ಶಿಗ್ಗಾಂವಿಯಲ್ಲಿ ಕಾಂಗ್ರೆಸ್ ಗೆ ಬಹುಮತ: ಸಿದ್ದರಾಮಯ್ಯ ವಿಶ್ವಾಸ

Spread the love

ಬೆಂಗಳೂರು: ಶಿಗ್ಗಾಂವಿಯ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಬಹುಮತ ಸಾಧಿಸಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.

ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ, ಶಿಗ್ಗಾಂವಿಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸಮರ್ಥರಾಗಿದ್ದು, ಬಿಜೆಪಿ ನಮಗೆ ಎದುರಾಳಿಯಲ್ಲ,ಉಪಚುನಾವಣೆಗೆ ಸನ್ನದ್ಧವಾಗಿದ್ದು ಮೂರು ಕ್ಷೇತ್ರಗಳಿಗೆ ಸಮರ್ಥರಾದ ಅಭ್ಯರ್ಥಿಗಳಿಗೆ ಟಿಕೆಟ್ ನೀಡಲಾಗಿದೆ ಎಂದು ತಿಳಿಸಿದರು.

ಕೇಂದ್ರ ಸಚಿವ ಕುಮಾರಸ್ವಾಮಿಯವರ ಭಾವನಾತ್ಮಕ ಚುನಾವಣಾ ಭಾಷಣ ಮಾಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಕುಮಾರಸ್ವಾಮಿಯವರ ಭಾವನಾತ್ಮಕ ಭಾಷಣ, ಕಣ್ಣೀರುಗಳಿಗೆ ಜನರು ಮಾರುಹೋಗುವುದಿಲ್ಲ ಎಂದು ಪ್ರತಿಕ್ರಿಯಿಸಿದರು.

ಶಿಗ್ಗಾಂವಿಯಲ್ಲಿ ಯಾಸಿರ್ ಅಹ್ಮದ್ ಖಾನ್ ಪಠಾಣ್ ಅವರು ಕಳೆದ ಚುನಾವಣೆಯಲ್ಲಿ ಸ್ಪರ್ಧಿಸಿದ್ದರಿಂದ ಅವರಿಗೇ ಈ ಬಾರಿ ಅವಕಾಶ ನೀಡಲಾಗಿದೆ. ಇದೇ ಪ್ರದೇಶದ ಸೈಯದ್ ಅಜೀಂಪೀರ್ ಖಾದ್ರಿಯವರು ಸಮರ್ಥ ನಾಯಕರಿದ್ದು, ಅವರು ಸಲ್ಲಿಸಿರುವ ನಾಮಪತ್ರವನ್ನು ವಾಪಸ್ಸು ಪಡೆಯುವಂತೆ ಮನವೊಲಿಸಲಾಗುವುದು ಎಂದು ಸಿಎಂ ಹೇಳಿದರು.

ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಶಿಗ್ಗಾಂವಿಯಲ್ಲಿ ಕಾಂಗ್ರೆಸ್ ಪಕ್ಷ ಮಾತ್ರ ಪ್ರತಿಸ್ಪರ್ಧಿ, ವ್ಯಕ್ತಿ ಅಲ್ಲ ಎಂದು ಹೇಳಿರುವುದಕ್ಕೆ ಪ್ರತಿಕ್ರಿಯಿಸಿದ ಸಿದ್ದು, ಪಠಾನ್ ಅವರು ಎದುರಾಳಿಯಾಗಿಲ್ಲದಿದ್ದಲ್ಲಿ ಕಳೆದ ಚುನಾವಣೆಯಲ್ಲಿ 60 ಸಾವಿರ ಮತಗಳನ್ನು ಪಡೆಯುತ್ತಿದ್ದರೇ? ಕಳೆದ ಬಾರಿ ಶಿಗ್ಗಾಂವಿಯಲ್ಲಿ ಬಿಜೆಪಿ ಜಯ ಸಾಧಿಸಿದ್ದರೂ, ಕಾಂಗ್ರೆಸ್ ಒಳ್ಳೆಯ ಸ್ಪರ್ಧೆಯನ್ನು ನೀಡಿತ್ತು ಎಂದು ಹೇಳಿದರು.