ಶಾಸಕ ಸತೀಶ್ ಸೈಲ್ ಬಂಧನ

Spread the love

ಬೆಂಗಳೂರು: ಬೇಲೆಕೇರಿ ಅದಿರು ನಾಪತ್ತೆ ಪ್ರಕರಣದಲ್ಲಿ ಕಾರವಾರ ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ದೋಷಿ ಎಂದು ನ್ಯಾಯಾಲಯ ತೀರ್ಪು ನೀಡಿದ್ದು ಅವರನ್ನು ಬಂಧಿಸಲಾಗಿದೆ.

ಈ ಪ್ರಕರಣ 2010 ರಲ್ಲಿ ದಾಖಲಾಗಿದ್ದು ಜನಪ್ರತಿನಿಧಿಗಳ ನ್ಯಯಾಲಯ ಮಹತ್ವದ ತೀರ್ಪು ನೀಡಿದೆ.

ಎಲ್ಲಾ ಆರು ಪ್ರಕರಣಗಳಲ್ಲಿ ಸತೀಶ್ ಶೈಲ್ ದೋಷಿ ಎಂದು ಕೋರ್ಟ್ ತೀರ್ಪು ನೀಡಿದ್ದು,ಶಿಕ್ಷೆ ಪ್ರಮಾಣವನ್ನು ನಾಳೆ ಪ್ರಕಟಿಸುವುದಾಗಿ ತಿಳಿಸಿದೆ.

ಸಿಬಿಐನಿಂದ ಬೇಲೇಕೇರಿ ಅದಿರು ನಾಪತ್ತೆಗೆ ಸಂಬಂಧಿಸಿದಂತೆ ದಾಖಲಾದ 6 ಪ್ರಕರಣಗಳ ಬಗ್ಗೆ ತನಿಖೆ ನಡೆಸಿ ಚಾರ್ಜ್‌ಶೀಟ್ ಸಲ್ಲಿಕೆ ಮಾಡಲಾಗಿತ್ತು.ಹಾಗಾಗಿ ಸಿಬಿಐ ಅವರನ್ನು ‌ವಶಕ್ಕೆ ಪಡೆದಿದೆ.

ನ್ಯಾಯಾಧೀಶರಾದ ಸಂತೋಷ್ ಗಜಾನನ ಭಟ್ ಅವರು ವಾದ ಪ್ರತಿವಾದ ಆಲಿಸಿ ಅಂತಿಮ ಆದೇಶವನ್ನು ಹೊರಡಿಸಿದ್ದಾರೆ.

ಶಾಸಕ ಸೈಲ್ ರನ್ನು ಸೇರಿದಂತೆ ಈ ಪ್ರಕರಣದಲ್ಲಿ ಮಹೇಶ್ ಬಿಳಿಯೆ, ಚೇತನ್ ಷಾ, ಸೋಮಶೇಖರ್, ಸ್ವಸ್ತಿಕ್ ನಾಗರಾಜ್,ಕೆವಿಎನ್ ಗೋವಿಂದರಾಜು ,
ಮಹೇಶ್ ಕುಮಾರ್ ಕೆ,ಪ್ರೇಮಚಂದ್ ಗರ್ಗ,ಸುಶೀಲ್ ಕುಮಾರ್ ವಲೇಚ,ರಾಜ್ ಕುಮಾರ್ ಈ ಎಲ್ಲಾ ಆರೋಪಿಗಳು ದೋಷಿಗಳು ಎಂದು ಕೋರ್ಟ್ ತೀರ್ಪು ನೀಡಿದೆ.

ಶಾಸಕ ಸತೀಶ್ ಸೈಲ್ ಮಾಲೀಕತ್ವದ ಕಂಪನಿ ವಿರುದ್ಧ 13 ಸೆ. 2013ರಂದು ಸಿಬಿಐ ಪ್ರಥಮ ಮಾಹಿತಿ ವರದಿ ದಾಖಲಿಸಿತ್ತು. ಸುಪ್ರಿಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ 2009ರ ಆರಂಭದಿಂದ ಮೇ. 2010ರ ನಡುವೆ ರಾಜ್ಯದಲ್ಲಿ ನಡೆದ ಅಕ್ರಮ ಗಣಿಗಾರಿಕೆ ಹಾಗೂ ಅದಿರು ಸಾಗಣೆ ಕುರಿತು ತನಿಖೆ ಆರಂಭಿಸಲಾಗಿತ್ತು.

ಈ ಸಮಯದಲ್ಲೇ ಸಿಬಿಐ ದಾಖಲಿಸಿದ್ದ ಐದು ಪ್ರತ್ಯೇಕ ಎಫ್‌ಐಆರ್‌ಗಳ ಪೈಕಿ ಶಾಸಕ ಸತೀಶ್ ಸೈಲ್ ಮಾಲೀಕತ್ವ ಹೊಂದಿರುವ ಮಲ್ಲಿಕಾರ್ಜುನ ಶಿಪ್ಪಿಂಗ್ ಪ್ರೈ. ಲಿ.ಪ್ರಮುಖ ಸ್ಥಾನ ಪಡೆದುಕೊಂಡಿದ್ದು. ಆರ್‌ಸಿ 16 ‘ಎ’ ಹೆಸರಿನಲ್ಲಿ ಸಿಬಿಐ ದಾಖಲಿಸಿದ್ದ ಎಫ್‌ಐಆರ್, ಎಂಟು ತಿಂಗಳ ಅವಧಿಯಲ್ಲಿ ಸೈಲ್ ಮಾಲೀಕತ್ವದ ಕಂಪನಿ ಸುಮಾರು 7.23 ಲಕ್ಷ ಟನ್ ಮೆಟ್ರಿಕ್ ಅದಿರನ್ನು ಬೇಲಿಕೇರಿ ಮೂಲಕ ವಿದೇಶಕ್ಕೆ ರಫ್ತು ಮಾಡಿರುವುದು ಮೇಲ್ನೋಟಕ್ಕೆ ಕಂಡು ಬರುತ್ತದೆ ಎಂದು ತಿಳಿಸಿತ್ತು.

2009ರಿಂದ 2010ರ ಮೇ ತಿಂಗಳವರೆಗೆ ಬೇಲಿಕೇರಿ ಬಂದರಿನ ಮೂಲಕ ಸುಮಾರು 88. 06 ಲಕ್ಷ ಮೆಟ್ರಿಕ್ ಟನ್ ಅದಿರು, 73 ರಫ್ತು ಕಂಪನಿಗಳ ಮೂಲಕ ವಿದೇಶಕ್ಕೆ ಹೋಗಿತ್ತು ಎಂಬುದನ್ನು ಸಿಇಸಿ ವರದಿಯಲ್ಲಿ ಪಟ್ಟಿ ಮಾಡಲಾಗಿತ್ತು.

ಇಷ್ಟು ಪ್ರಮಾಣ ಅದಿರು ರಫ್ತಾಗಿದ್ದರೂ, ಕೇವಲ 38. 22 ಲಕ್ಷ ಮೆಟ್ರಿಕ್ ಟನ್‌ನಷ್ಟು ಅದಿರಿಗೆ ಮಾತ್ರವೇ ಅದಿರು ಕಳುಹಿಸಲು ಪರವಾನಗಿ (ಎಂಡಿಪಿ)ಯನ್ನು ಪಡೆಯಲಾಗಿತ್ತು. ಒಟ್ಟಾರೆ ಸುಮಾರು 50 ಲಕ್ಷ ಮೆಟ್ರಿಕ್‌ನಷ್ಟು ಅದಿರು ಅಕ್ರಮವಾಗಿ ವಿದೇಶಗಳಿಗೆ ಹೋಗಿತ್ತು ಎಂಬುದನ್ನು ತನಿಖೆ ವೇಳೆ ಕಂಡುಹಿಡಿಯಲಾಗಿತ್ತು.

ಹೀಗೆ ರಫ್ತಾಗಿರುವ ಅದಿರನಲ್ಲಿ 7. 23 ಲಕ್ಷ ಮೆಟ್ರಿಕ್ ಟನ್ ಅದಿರನ್ನು ಕಳುಹಿಸಿರುವುದು ಸತೀಶ್ ಸೈಲ್ ಒಡೆತನದ ಮಲ್ಲಿಕಾರ್ಜುನ ಶಿಪ್ಪಿಂಗ್ ಪ್ರೈ. ಲಿ. ಎಂಬುದು ಆರೋಪ. ಜುಂಜುನ್‌ಬೈಲ್ ಸ್ಟಾಕ್‌ಯಾರ್ಡ್ ಸೇರಿದಂತೆ ಇತರೆ ಅದಿರು ಸಾಗಣೆದಾರರ ಜತೆ ಮಲ್ಲಿಕಾರ್ಜುನ ಶಿಪ್ಪಿಂಗ್ ಕಂಪನಿ ನಿಕಟ ವ್ಯವಹಾರ ನಡೆಸಿತ್ತು ಎಂಬುದಕ್ಕೆ ಸಿಬಿಐ ತನಿಖಾ ತಂಡ ದಾಖಲೆಗಳನ್ನು ಕಲೆ ಹಾಕಿ ವರದಿ ಸಲ್ಲಿಸಿತ್ತು.

ಅದಿರು ಅಕ್ರಮ ರಫ್ತು ಪ್ರಕರಣದಲ್ಲಿ ಸಿಬಿಐ 2012 ರ ಸೆ. 16 ರಂದು ಶಾಸಕ ಸತೀಶ್ ಸೈಲ್ ಮನೆಯ ಮೇಲೆ ದಾಳಿ ಮಾಡಿ ಮಹತ್ವದ ದಾಖಲೆ ವಶಪಡಿಸಿಕೊಂಡಿತ್ತು.

ಇದರ ನಂತರ 2013ರ ಸೆ. 20 ರಂದು ಸೈಲ್ ಅವರನ್ನು ಬಂಧಿಸಿತ್ತು. ಇದರಿಂದಾಗಿ ಸೈಲ್ ವರ್ಷಕ್ಕೂ ಅಧಿಕ ಕಾಲ ಜೈಲು ವಾಸ ಅನುಭವಿಸಬೇಕಾಯಿತು.ಅದರ ನಂತರ 2014ರ ಡಿಸೆಂಬರ್ 16ಕ್ಕೆ ಜಾಮೀನು ಪಡೆದು ಹೊರಬಂದಿದ್ದರು.