ಮೈಸೂರು: ವಿಶ್ವ ವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವದ ಅಂಗವಾಗಿ ಪ್ರತಿ ವರ್ಷದಂತೆ ಈ ಬಾರಿಯು ಸೆ.22 ರಿಂದ ಆಗಸ್ಟ್ 1 ರ ವರೆಗೆ ನಗರದ ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನದಲ್ಲಿ ಪುಸ್ತಕ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಆಯೋಜಿಸಲಾಗಿದೆ.
ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾದ ಮಾನಸ ಅವರು ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮೈಸೂರು ದಸರಾ ಮಹೋತ್ಸವ ಸಮಿತಿ ಹಾಗೂ ಬೆಂಗಳೂರಿನ ಕನ್ನಡ ಪುಸ್ತಕ ಪ್ರಾಧಿಕಾರದ ಸಹಯೋಗದಲ್ಲಿ ಈ ಮೇಳವನ್ನು ಆಯೋಜಿಸಲಾಗಿದೆ ಎಂದು ಹೇಳಿದರು. ಪ
ದಸರಾ ಪ್ರಮುಖ ಭಾಗವಾಗಿ ಪ್ರತಿ ವರ್ಷವು ಪುಸ್ತಕ ಮೇಳ ನಡೆಯುತ್ತದೆ,ಈ ಬಾರಿ ಹಿಂದೆಂದಿಗಿಂತಲೂ ವಿಭಿನ್ನವಾಗಿ ಪುಸ್ತಕ ಪ್ರದರ್ಶನವನ್ನು ಆಯೋಜಿಸಲಾಗಿದೆ. ಪ್ರತಿ ದಿನವೂ ವಿಶೇಷತೆಯನ್ನು ಹೊಂದಿರಲಿದೆ.
ಪುಸ್ತಕ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಸೆ.22 ರಂದು ಸಂಜೆ 5 ಗಂಟೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ಎಸ್. ತಂಗಡಗಿ ಅವರು ಉದ್ಘಾಟನೆ ಮಾಡಲಿದ್ದಾರೆ, ಕನ್ನಡ ಮತ್ತು ಸಂಸ್ಕೃತಿಇಲಾಖೆಯ ಕಾರ್ಯದರ್ಶಿ ಎಂ.ವಿ. ವೆಂಕಟೇಶ್, ನಿರ್ದೇಶಕರಾದ ಕೆ.ಎಂ.ಗಾಯಿತ್ರಿ ಅವರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಪ್ರತಿನಿತ್ಯ ಬೆಳಿಗ್ಗೆ 10 ರಿಂದ ರಾತ್ರಿ 8.30 ರವರೆಗೆ ನಡೆಯಲಿರುವ ಪುಸ್ತಕ ಪ್ರದರ್ಶನ ಮತ್ತು ಮಾರಾಟ ಮೇಳದಲ್ಲಿ ನಿತ್ಯವೂ ವಿಶೇಷತೆ ಇರುತ್ತದೆ, ಸಾಹಿತಿಗಳೊಂದಿಗೆ ಸೆಲ್ಫಿ, ಸಾಂಸ್ಕೃತಿಕ ಕಾರ್ಯಕ್ರಮ, ವಿಚಾರ ಗೋಷ್ಠಿಗಳು ನಡೆಯಲಿದೆ. ಜೊತೆಗೆ ಪ್ರತಿದಿನ ಬೆಳಿಗ್ಗೆ 11ಗಂಟೆಗೆ ಇದುವರೆವಿಗೂ ಬಿಡುಗಡೆ ಕಾಣದಿರುವ ವಿವಿಧ ಪುಸ್ತಕಗಳನ್ನು ಈ ಸಂದರ್ಭದಲ್ಲಿ ಬಿಡುಗಡೆ ಮಾಡುವ ಮೂಲಕ ಲೇಖಕರನ್ನು ಪ್ರೋತ್ಸಾಹಿಸಲಾಗುವುದು ಎಂದು ಹೇಳಿದರು.
ಪುಸ್ತಕ ಮೇಳ ಉದ್ಘಾಟನೆಗೂ ಮುನ್ನ ಬೆಳಿಗ್ಗೆ 10.30 ಕ್ಕೆ ಚಾಮುಂಡಿ ಬೆಟ್ಟದ ಆವರಣದಲ್ಲಿ ನಡೆಯಲಿರುವ ದಸರಾ ಉದ್ಘಾಟನಾ ಸಮಾರಂಭದಲ್ಲಿ
ಬೂಕರ್ ಪ್ರಶಸ್ತಿ ಪುರಸ್ಕೃತರಾದ ಬಾನು ಮುಷ್ತಾಕ್ ಅವರ ಕುರಿತು ಬರೆದಿರುವ ಮತ್ತು ಕನ್ನಡ ಪುಸ್ತಕ ಪ್ರಾಧಿಕಾರದಿಂದ ಪ್ರಕಟಗೊಂಡಿರುವ ಲೇಖಕ ಶಿವಾನಂದ್ ಅವರ ಬದುಕು ಬರಹ ಎಂಬ 350 ಪುಟ ಹೊಂದಿರುವ ಪುಸ್ತಕವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ರವರು ಬಿಡುಗಡೆ ಮಾಡಲಿದ್ದಾರೆ ಎಂದು ಮಾನಸ ತಿಳಿಸಿದರು.
ಒಟ್ಟು 90 ಮಳಿಗೆಗಳಲ್ಲಿ ಸುಮಾರು 50 ಸಾವಿರ ಪುಸ್ತಕಗಳು, ಓದುಗರನ್ನು ಸೆಳೆಯಲಿದೆ,ಅಲ್ಲದೆ ಮೈಸೂರು ನಗರದಾದ್ಯಂತ ಸಂಚರಿಸಲು ಸೆ.20 ರಂದು ಬೆಳಿಗ್ಗೆ 11 ಗಂಟೆಗೆ ಮಾನಸ ಗಂಗೋತ್ರಿಯಲ್ಲಿರುವ ಕುವೆಂಪು ಪ್ರತಿಮೆ ಮುಂಭಾಗದಿಂದ ಪುಸ್ತಕ ರಥವು ಹೊರಡಲಿದೆ ಇದಕ್ಕೆ ಜಿಲ್ಲಾಧಿಕಾರಿಗಳು ಚಾಲನೆ ನೀಡಲಿದ್ದಾರೆ ಎಂದು ತಿಳಿಸಿದರು.
ಸೆ.23 ಕ್ಕೆ ಡಾ.ಎಲ್.ಎನ್.ಮುಕುಂದರಾಜ್, ವಸುಧೇಂದ್ರ, ಸೆ.24ರಂದು ಡಾ.ಸುಕನ್ಯಾ ಮಾರುತಿ, ಡಾ.ರಾಜಪ್ಪದಳವಾಯಿ, ಸೆ.25ರಂದು ನರಸಿಂಹಮೂರ್ತಿ, ಸೆ.26ರಂದು ಶಂಕರ್ ಅಶ್ವತ್, ಸೆ.28ರಂದು ಪ್ರೊ.ಎಂ.ಕೃಷ್ಣೇಗೌಡರು, ಸೆ.29ರಂದು ಡಾ.ಅರವಿಂದ ಮಾಲಗತ್ತಿ, ಸೆ.30ರಂದು ಡಾ.ಟಿ.ವಿ.ವೆಂಕಟಾಚಲಶಾಸ್ತ್ರೀ ಅವರು ಪ್ರತಿ ಮಳಿಗೆಗಳಿ ಭೇಟಿ ನೀಡಿ ಸಾಹಿತಿಗಳೊಂದಿಗೆ ಸೆಲ್ಫಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ವಿವರಿಸಿದರು
ರಾಷ್ಟ್ರಕವಿ ಕುವೆಂಪು ವೇದಿಕೆಯಲ್ಲಿ ವಿಚಾರ ಗೋಷ್ಠಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವು ಪ್ರತಿದಿನ ಸಂಜೆ 4.30 ಕ್ಕೆ ನಡೆಯಲಿದೆ ಎಂದರು.
ಸೆ.23ರಂದು ವಸುಧೇಂದ್ರ, ಪ್ರೀತಿನಾಗರಾಜ್, ಮಂಜುಳಾ ಕಿರುಗಾವಲು, ಡಾ.ಸಿದ್ದರಾಮ್ ಹೊನ್ನಲ್ ಅವರಿಂದ ಬಾನು ಮುಷ್ತಾಕ್ ಬದುಕು ಬರಹ ಕುರಿತ ಚರ್ಚೆ ನಡೆಯಲಿದೆ.
ಸೆ.24ರಂದು ರಾಯಚೂರಿನ ಕೆ.ವಿ.ಪ್ರಭಾ ಮತ್ತು ತಂಡದವರಿಂದ ಭಾವಗೀತೆ ಗಾಯನ, ಸೆ.25ರಂದು ಕವಿಗೋಷ್ಠಿ ಮತ್ತು ಕುಂಚ ಕಾವ್ಯ ಗಾಯನ, ಸೆ.26ರಂದು ಮೈಸೂರಿನ ಜಿ.ಆರ್.ಶ್ರೀ ವತ್ಸ ಮತ್ತು ತಂಡದವರಿಂದ ಜನಪದ ಗೀತೆಗಳ ಗಾಯನ, ಸೆ.27ರಂದು ಯುವರಾಜ ಕಾಲೇಜು ವಿದ್ಯಾರ್ಥಿಗಳಿಂದ ನನ್ನ ಮೆಚ್ಚಿನ ಪುಸ್ತಕದ ಓದು, ಸೆ.28ರಂದು ಮೈಸೂರಿನ ವೃಕ್ಷ ಟ್ರಸ್ಟ್ ಅವರಿಂದ ರಂಗ ಗೀತೆಗಳ ಗಾಯನ, ಸೆ.29ರಂದು ಬೆಂಗಳೂರಿನ ತೌಲನಿಕ ಅಧ್ಯಯನ ಸಂತಕವಿ ಕನಕದಾಸ ಮತ್ತು ತತಗವ ಪದಕಾರರ ಅಧ್ಯಯನ ಕೇಂದ್ರದವರಿಂದ ಬಸವಣ್ಣ ಮತ್ತು ಕನಕದಾಸರ ಕುರಿತ ವಿಚಾರ ಸಂಕಿರಣ, ಸೆ.30ರಂದು ಬೆಂಗಳೂರಿನ ಕರ್ನಾಟಕ ಯಕ್ಷಗಾನ ಅಕಾಡೆಮಿ ವತಿಯಿಂದ ಕೃಷ್ಣಮೂರ್ತಿ ಶಾಸ್ತ್ರಿ ಮತ್ತು ತಂಡದವರಿಂದ ಕಂಸವಧೆ ಯಕ್ಷಗಾನ ಪ್ರಸಂಗ ಕುರಿತು ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಲಿದೆ ಎಂದು ವಿವರಿಸಿದರು.
ಸುದ್ದಿ ಗೋಷ್ಠಿಯಲ್ಲಿ ಸಮನ್ವಯಾಧಿಕಾರಿ ವಿ.ಎನ್.ಮಲ್ಲಿಕಾರ್ಜುನ ಸ್ವಾಮಿ, ಮೈಸೂರು ವಿವಿ ಪ್ರಸಾರಾಂಗದ ನಿರ್ದೇಶಕರಾದ ಡಾ.ನಂಜಯ್ಯ ಹೊಂಗನೂರು, ಆಡಳಿತಾಧಿಕಾರಿ ಕೆ.ಬಿ.ಕಿರಣ್ ಸಿಂಗ್, ಸಮಿತಿ ಸದಸ್ಯರಾದ ರಾಜಶೇಖರ್ ಕದಂಬ, ಚಂದ್ರಶೇಖರ್, ಡಾ.ಮಹೇಶ್ ಚಿಕ್ಕಲೂರು, ಸುಚಿತ್ರಾ, ಮೈ.ನಾ.ಲೋಕೇಶ್, ಕೆ.ಎಸ್.ಶಿವರಾಂ, ರವಿನಂದನ್ ಹಾಗೂ ಪ್ರಮೋದ್ ಮತ್ತಿತರರು ಉಪಸ್ಥಿತರಿದ್ದರು.