ಸಿಎಂ ಕಾರ್ಯಕ್ರಮದ ವೇಳೆ ಭದ್ರತಾ ಲೋಪ

Spread the love

ಬೆಂಗಳೂರು: ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ವಿಧಾನಸೌಧದ ಮುಂಭಾಗ ಹಮ್ಮಿಕೊಂಡಿದ್ದ ಮಾನವ ಸರಪಳಿ ಕಾರ್ಯಕ್ರಮದಲ್ಲಿ ಭದ್ರತಾ ಲೋಪ ಸಂಭವಿಸಿದೆ.

ಸಂವಿಧಾನದ ಆಶಯ ಜಾಗೃತಿಗೊಳಿಸುವ ಸದುದ್ದೇಶದಿಂದ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆ ನಿಮಿತ್ತ ಬೆಂಗಳೂರು ವಿಧಾನಸೌಧದ ಮುಂಭಾಗ ಹಮ್ಮಿಕೊಂಡಿದ್ದ ಮಾನವ ಸರಪಳಿ ಕಾರ್ಯಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ಅವರು ಚಾಲನೆ ನೀಡಿದ್ದರು.

ಮಾನವ ಸರಪಳಿಗೆ ವಿಧಾನಸೌಧದ ಪೂರ್ವ ದ್ವಾರದ ಮೆಟ್ಟಿಲುಗಳ ಮೇಲೆ ನಗಾರಿ ಬಾರಿಸುವ ಮೂಲಕ ಸಿಎಂ ಚಾಲನೆ ನೀಡಿದರು.

ಕಾರ್ಯಕ್ರಮದ ವೇಳೆ ಕೇಸರಿ ಶಾಲು ಹಿಡಿದ ಯುವಕನೊಬ್ಬ ಏಕಾಏಕಿ ಸಿಎಂ ಕುಳಿತಿದ್ದ ವೇದಿಕೆಗೆ ಮೆಟ್ಟಿಲುಗಳ ಮಾರ್ಗವಾಗಿ ಸಿಎಂ ಕಡೆಗೆ ನುಗ್ಗಿದ್ದಾನೆ. ಈ ವೇಳೆ ವೇದಿಕೆಯಲ್ಲಿದ್ದ ಭದ್ರತಾ ಸಿಬ್ಬಂದಿ ಆತನನ್ನ ತಡೆಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಬಂಧಿತ ಯುವಕನನ್ನ ಮಹದೇವ್ ನಾಯಕ್ ಎಂದು ಗುರುತಿಸಲಾಗಿದೆ,ಈತ ಕಳೆದ ಒಂದು ವಾರದಿಂದ ಸಿಎಂ ಭೇಟಿಗೆ ಯತ್ನಿಸಿದ್ದ,ಮಾನವ ಸರಪಳಿ ಕಾರ್ಯಕ್ರಮದ ವೇಳೆಯೂ ಜನಜಂಗುಳಿ ಮಧ್ಯೆ ತೂರಿಕೊಂಡು ಹೋಗಿದ್ದ.

ಈತ ಸಿಎಂ ಮೇಲಿನ ಪ್ರೀತಿಯಿಂದ ಅವರಿಗೆ ಶಾಲು ಹೊದಿಸಲು ಬಂದಿದ್ದ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.

ಬಂಧಿತ ಯುವಕ ಬೆಂಗಳೂರು ಬನಶಂಕರಿಯಲ್ಲಿ ವಾಸವಾಗಿದ್ದು, ಉತ್ತರ ಕರ್ನಾಟಕ ಮೂಲದವನು.

ವಿಧಾನಸೌಧ ಠಾಣೆಯಲ್ಲಿ ಪೊಲೀಸರು ವಿಚಾರಣೆ ನಡೆಸಿದ್ದು,ಸತ್ಯಾಸತ್ಯತೆ ಇನ್ನಸ್ಟೇ ತಿಳಿಯಬೇಕಿದೆ.