ಶೇರು ವಹಿವಾಟಿನಲ್ಲಿ ಹೆಚ್ಚಿನ ಲಾಭಾಂಶ: ಇಬ್ಬರಿಗೆ 34.28 ಲಕ್ಷ ವಂಚನೆ

ಮೈಸೂರು: ಶೇರು ವಹಿವಾಟಿನಲ್ಲಿ ಹೆಚ್ಚಿನ ಲಾಭಾಂಶದ ಆಮಿಷ ತೋರಿಸಿ ಇಬ್ಬರಿಗೆ 34.28 ಲಕ್ಷ ವಂಚಿಸಿದ ಎರಡು ಪ್ರತ್ಯೇಕ ಪ್ರಕರಣ ಮೈಸೂರಿನಲ್ಲಿ ನಡೆದಿದೆ.

ಈ ಸಂಬಂಧ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಿದ್ದಾರ್ಥನಗರ ನಿವಾಸಿ ಲಿಂಗೇಗೌಡ(66) ಎಂಬುವರು 25.30 ಲಕ್ಷ ಕಳೆದುಕೊಂಡರೆ ಮತ್ತೊಂದು ಪ್ರಕರಣದಲ್ಲಿ ಶಿವಾಜಿ ರಸ್ತೆಯ ಶ್ರುತಿ(34) ಎಂಬುವರು 8.98 ಲಕ್ಷ ಕಳೆದುಕೊಂಡಿದ್ದಾರೆ.

ಶೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರೆ ದಿನಕ್ಕೆ ಶೇ 5 ರಿಂದ 10ರಷ್ಟು ಲಾಭ ಗಳಿಸಬಹುದೆಂದು ಲಿಂಗೇಗೌಡ ರವರಿಗೆ ವಂಚಕರು ಆಮಿಷ ತೋರಿಸಿದ್ದಾರೆ.
ಆರಂಭದಲ್ಲಿ 50 ಸಾವಿರ ಹೂಡಿಕೆ ಮಾಡಿದಾಗ 1000 ಲಾಭ ಡ್ರಾ ಮಾಡಿದ್ದಾರೆ.ಇದನ್ನ ನಂಬಿದ ಲಿಂಗೇಗೌಡ ಹಂತ ಹಂತವಾಗಿ 25.30 ಲಕ್ಷ ಹೂಡಿಕೆ ಮಾಡಿದ್ದಾರೆ.

ಪದೇ ಪದೇ ವಂಚಕರು ಹೆಚ್ಚುವರಿ ಶೇರ್ ಗಳನ್ನ ಅಲಾಟ್ ಮಾಡಿ ಹಣ ಪಾವತಿಸುವಂತೆ ತಿಳಿಸಿದ್ದಾರೆ.

ಹೂಡಿಕೆಗಿಂತ ಹೆಚ್ಚಿನ ಶೇರ್ ಗಳು ಅಲಾಟ್ ಮಾಡಿದಾಗ ಲಿಂಗೆಗೌಡರಿಗೆ ಅನುಮಾನ ಬಂದು ಪರಿಶೀಲಿಸಿದಾಗ ತಾವು ಮೋಸ ಹೋಗಿರುವುದು ಗೊತ್ತಾಗಿದೆ.
ಶಿವಾಜಿ ರಸ್ತೆಯ ಶ್ರುತಿ ಅವರಿಗೆ 11 ಸಾವಿರ ಹೂಡಿಕೆ ಮಾಡಿದರೆ 1.30 ಲಕ್ಷ ನೀಡುವುದಾಗಿ ನಂಬಿಸಿದ್ದಾರೆ.

ಅವರು ವಿವಿದ ಹಂತಗಳಲ್ಲಿ 8.98 ಲಕ್ಷ ಹೂಡಿಕೆ ಮಾಡಿದ್ದಾರೆ.ಹೂಡಿಕೆ ಹಣ ಡ್ರಾ ಮಾಡಲು ಯತ್ನಿಸಿದಾಗ ತೆರಿಗೆ ಕಟ್ಟುವಂತೆ ಒತ್ತಾಯಿಸಿದ್ದಾರೆ.ಆಗ ಶೃತಿ ಅವರಿಗೆ ತಾನು ವಂಚನೆಗೆ ಒಳಗಾಗಿರುವುದು ಗೊತ್ತಾಗಿದೆ.

ಒಟ್ಟಾರೆ ಇಂತಹದ್ದನ್ನೆಲ್ಲ ನಂಬಬಾರದೆಂದು ಪೊಲೀಸರು ತಿಳಿಹೇಳುತ್ತಿದ್ದರೂ ಜನ ಮೋಸ ಹೋಗುತ್ತಲೇ ಇರುವುದು ವಿಪರ್ಯಾಸ.