ಕನ್ನಡ ಭಾಷೆ ಕಲಿಯಿರಿ ಭಕ್ತರಿಗೆ‌ ಗಣಪತಿ ಶ್ರೀಗಳ ಕರೆ

Spread the love

ಮೈಸೂರು: ಮೈಸೂರಿನ
ಶ್ರೀ ಅವಧೂತ ದತ್ತ ಪೀಠ,
ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದ ವತಿಯಿಂದ ಪೂಜ್ಯ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರ ೮೩ನೇ ಜನ್ಮದಿನೋತ್ಸವದ ಅಂಗವಾಗಿ ಅರ್ಹರಿಗೆ ಕೊಡುಗೆಗಳನ್ನು ನೀಡಲಾಯಿತು.

ಕನಾಟಕ ಸರ್ಕಾರ ಮೈಸೂರು ವಿಭಾಗ ವಿಕಲ ಚೇತನರು ಮತ್ತು ಹಿರಿಯ ನಾಗರೀಕರ ಇಲಾಖೆ, ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯ ಸಲಹೆ ಮೇರೆಗೆ ಅರ್ಹರಿಗೆ ಉಪಕರಣಗಳನ್ನು ದತ್ತಪೀಠದ ವತಿಯಿಂದ ಕೊಡುಗೆ ನೀಡಲಾಯಿತು.

ವೀಲ್ ಚೇರ್ -26,
ವಾಕರ್ಸ್-6,
ಕ್ರಚಸ್ ಮತ್ತು ಎಲ್ಬೊ ಕ್ರಚಸ್-7,
ವಾಕಿಂಗ್ ಸ್ಟಿಕ್-10,
ವೈಟ್ ಕೇನ್ ಬೈಂಡ್ ಸ್ಟಿಕ್-3
ಸ್ಪೆಷಲ್ ಸಿ.ಪಿ. ಚೇರ್-8
ಟ್ವಿನ್ ಡಿವೈಸಸ್-9
ಸ್ಟ್ಯಾಂಡಿಂಗ್ ಪ್ರೇಮ್ಸ್-4
ಜಿಮ್ ಬಾಲ್ಸ್ -20
ವಾಟರ್ ಫಿಲ್ಟರ್- ಡಿ.ಆರ್.ಸಿ. ಕಾರ್ಯಾಲಯಕ್ಕೆ ಬರುವವರ ಅನುಕೂಲಕ್ಕಾಗಿ ಕೊಡುಗೆಗಳನ್ನು ನೀಡಲಾಯಿತು.

ಶ್ರೀಗಳು ಅರ್ಹರು ಇರುವಲ್ಲಿಗೇ ಆಗಮಿಸಿ ವಿಕಲಚೇತನ ಮಕ್ಕಳ ಮೈದಡವಿ ಸಲಕರಣೆ ವಿತರಿಸಿ ಹರಸಿದರು.

ಇದಲ್ಲದೆ ಮೈಸೂರು ಪಿಂಜರಪೋಲ್ ಸೊಸೈಟಿಯವರಿಗೆ ಗೋವುಗಳ ರಕ್ಷಣೆಗಾಗಿ ಕೊಠಡಿ ಕಟ್ಟಲು ೧೬.೫ ಲಕ್ಷ ರೂ. ಸಹಾಯ ಧನ ವಿತರಿಸಿ ಗಣಪತಿ ಶ್ರೀಗಳು ಎಲ್ಲರಿಗೂ ಒಳಿತಾಗಲೆಂದು ಹಾರೈಸಿದರು.

ಈ ವೇಳೆ ಕಿರಿಯ ಶ್ರೀಗಳಾದ
ಪೂಜ್ಯ ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿಯವರು ಉಪಸ್ಥಿತರಿದ್ದರು.

ಇದಕ್ಕೂ ಮೊದಲು ಪ್ರಾರ್ಥನಾ ಮಂದಿರದಲ್ಲಿ ಆಶ್ರಮದ ಭಕ್ತರನ್ನು ಉದ್ದೇಶಿಸಿ ಮಾತನಾಡಿದ ಗಣಪತಿ ಶ್ರೀಗಳು ನೀವೆಲ್ಲರೂ ಸುಂದರವಾದ ಕನ್ನಡ ಭಾಷೆಯನ್ನು ಕಲಿಯಬೇಕು,ಕರ್ನಾಟಕದಲ್ಲಿ ಇದ್ದೀರಾ ಹಾಗಾಗಿ ಕನ್ನಡ ಕಲಿಯಿರಿ ಎಂದು ಕರೆ ನೀಡಿದರು.

ನೀವು ಯಾವುದೇ ಪ್ರಾಂತ್ಯಕ್ಕೆ ಹೋದರು ಅಲ್ಲಿಯ ಭಾಷೆಗಳನ್ನು ಕಲಿಯಬೇಕು,ನಿಮ್ಮ ಭಾಷೆಯನ್ನು ಪ್ರೀತಿಸಿ ಬೇರೆ ಭಾಷೆಗಳನ್ನು ಗೌರವಿಸಿ ಎಂದು ಸಲಹೆ ನೀಡಿದರು.

ನಾನು ಯಾವ ಪ್ರಾಂತ್ಯಕ್ಕೆ ಹೋದರೂ ಅಲ್ಲಿನ ಭಾಷೆಯನ್ನು ಕಲಿಯುತ್ತೇನೆ ಹಾಗಾಗಿ ನಾನು ಇಷ್ಟೊಂದು ಭಾಷೆಗಳನ್ನು ಸುಲಲಿತವಾಗಿ ಮಾತನಾಡುತ್ತೇನೆ, ಪ್ರಾಂತೀಯ ಭಾಷೆಗಳನ್ನು ಕಲಿಯುವುದರಿಂದ ನಿಮಗೆ ಬಹಳಷ್ಟು ಒಳಿತಾಗುತ್ತದೆ, ವ್ಯವಹರಿಸಲು ಸುಲಭವಾಗುತ್ತದೆ ಎಂದು ತಿಳಿ ಹೇಳಿದರು.

ನಮ್ಮ ಆಶ್ರಮದಲ್ಲಿ ಕನ್ನಡ ಭಾಷೆ ಕಲಿಯಲು ಮೂವತ್ತು ದಿನಗಳ ಒಂದು ಸಣ್ಣ ತರಬೇತಿ ಪ್ರಾರಂಭಿಸಲಾಗಿದೆ, ನೀವು ಅದರಲ್ಲಿ ಪಾಲ್ಗೊಂಡು ಕನ್ನಡ ಕಲಿತು ಕವನ, ಕಾವ್ಯ ಸಣ್ಣ ಕಥೆಗಳು ಹೀಗೆ ಏನನ್ನೇ ಬರೆದರು ಅದಕ್ಕೆ ನಮ್ಮ ಆಶ್ರಮದ ವತಿಯಿಂದ ಬಹುಮಾನ ನೀಡಲಾಗುವುದು ಎಂದು ಗಣಪತಿ ಶ್ರೀಗಳು ಪ್ರೋತ್ಸಾಹಿಸಿದರು.

ನಂತರ ಸ್ವಾಮೀಜಿಯವರು ಗೋಪೂಜೆ ಅಶ್ವಪೂಜೆ ನೆರವೇರಿಸಿದರು.

ಕೊಡುಗೆ ವಿತರಣೆ ನಂತರ
ವೇದಿಕೆಯಲ್ಲಿ ಆಸೀನರಾದ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರು ಭಕ್ತರಿಗೆ ಪ್ರಾಣಾಯಾಮವನ್ನು ಹೇಳಿಕೊಟ್ಟಿದ್ದು ವಿಶೇಷವಾಗಿತ್ತು.

ಪ್ರಾಣಾಯಾಮ ಮಾಡುವುದರಿಂದ ನಿಮ್ಮ ಶ್ವಾಸಕೋಶ ಸ್ವಚ್ಛವಾಗುತ್ತದೆ ಬುದ್ಧಿ ಸ್ಥಿಮಿತ ದಲ್ಲಿರುತ್ತದೆ‌ ಮನಸ್ಸು ಚಂಚಲವಾಗದೆ ಶಾಂತವಾಗಿರುತ್ತದೆ ಎಂದು ತಿಳಿಸಿದರು.

ದೀರ್ಘವಾಗಿ ಉಸಿರನ್ನು ತೆಗೆದುಕೊಂಡು ಉಸಿರಿನೊಂದಿಗೆ ಮನಸ್ಸನ್ನು ಏಕಾಗ್ರತೆಗೊಳಿಸಿ ನಿಧಾನವಾಗಿ ಬಿಡಬೇಕು.ಹೀಗೆ ಪ್ರತಿದಿನ 15ರಿಂದ 20 ನಿಮಿಷ ಅಭ್ಯಾಸ ಮಾಡಿ ಎಂದು ಶ್ರೀಗಳು ತಿಳಿಸಿದರು.

ಯೋಗಾಭ್ಯಾಸ ಮಾಡುವ ಮೊದಲು ಪ್ರಾಣಾಯಾಮ ಮಾಡಬೇಕು ಇದರಿಂದ ಎಷ್ಟೋ ಕಾಯಿಲೆಗಳನ್ನು ಗುಣಪಡಿಸ ಬಹುದು ಪ್ರತಿಯೊಬ್ಬರು ನಿತ್ಯ ಪ್ರಾಣಾಯಾಮ ಅಭ್ಯಾಸ ಮಾಡಬೇಕು ಎಂದು ಸ್ವತಃ ಶ್ರೀಗಳು ಪ್ರಾಣಾಯಾಮ ಮಾಡುತ್ತಾ ಭಕ್ತರಿಗೂ ಮಾಡುವುದನ್ನು ಕಲಿಸಿಕೊಟ್ಟರು.

ನಂತರ ಕೈ ಬೆರಳುಗಳ ಮೂಲಕ ಮಾಡುವ ಒಂದು ಸಣ್ಣ ವ್ಯಾಯಾಮ ಸಹ ಹೇಳಿಕೊಟ್ಟರು.