ಚಾಮರಾಜನಗರ,ಮಾ.6: ಪ್ರೀತಿ ಮಾಡುವುದಾಗಿ ನಂಬಿಸಿ ಮದುವೆ ಆಗುವ ಉದ್ದೇಶದಿಂದ ಅಪಹರಿಸಿ ಲೈಂಗಿಕ ದೌರ್ಜನ್ಯ ನಡೆಸಿದ ಕೃತ್ಯ ಸಾಬೀತಾದ ಕಾರಣ ವ್ಯಕ್ತಿಗೆ ಜೈಲು ಶಿಕ್ಷೆ ಮತ್ತು ದಂಡ ವಿಧಿಸಿ
ಜಿಲ್ಲಾ ಮತ್ತು ಸತ್ರ ಎಫ್.ಟಿ.ಎಸ್.ಸಿ 1 ವಿಶೇಷ ಪೋಕ್ಸೊ ನ್ಯಾಯಾಧೀಶರು ಆದೇಶಿಸಿದ್ದಾರೆ.
ಕೊಳ್ಳೆಗಾಲ ತಾಲ್ಲೋಕು,ಚಿಕ್ಕಮಾಲಾಪುರ ಗ್ರಾಮದ ಆರೋಪಿ ಟ್ರಾಕ್ಟರ್ ಚಾಲಕ
ಮನೋಜ್ @ ಮನೋಜ್ ಕುಮಾರ್ (22) ಗೆ ನ್ಯಾಯಾಲಯ ಶಿಕ್ಷೆ ವಿಧಿಸಿದೆ.
ಚಾಮರಾಜನಗರ ಅಧಿಕ ಜಿಲ್ಲಾ ಮತ್ತು ಸತ್ರ ಎಫ್.ಟಿ.ಎಸ್.ಸಿ-1 ವಿಶೇಷ ಪೋಕ್ಸೊ ನ್ಯಾಯಾಧೀಶರಾದ
ಎಸ್. ಜೆ ಕೃಷ್ಣ ಅವರು ಈ ಕೆಳಕಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿಕ್ಷೆ ವಿಧಿಸಿದ್ದಾರೆ.
ಆರೋಪಿಯು ನೊಂದ ಬಾಲಕಿಯು ಅಪ್ರಾಪ್ತೆ ಆಗಿರುವಾಗ ಪ್ರೀತಿ ಮಾಡುವುದಾಗಿ ಪುಸಲಾಯಿಸಿ. ಅವಳನ್ನು ಮದುವೆ ಆಗುವ ಉದ್ದೇಶದಿಂದ ಅಪಹರಿಸಿ ಲೈಂಗಿಕವಾಗಿ ಪೀಡಿಸಿದ ಕೃತ್ಯ ಸಾಬೀತಾದ ಕಾರಣ ಅಪಹರಿಸಿದಕ್ಕೆ 3 ವರ್ಷ ಶಿಕ್ಷೆ ಮತ್ತು 15 ಸಾವಿರ ದಂಡ ಹಾಗೂ ಲೈಂಗಿಕವಾಗಿ ಪೀಡಿಸಿದಕ್ಕೆ 1 ವರ್ಷ ಶಿಕ್ಷೆ, 5 ಸಾವಿರ ದಂಡ ವಿಧಿಸಿದ್ದು ಹಾಗೂ ನೊಂದ ಬಾಲಕಿಗೆ 15 ಸಾವಿರ ರೂ ಪರಿಹಾರ ನೀಡಿ ಆರೋಪಿತನಿಗೆ ನ್ಯಾಯಾಲಯವು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಈತನ ಮೇಲೆ ಕೊಳ್ಳೆಗಾಲ ಪಟ್ಟಣ ಪೊಲೀಸ್ ಠಾಣಾ ಪ್ರಕರಣ ದಾಖಲಾಗಿದ್ದು, ತನಿಖಾಧಿಕಾರಿಗಳಾದ ಕೊಳ್ಳೆಗಾಲ ವೃತ್ತ ನಿರೀಕ್ಷಕ ಶ್ರೀಕಾಂತ್.ಆರ್ ತನಿಖೆ ಪೂರೈಸಿ ಆರೋಪಿತನ ವಿರುದ್ಧ ದೋಷಾರೋಪಣ ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಕೆ.ಯೋಗೇಶ್ ಅವರು ಸರ್ಕಾರದ ಪರವಾಗಿ ಆರೋಪಿತನ ವಿರುದ್ಧ ವಿಚಾರಣೆ ನಡೆಸಿ ವಾದವನ್ನು ಮಂಡಿಸಿದರು.