(ವರದಿ:ಸಿದ್ದರಾಜು,ಕೊಳ್ಳೇಗಾಲ)
ಕೊಳ್ಳೇಗಾಲ,ಮಾ.8: ಈ ಭಾಗದ ತಿರುಪತಿ ಎಂದೆ ಕರೆಯಲಾಗುವ ತಾಲೂಕಿನ ಸಿಂಗನಲ್ಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೂದುಬಾಳು ಗ್ರಾಮದ ಪ್ರಸಿದ್ಧ ಶ್ರೀ ಗುಡಿಹಟ್ಟಿ ತೀರ್ಥ ವೆಂಕಟರಮಣಸ್ವಾಮಿ ಜಾತ್ರಾ ಮಹೋತ್ಸವವು ಮಾ.13 ರಿಂದ 17 ರ ವರೆಗೆ 5 ದಿನಗಳ ಕಾಲ ನಡೆಯಲಿದೆ.
ಮಾ.13 ರಂದು ರಾತ್ರಿ 8 ಗಂಟೆಗೆ ಗಜೇಂದ್ರ ಮೋಕ್ಷದೊಡನೆ ಜಾತ್ರೆ ಪ್ರಾರಂಭವಾಗಲಿದೆ. 14 ರಂದು ಬ್ರಹ್ಮರಥೋತ್ಸವ, 15 ರಂದು ಪ್ರಹ್ಲಾದೋತ್ಸವ,16 ರಂದು ವಸಂತೋತ್ಸವ, 17 ರಂದು ಗರುಡೋತ್ಸವದೊಡನೆ ಜಾತ್ರೆಗೆ ತೆರೆ ಬೀಳಲಿದೆ.
ಈ ಹಿನ್ನೆಲೆಯಲ್ಲಿ ಜಾತ್ರೆಗೆ ಬರುವ ವಾಹನಗಳ ಹಾಗೂ ಅಂಗಡಿ ಮುಂಗಟ್ಟುಗಳ ಮೇಲಿನ ಸುಂಕದ ಹರಾಜನ್ನು ಗ್ರಾಪಂ ಅಧ್ಯಕ್ಷೆ ಗಂಗಮ್ಮ ಅವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು
ಗ್ರಾಪಂ ಕಚೇರಿ ಆವರಣದಲ್ಲಿ ನಡೆದ ಹರಾಜು ಪ್ರಕ್ರಿಯೆಯಲ್ಲಿ ಸಿಂಗನಲ್ಲೂರು, ಕಾಮಗೆರೆ ಹಾಗೂ ಬಿ. ಗುಂಡಾಪುರ ಗ್ರಾಮಗಳ 16 ಮಂದಿ ಬಿಡ್ಡುದಾರರು ಭಾಗವಹಿಸಿದ್ದರು.

ಪ್ರಾರಂಭದಲ್ಲಿ ಸರ್ಕಾರಿ ಸವಾಲ್ 5,000 ರೂ. ನಿಂದ ಹರಾಜು ಪ್ರಕ್ರಿಯೆ ಪ್ರಾರಂಭವಾಯಿತು. ಅಂತಿಮವಾಗಿ ಸಿಂಗನಲ್ಲೂರು ಗ್ರಾಮದ ಶಿವಕುಮಾರ್ ಎಂಬುವವರು 67, 700 ರೂ.ಗಳಿಗೆ ಹರಾಜುನ್ನು ಕೂಗಿದರು. ಈ ಮೊತ್ತದೊಡನೆ ಶೇಕಡ 24 ರಷ್ಟು 16200 ಸೆಸ್ಸು ಸೇರಿ ಒಟ್ಟು 83,700 ರೂಗಳಿಗೆ ಹರಾಜುನ್ನು ತಮ್ಮದಾಗಿಸಿಕೊಂಡರು.
ಈ ಸಂದರ್ಭದಲ್ಲಿ ಮಾತನಾಡಿದ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ರೂಪಾ ಬಡಿಗೇರ ಅವರು ಜಾತ್ರೆಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದ್ದು ಈಗಾಗಲೇ ಸ್ವಚ್ಛತಾ ಕಾರ್ಯ ಭರದಿಂದ ಸಾಗುತ್ತಿದೆ. ಜಾತ್ರಾ ಮಾಳದ ಕೆರೆಯ ಸುತ್ತ ಬೆಳೆದುಕೊಂಡಿರುವ ಗಿಡ ಗಂಟಿಗಳು, ಮುಳ್ಳಿನ ಪೊದೆಗಳನ್ನು ಕಡಿದು ಹಾಕಿ ಸ್ವಚ್ಛಗೊಳಿಸಲಾಗುತ್ತಿದೆ. ಹಾಗೆಯೇ ಚರಂಡಿಗಳಲ್ಲಿ ತುಂಬಿರುವ ಹೂಳನ್ನು ತೆಗೆಸಲಾಗುತ್ತಿದೆ. ಕುಡಿಯುವ ನೀರಿಗಾಗಿ 25 ಮಿನಿ ತೊಂಬೆಗಳಿದ್ದು ನೀರಿಗೆ ದಮಸ್ಯೆ ಆಗುವುದಿಲ್ಲ, ಜಾತ್ರೆಮಾಳ ಹಾಗೂ ಗ್ರಾಮದ ಎಲ್ಲಾ ಕಡೆ ಬೀದಿದೀಪಗಳನ್ನು ಅಳವಡಿಸಲಾಗಿದೆ. ಜಾತ್ರೆಗೆ ಬರುವ ದ್ವಿಚಕ್ರ ವಾಹನ ಹಾಗೂ ನಾಲ್ಕು ಚಕ್ರ ವಾಹನಗಳ ಪಾರ್ಕಿಂಗ್ ಗೆ ಗ್ರಾಮದ ಹೊರ ವಲಯದಲ್ಲಿ ಎರಡು ಕಡೆ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.
ಜಾತ್ರೆಯಲ್ಲಿ ಸಾವಿರಾರು ಜನ ಭಾಗವಹಿಸುವ ನಿರೀಕ್ಷೆ ಇರುವುದರಿಂದ ಯಾವುದೇ ಸಮಸ್ಯೆ ಯಾಗದಂತೆ ಮುಂಜಾಗ್ರತಾ ಕ್ರಮವಾಗಿ ಆರೋಗ್ಯ ಇಲಾಖೆ, ಚೆಸ್ಕಾಂ, ಅಗ್ನಿಶಾಮಕ ದಳ, ಪೊಲೀಸ್ ಇಲಾಖೆ ಸೇರಿದಂತೆ ಇನ್ನಿತರ ಇಲಾಖೆಗಳಿಗೆ ಜಾತ್ರಾ ವೇಳೆ ಸೇವೆ ಒದಗಿಸುವಂತೆ ಮನವಿಪತ್ರ ಸಲ್ಲಿಸಲಾಗಿದೆ. ಒಟ್ಟಿನಲ್ಲಿ ಜಾತ್ರೆ ಯಶಸ್ವಿಯಾಗಿ ನಡೆಸಲು ಗ್ರಾಪಂ ವತಿಯಿಂದ ಸಕಲ ಸಿದ್ಧತೆಗಳನ್ನು ಕೈಗೊಂಡಿರುವುದಾಗಿ ರೂಪ ಬಡಿಗೇರ್ ಮಾಹಿತಿ ನೀಡಿದರು.
ಸಿಂಗನಲ್ಲೂರು ಗ್ರಾಮ ಪಂಚಾಯಿತಿಯು
ಅಂಗಡಿ ಮುಂಗಟ್ಟುಗಳಿಗೆ 2024-25 ನೇ ಸಾಲಿನ ಸುಂಕದ ದರಗಳನ್ನು ಮೂರು ದಿನಗಳಿಗೆ ನಿಗದಿಪಡಿಸಿದ್ದು. ಮಿಠಾಯಿ ಅಂಗಡಿಗೆ 2500 ರೂ, ದೊಡ್ಡ ಹೋಟೆಲ್ ಗಳಿಗೆ 1000 ರೂ, ಸಣ್ಣ ಹೋಟೆಲ್, ಬಟ್ಟೆ ಅಂಗಡಿ, ಪಾತ್ರೆ ಅಂಗಡಿ ತೊಟ್ಟಿಲಾಟಗಳಿಗೆ ತಲಾ 750 ರೂ. ಕಡ್ಲೆಪುರಿ ಅಂಗಡಿ, ಕಬ್ಬಿನ ಅಂಗಡಿಗಳಿಗೆ 250 ರೂ. ಬೊಂಬೆ ಅಂಗಡಿ 400 ರೂ. ಸ್ಟೇಷನರಿ ಅಂಗಡಿ, ಡಾಲರ್ ಅಂಗಡಿ, ಬಳೆ ಅಂಗಡಿಗಳಿಗೆ 300 ರೂ. ಹೂವಿನ ಅಂಗಡಿ, ಎಳೆನೀರು, ಐಸ್ ಕ್ರೀಮ್ ಅಂಗಡಿ ಇತರೆ ಅಂಗಡಿಗಳಿಗೆ ತಂಪು ಪಾನೀಯಗಳು ಹಣ್ಣಿನ ಅಂಗಡಿ ಇತರ ಯಾವುದೇ ಸಣ್ಣಪುಟ್ಟ ಅಂಗಡಿಗಳಿಗೆ ತಲಾ 200 ರೂ.ಗಳು. ಹಾಗೆಯೇ ವಾಹನಗಳ ಮೇಲಿನ ಸುಂಕ ಪ್ರತಿ ಟ್ರಿಪ್ಪಿಗೆ ಬಸ್ಸು, ಲಾರಿ ಗಳಿಗೆ 50ರೂ. ಟೆಂಪೋ ಕಾರು ಲಗೇಜ್ ಆಟೋ ಗಳಿಗೆ 40 ರೂ.ಆಟೋ 30 ರೂ.ದ್ವಿಚಕ್ರ ವಾಹನಗಳಿಗೆ 10 ರೂ.ಗಳನ್ನು ನಿಗದಿಪಡಿಸಿದೆ.

ಟೆಂಡರ್ ದಾರರು ಸುಂಕ ವಸೂಲಾತಿಗೆ ಅಧಿಕೃತ ರಶೀತಿ ನೀಡುವುದು, ಗ್ರಾಪಂ ನಿಗದಿಪಡಿಸಿದ ದರಕ್ಕಿಂತ ಹೆಚ್ಚಿನ ಸುಂಕ ವಸೂಲಿ ಮಾಡಬಾರದು ಹೆಚ್ಚು ವಸೂಲಿ ಮಾಡಿದರೆ ಮತ್ತು ಸುಂಕದ ಹರಾಜನ್ನು ನಡುವೆ ರದ್ದುಗೊಳಿಸಿದರೆ ನಿಮ್ಮ ಮೇಲೆ ಸೂಕ್ತ ಕ್ರಮ ವಹಿಸಲಾಗುವುದು ಎಂದು ಎಚ್ಚರಿಸಿದ್ದಾರೆ.
ಈ ವೇಳೆ ಅಧ್ಯಕ್ಷೆ ಗಂಗಮ್ಮ, ಸದಸ್ಯರಾದ ಚಿನ್ನಮುತ್ತು, ಎಸ್ ಟಿ ಡಿ ರಾಜು, ಪ್ರಸಾದ್, ಮಧುಸೂದನ್, ರಾಣಿ, ರೂಪಾವತಿ, ಹೇಮಾವತಿ, ಜಯಮ್ಮ, ಶ್ರೀನಿವಾಸ್ ಮತ್ತಿತರರಿದ್ದರು.