ಶ್ರೀ ವೈಷ್ಣವ ಸಮಾವೇಶಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಶ್ರೀವತ್ಸ ಕರೆ

Spread the love

ಮೈಸೂರು: ನವಂಬರ್ 24ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿರುವ ಬೃಹತ್ ಶ್ರೀ ವೈಷ್ಣವ ಸಮಾವೇಶಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಬಾಂಧವರು ಭಾಗವಹಿಸಬೇಕೆಂದು‌ ಶಾಸಕ ಟಿ.ಎಸ್.ಶ್ರೀವತ್ಸ ಮನವಿ ಮಾಡಿದ್ದಾರೆ.

ಮೈಸೂರಿನ ಸರಸ್ವತಿಪುರಂನಲ್ಲಿರುವ ಶ್ರೀ ರಾಮಾನುಜ ಸಹಕಾರ ಸಂಘದ ಆವರಣದ ಅಭ್ಯದಯ ಸಂಘದಲ್ಲಿ ಶ್ರೀ ರಾಮಾನುಜ ವಿಶ್ವ ವಿಜಯೋತ್ಸವ ನಮ್ಮ ನಡೆ ರಾಮಾನುಜರ ಕಡೆಗೆ ಎಂಬ ವೇದವಾಕ್ಯದೊಂದಿಗೆ ನಡೆಯಲಿರುವ ಬೃಹತ್ ಶ್ರೀ ವೈಷ್ಣವ ಸಮಾವೇಶದ ಪೂರ್ವಭಾವಿ ಸಭೆಯಲ್ಲಿ ಶ್ರೀವತ್ಸ ಮಾತನಾಡಿದರು.

ಯತಿರಾಜ ಮಠದ ಶ್ರೀ ಯಧುಗಿರಿ ಯತಿರಾಜ ನಾರಾಯಣ ರಾಮಾನುಜ ಜೀಯರ್ ಅವರ ಆಶಯ ಹಾಗೂ ಸಂಕಲ್ಪದಂತೆ ಶ್ರೀ ಯತಿರಾಜ ಮಠ ಹಾಗೂ ಅಖಿಲ ಕರ್ನಾಟಕ ಶ್ರೀ ವೈಷ್ಣವ ಮಹಾಸಭಾದ ವತಿಯಿಂದ ನವಂಬರ್ 24ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಶ್ರೀ ರಾಮಾನುಜ ವಿಶ್ವ ವಿಜಯೋತ್ಸವ ನಮ್ಮ ನಡೆ ರಾಮಾನುಜರ ಕಡೆಗೆ ಎಂಬ ವೇದವಾಕ್ಯದೊಂದಿಗೆ ಬೃಹತ್ ಶ್ರೀ ವೈಷ್ಣವ ಸಮಾವೇಶ ನಡೆಯಲಿದೆ.

ಎಲ್ಲಾ ಮಾನವರ ಒಳಿತನ್ನು ಬಯಸುವ ಸಮಾಜ ಶ್ರೀ ವೈಷ್ಣವ ಸಮಾಜ, ಬ್ರಹ್ಮ ಜ್ಞಾನವನ್ನು ಪಡೆದಿದ್ದ ನಮ್ಮ ಪೂರ್ವಿಕರು ಪುರಕ್ಕೆ ಹಿತವಾಗಿ ಬಾಳಿದವರು, ಆ ಶ್ರೇಷ್ಠ ಪರಂಪರೆಯನ್ನು ಮುಂದುವರಿಸುವ ಹೂಣೆ ನಮ್ಮೆಲ್ಲರ ಮೇಲಿದೆ ಎಂದು ಶ್ರೀವತ್ಸ ತಿಳಿಸಿದರು.

ಪ್ರಜಾತಂತ್ರ ಯುಗದಲ್ಲಿ ಸಂಘ ಶಕ್ತಿ ಸಮಾಜ ಶಕ್ತಿಯಾಗಿ ಬೆಳೆಯುವ ಅಗತ್ಯ ಇಂದು ಹೆಚ್ಚಾಗಿದೆ, ಆದ್ದರಿಂದ ಎಲ್ಲಾ ಶ್ರೀವೈಷ್ಣವ ಶ್ರೀ ಭಗವದ್ ರಾಮಾನುಜಾಚಾರ್ಯರ
ಅನುಯಾಯಿಗಳು ಎಲ್ಲಾ ಭೇದ ಭಾವ ಮರೆತು ಸಮಾಜದ ಸಂಘಟನೆಗೆ ಮುನ್ನುಡಿ ಇಡೋಣ ಎಂದು ಕರೆ ನೀಡಿದರು.

ಮೈಸೂರಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಸಮಾವೇಶಕ್ಕೆ ಭಾಗವಹಿಸೋಣ,
ಸಮಾವೇಶಕ್ಕೆ ನನ್ನ ಎಲ್ಲಾ ಸಹಕಾರವನ್ನು ನೀಡುತ್ತೇನೆ ಎಂದು ಶಾಸಕರು ಹೇಳಿದರು.

ಸಮಾವೇಶಕ್ಕೆ ಸ್ವಯಂಸೇವಕರಾಗಿ ಸೇವೆ ಸಲ್ಲಿಸಲು ಹಾಗೂ ಮಾಹಿತಿಗಾಗಿ 99866 87207/93421 88323 ನಂಬರಿಗೆ ಸಂಪರ್ಕಿಸಬಹುದು ಎಂದು ಸಂಚಾಲಕರಾದ ಯೋಗ ನರಸಿಂಹ (ಮುರುಳಿ)ತಿಳಿಸಿದ್ದಾರೆ

ಸಭೆಯಲ್ಲಿ ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಡಿ ಟಿ ಪ್ರಕಾಶ್, ಎಸ್ ವಿ ಎಲ್ ಎನ್ ಆಚಾರ್, ಯೋಗ ನರಸಿಂಹ (ಮುರುಳಿ), ಪುಟ್ಟಸ್ವಾಮಿ, ನಗರ ಪಾಲಿಕೆ ಮಾಜಿ ಸದಸ್ಯರಾದ ಎಂ ಡಿ ಪಾರ್ಥಸಾರಥಿ, ಸೌಭಾಗ್ಯ ಮೂರ್ತಿ, ಡಾ.ಲಕ್ಷ್ಮಿ, ಸಿ ಪಿ ಪಾರ್ಥಸಾರಥಿ ,ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆ ಪ್ರಧಾನ ಕಾರ್ಯದರ್ಶಿ ವಿಕ್ರಂ ಅಯ್ಯಂಗಾರ್, ಟಿ ಎಸ್ ಅರುಣ್, ಚಕ್ರಪಾಣಿ, ರಾಜಗೋಪಾಲ್, ವೀಣಾ ಅಯ್ಯಂಗಾರ್, ಆಂಡಾಲ್,
ಮತ್ತಿತರರು ಪಾಲ್ಗೊಂಡಿದ್ದರು.