ಶ್ರೀದತ್ತವೇಂಕಟೇಶ್ವರ ದೇವಸ್ಥಾನದಲ್ಲಿಶ್ರಾವಣ ಪುರಾಣಶ್ರವಣ

Spread the love

ಮೈಸೂರು: ಭಾರತೀಯ ಸಂಸ್ಕೃತಿಯಲ್ಲಿ ಶ್ರಾವಣ ಮಾಸ ಅತ್ಯಂತ ಪವಿತ್ರ ಹಾಗೂ ಪುಣ್ಯಪ್ರದವಾದ ಮಾಸವೆಂದು ಪರಿಗಣಿಸಲಾಗಿದೆ.

ಶ್ರಾವಣ ಮಾಸದ ಅವಧಿಯಲ್ಲಿ ಅನೇಕ ವ್ರತಗಳು, ಹಬ್ಬಗಳು, ಧಾರ್ಮಿಕ ಸಮಾರಂಭಗಳು ಜರುಗುತ್ತವೆ.

ಪರಮಶಿವನ ಆರಾಧನೆ, ಶ್ರೀವೇಂಕಟರಮಣನ ಪೂಜೆ, ವರಮಹಾಲಕ್ಷ್ಮೀ ವ್ರತ, ಶ್ರೀಕೃಷ್ಣ ಜನ್ಮಾಷ್ಟಮಿ, ಹಯಗ್ರೀವ ಜಯಂತಿ, ಉಪಾಕರ್ಮ ಮುಂತಾದವುಗಳಲ್ಲಿ ಭಕ್ತರು ಭಾವಪೂರ್ಣವಾಗಿ ತೊಡಗುತ್ತಾರೆ.

ಈ ಮಾಸವು ಮುಹೂರ್ತಗಳ ಸಮೃದ್ಧಿಯಿಂದಲೂ ವಿಶೇಷ ಮಹತ್ವ ಹೊಂದಿದ್ದು, ಅನೇಕ ಶ್ರೇಯೋಮಯ ಕಾರ್ಯಕ್ರಮಗಳಿಗೆ ಅನುಕೂಲವಾಗುತ್ತದೆ.

ಈ ಪವಿತ್ರ ಮಾಸದಲ್ಲಿ ಪುರಾಣಶ್ರವಣಕ್ಕೂ ಅಪಾರ ಮಹಿಮೆ ಇದೆ. ಶ್ರಾವಣ ಮಾಸದಲ್ಲಿ ಪುರಾಣಗಳನ್ನು ಆಲಿಸುವುದು ಶ್ರವಣಮಾತ್ರದಿಂದಲೇ ಪುಣ್ಯ ಫಲಗಳನ್ನು ನೀಡುತ್ತದೆ ಎಂದು ಶಾಸ್ತ್ರಗಳು ಸಾರುತ್ತವೆ.

ಈ ಹಿನ್ನೆಲೆಯಲ್ಲಿಯೇ, ಶ್ರೀಗಣಪತಿ ಸಚ್ಚಿದಾನಂದ ಆಶ್ರಮದ ಶ್ರೀದತ್ತವೇಂಕಟೇಶ್ವರ ದೇವಸ್ಥಾನದಲ್ಲಿ, ಪೂಜ್ಯ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರ ದಿವ್ಯಾನುಗ್ರಹ ಹಾಗೂ ಕಿರಿಯ ಶ್ರೀಗಳಾದ ದತ್ತ ವಿಜಯಾನಂದ ತೀರ್ಥರ ಮಾರ್ಗದರ್ಶನದಲ್ಲಿ, ವಿಶೇಷ ಧಾರ್ಮಿಕ ಕಾರ್ಯಕ್ರಮ ಆಯೋಜಿಸಲಾಗಿದೆ.

ಶ್ರಾವಣ ಮಾಸದ ಪ್ರತಿ ಶನಿವಾರ ಸಂಜೆ 5.30 ರಿಂದ 6.30ರವರೆಗೆ, ವಿದ್ವಾನ್ ಶ್ರೀ ನಾರಾಯಣ ದೇಸಾಯಿ ಅವರಿಂದ ಭಾಗವತ ಪುರಾಣ ಪ್ರವಚನ ನಡೆಯುತ್ತಿದೆ.

ಅದರಲ್ಲಿ ಶ್ರಾವಣ ಮಾಸದ ಪಾವಿತ್ರ್ಯತೆ, ವ್ರತಾಚರಣೆಗಳ ತಾತ್ಪರ್ಯ ಹಾಗೂ ಆಚರಣೆಗಳ ಮಹತ್ವವನ್ನು ಸುಲಭವಾಗಿ ಹಾಗೂ ಆಳವಾಗಿ ವಿವರಿಸಲಾಗುತ್ತಿದೆ.

ಈಗಾಗಲೇ ಎರಡು ವಾರಗಳ ಕಾರ್ಯಕ್ರಮಗಳು ಯಶಸ್ವಿಯಾಗಿ ಸಂಪನ್ನವಾಗಿದ್ದು, ಮುಂದಿನ ದಿನಗಳಲ್ಲಿ ಆಗಸ್ಟ್ 9, 16, ಹಾಗೂ 23ರಂದು ಈ ಸರಣಿಯ ಪ್ರವಚನಗಳು ನಡೆಯಲಿವೆ.

ಪ್ರವಚನದ ನಂತರ ಸಂಜೆ 6.30ರಿಂದ 7.30ರವರೆಗೆ ಭಕ್ತಿಗೀತೆಗಳ ಕಾರ್ಯಕ್ರಮ ನಡೆಯಲಿದೆ ನಂತರ ಪ್ರಸಾದ ವಿತರಣೆ ನಡೆಯಲಿದೆ.

ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ, ಪುರಾಣ ಶ್ರವಣ, ಸಂಗೀತಾನಂದ ಹಾಗೂ ಭಕ್ತಿಸಮಾಗಮದ ಮೂಲಕ ಭಗವಂತನ ಕರುಣೆಗೆ ಪಾತ್ರರಾಗಬೇಕೆಂದು ಆಶ್ರಮ ಕಾರ್ಯನಿರ್ವಹಣಾ ಸಮಿತಿ ವಿನಂತಿಸಿದೆ.