ಮೈಸೂರು: ಮಹಿಳೆಯರು ಎಲ್ಲ ಕ್ಷೇತ್ರದಲ್ಲೂ ಮುಂಚೂಣಿಯಲ್ಲಿ ಇದ್ದು, ಅವರಿಗೆ ಮತ್ತಷ್ಟು ಪ್ರೋತ್ಸಾಹ ನೀಡಬೇಕಾದ ಅವಶ್ಯಕತೆ ಇದೆ ಎಂದು ಬಸವಮಾರ್ಗ ಸಂಸ್ಥೆಯ ಸಂಸ್ಥಾಪಕ ಎಸ್.ಬಸವಣ್ಣ ಹೇಳಿದರು.
ಮಹಿಳೆಯರನ್ನು ಕ್ರೀಡಾ ಕ್ಷೇತ್ರಕ್ಕೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕರ್ನಾಟಕ ಯೋಗಾಸನ ಕ್ರೀಡಾ ಸಂಸ್ಥೆ ವತಿಯಿಂದ ಮೈಸೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ವಿಭಾಗದ ಒಳ ಆವರಣದಲ್ಲಿ ಇರುವ ಸ್ಪೋರ್ಟ್ಸ್ ಪೆವಿಲಿಯನ್ ನಲ್ಲಿ ಆಯೋಜಿಸಿದ್ದ “ಆಸ್ಮಿತ” ಯೋಗಾಸನ ಸ್ಪರ್ಧೆ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರತಿ ಪುರುಷನ ಯಶಸ್ಸಿನ ಹಿಂದೆ ಒಬ್ಬ ಮಹಿಳೆ ಇದ್ದೇ ಇರುತ್ತಾರೆ. ಮಹಿಳೆ ಇಂದು ನಾಲ್ಕು ಚೌಕಟ್ಟಿಗೆ ಸೀಮಿತಳಾಗದೆ ಎಲ್ಲ ಕ್ಷೇತ್ರದಲ್ಲೂ ತಮ್ಮ ಸಾಮರ್ಥ್ಯವನ್ನು ತೋರಿದ್ದಾರೆ. ವಿಜ್ಞಾನ, ತಂತ್ರಜ್ಞಾನ, ಆರ್ಥಿಕ, ರಾಜಕೀಯ, ರಕ್ಷಣೆ ಸೇರಿದಂತೆ ಪ್ರತಿಯೊಂದು ಕ್ಷೇತ್ರದಲ್ಲೂ ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ ಎಂದು ಹೇಳಿದರು.
ಯೋಗವೂ ಪ್ರತಿಯೊಬ್ಬರಲ್ಲೂ ಬದಲಾವಣೆ ತರುತ್ತದೆ. ಅದರಲ್ಲೂ ಮಹಿಳೆಯರಿಗೆ ಯೋಗಾ ಅತ್ಯಗತ್ಯ. ಬೆಳಗ್ಗೆಯಿಂದ ಸಂಜೆಯವರೆಗೆ ಮನೆಯ ಎಲ್ಲಾ ಕೆಲಸವನ್ನು ನಿಭಾಯಿಸುವ ಹಾಗೂ ಹೊರಗೆ ದುಡಿಯುತ್ತಿರುವ ಮಹಿಳೆಯರ ಆರೋಗ್ಯವೂ ಕೂಡ ಮುಖ್ಯ. ಈ ನಿಟ್ಟಿನಲ್ಲಿ ಯೋಗ, ಧ್ಯಾನ, ಪ್ರಾಣಾಯಾಮಗಳನ್ನ ನಿತ್ಯ ನಿಮ್ಮ ಜೀವನದಲ್ಲಿ ಅಳವಡಿಸಿಕೊಂಡು, ಅದನ್ನು ಹಂಚುತ್ತಾ ಹೋಗಬೇಕು ಎಂದು ಸಲಹೆ ನೀಡಿದರು.
ಮಾಜಿ ಮೇಯರ್ ಪುರುಷೋತ್ತಮ್ ಮಾತನಾಡಿ, ಯೋಗ ಎಲ್ಲ ಕ್ರೀಡೆಗಳ ಗುರು. ಯೋಗವನ್ನು ಪ್ರತಿ ಮನೆ ಮನೆಗೆ ತಲುಪಿಸಬೇಕು. ಶಾಲಾ, ಕಾಲೇಜುಗಳಲ್ಲಿ ಯೋಗವನ್ನು ಕಡ್ಡಾಯಗೊಳಿಸಿ, ನಿತ್ಯ ಒಂದು ಗಂಟೆ ಅದಕ್ಕೆಂದೆ ಮೀಸಲಿಡಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ರಿಯೋ ಮೆರಿಡಿಯನ್ ಹೋಟೆಲ್ ನ ನಿರ್ದೇಶಕಿ ಮಾಲೀನಿ ಪ್ರವೀಣ್, ರಾಷ್ಟ್ರೀಯ ಕ್ರೀಡಾಪಟು ರೀನಾ ಜಾರ್ಜ್, ಸಂಗೀತಾ ವಿದ್ವಾನ್ ಎಂ.ಅರ್.ಶೀಲಾ, ಕರ್ನಾಟಕ ಯೋಗಾಸನ ಅಸೋಸಿಯೇಶನ್ ಖಜಾಂಚಿಗಳಾದ ಎನ್.ಆಶಾದೇವಿ, ಎ.ಜಿ.ಕೆ.ಜಯಪ್ರಕಾಶ್, ಉಪಾಧ್ಯಾಕ್ಷ ಬಿ.ರವಿ, ಕಾರ್ಯದರ್ಶಿ ಎಚ್.ಎಂ.ರವಣೀಕರ್, ಉಮಾ ಮತ್ತಿತರರು ಹಾಜರಿದ್ದರು.