ಶಾಲಾ, ಕಾಲೇಜು ವ್ಯಾಪಿಯಲ್ಲಿ ತಂಬಾಕು ಮಾರಾಟ ಮಾಡಿದರೆ ಕಠಿಣ ಶಿಕ್ಷೆ: ಡಾ. ಪಿ ಶಿವರಾಜು

Spread the love

ಮೈಸೂರು: ಶಾಲಾ- ಕಾಲೇಜಿನ ಸುತ್ತ-ಮುತ್ತ 100 ಮೀಟರ್ ವ್ಯಾಪ್ತಿಯಲ್ಲಿ ತಂಬಾಕು ಹಾಗೂ ಮಾದಕ ವಸ್ತುಗಳನ್ನು ಮಾರಾಟ ಮಾಡುವುದು ಕಂಡುಬಂದರೆ ಅಂತವರ ವಿರುದ್ಧ ಕಠಿಣ ಕ್ರಮ ಕೈಗೊಳಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಡಾ. ಪಿ ಶಿವರಾಜು ಎಚ್ಚರಿಕೆ ನೀಡಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನ ಸಭೆಯಲ್ಲಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಶಾಲಾ-ಕಾಲೇಜಿನ ಮಕ್ಕಳು ತಂಬಾಕು ಸೇವನೆಗೆ ಒಳಗಾಗುತ್ತಿದ್ದಾರೆ ಎಂದು ಹೇಳಿದರು.

ಸುತ್ತ,ಮುತ್ತ ಇರುವ ಪೆಟ್ಟಿ ಅಂಗಡಿಗಳು ಹಾಗೂ ವ್ಯಕ್ತಿಗಳು ಯಾರಿಗೂ ತಿಳಿಯದಂತೆ ಅವುಗಳನ್ನು ಮಕ್ಕಳಿಗೆ ಮಾರಾಟ ಮಾಡಿ ಮಕ್ಕಳನ್ನು ವ್ಯಸನಿಗಳನ್ನಾಗಿ ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಹೀಗೆ ಮಾರಾಟ ಮಾಡುವವರನ್ನು ಗುರುತಿಸಿ ಕಠಿಣ ಶಿಕ್ಷೆ ಹಾಗೂ ದಂಡವನ್ನು ವಿಧಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಶಿವರಾಜು ಸೂಚಿಸಿದರು.

ಅಧಿಕಾರಿಗಳು ಶಾಲಾ ಕಾಲೇಜುಗಳಿಗೆ ಭೇಟಿ ನೀಡಿ ತಂಬಾಕು ಸೇವನೆಯ ಸಂಬಂಧ ಕಾರ್ಯಕ್ರಮಗಳನ್ನು ರೂಪಿಸಿ ಮಕ್ಕಳಿಗೆ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.

ಕಾನೂನು ಬಾಹಿರವಾಗಿ ತಂಬಾಕು ಮಾರಾಟ ಮಾಡುತ್ತಿರುವಂತಹ ಅಂಗಡಿಯ ಪರವಾನಗಿಯನ್ನು ರದ್ದು ಮಾಡಿ, ಅಂಗಡಿ ಮಾಲೀಕನಿಗೆ ದಂಡವನ್ನು ವಿಧಿಸಬೇಕು. ಸಾರ್ವಜನಿಕವಾಗಿ ತಂಬಾಕು ಸೇವನೆ ಮಾಡುವವರಿಗೂ ದಂಡ ಹಾಕಬೇಕು ಎಂದು ತಿಳಿಸಿದರು.

ಯಾವುದೇ ತಂಬಾಕು ಸಂಸ್ಥೆಗಳು ತಮ್ಮ ಬ್ರಾಂಡ್ ಹಾಗೂ ಥೀಮ್ ಗಳನ್ನು ಪ್ರಚಾರ ಮಾಡುವಂತಿಲ್ಲ, ಈಗಾಗಲೇ ಕೆಲವು ಶಾಪ್ ಗಳಲ್ಲಿ ತಂಬಾಕು ಸಂಬಂಧಿಸಿದ ಜಾಹೀರಾತುಗಳು ಏನಾದರೂ ಇದ್ದರೆ ಅವುಗಳನ್ನು ತಕ್ಷಣವೇ ತೆರವುಗಿಸುವಂತೆ ಅಂಗಡಿ ಅಥವಾ ಶಾಪ್ ಮಾಲೀಕನಿಗೆ ತಿಳಿಸಬೇಕು ಎಂದು ಹೇಳಿದರು.

ಸಭೆಯಲ್ಲಿ ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಪಿ ಸಿ ಕುಮಾರಸ್ವಾಮಿ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಸವಿತಾ ಸೇರಿದಂತೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು.