಧ ಅಂತಃಕರಣ ದಿಂದ ಸುದರ್ಶನ ಹೋಮ ಮಾಡಿ ಪ್ರಾರ್ಥಿಸಬೇಕು ಎಂಬ ಅರ್ಥ ಎಂದು ತಿಳಿಸಿದರು.
ನಂತರ ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ ಮಾಡಲಾಯಿತು.
ಶ್ರೀ ಕೃಷ್ಣ ಮಿತ್ರ ಮಂಡಳಿ ಅಧ್ಯಕ್ಷ ಎನ್ ಗೋಪಾಲಕೃಷ್ಣನ್, ಗೌರವ ಕಾರ್ಯದರ್ಶಿ ಗುರುಪ್ರಸಾದ್, ಶ್ರೀ ಕೃಷ್ಣ ಟ್ರಸ್ಟ್ ಉಪಾಧ್ಯಕ್ಷರಾದ ರವಿಶಾಸ್ತ್ರಿ, ಪಿ. ಎಸ್ ಚಂದ್ರಶೇಖರ್, ಕಾರ್ಯದರ್ಶಿ ಕೆ ವಿ ಶ್ರೀಧರ್, ಖಜಾಂಜಿ ಎಮ್ ರಾಘವೇಂದ್ರ ರಾವ್, ಶ್ರೀವತ್ಸ, ಮಂಗಳ ಮತ್ತಿತರರು ಭಾಗವಹಿಸಿದ್ದರು