ನರೇಗಾ ಯೋಜನೆ: ಹಣಕಾಸು ಆಯೋಗದ ಸಾಮಾಜಿಕ ಪರಿಶೋಧನೆ ಸಭೆ

(ವರದಿ:ಸಿದ್ದರಾಜು,ಕೊಳ್ಳೇಗಾಲ)

ಕೊಳ್ಳೇಗಾಲ: ತಾಲ್ಲೂಕಿನ ಸತ್ತೇಗಾಲ ಗ್ರಾಮ ಪಂಚಾಯಿತಿಯಲ್ಲಿ 2024-25 ನೇ ಸಾಲಿನ ಮೊದಲ ಹಂತದ ನರೇಗಾ ಯೋಜನೆ ಹಾಗೂ 15 ನೇ ಹಣಕಾಸು ಯೋಜನೆ, ರಾಜ್ಯ ಹಣಕಾಸು ಆಯೋಗದ ಸಾಮಾಜಿಕ ಪರಿಶೋಧನೆ ಸಭೆ ನಡೆಯಿತು.

ಗ್ರಾಮ ಪಂಚಾಯಿತಿ ಮುಂಭಾಗದಲ್ಲಿ ಅಧ್ಯಕ್ಷ ಮಲ್ಲೇಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನರೇಗಾ ಯೋಜನೆಯ ಅನುದಾನದಲ್ಲಿ ಏ.1, 2024 ರಿಂದ ಮಾ.31, 2025 ರ ವರೆಗೆ ನಡೆಸಲಾಗಿರುವ ಕಾಮಗಾರಿಗಳು ಹಾಗೂ 15 ನೇ ಹಣಕಾಸು ಯೋಜನೆ, ರಾಜ್ಯ ಹಣಕಾಸು ಆಯೋಗದ ಅನುದಾನದಲ್ಲಿ 2020 – 2021 ನೇ ಸಾಲಿನಿಂದ 2024-2025 ನೇ ಸಾಲಿನ ವರೆಗೆ ನಡೆಸಲಾಗಿರುವ ಕಾಮಗಾರಿಗಳ ವಿವರವನ್ನು ನರೇಗಾ ಲೆಕ್ಕಪರಿಶೋಧನಾ ಸಂಯೋಜಕ  ಸಿದ್ದಪ್ಪಾಜಿ ಅವರು ಸಾರ್ವಜನಿಕರ ಸಮ್ಮುಖದಲ್ಲಿ ಸಭೆಗೆ ಮಂಡಿಸಿದರು.

ನರೇಗಾ ಯೋಜನೆಯಡಿ ಗ್ರಾ.ಪಂ ವತಿಯಿಂದ 91ಕಾಮಗಾರಿಗಳು ಹಾಗೂ ಕಾಮಗಾರಿ ಅನುಷ್ಠಾನ ಇಲಾಖೆಗಳಿಂದ 11 ಕಾಮಗಾರಿಗಳು ಸೇರಿದಂತೆ ಒಟ್ಟು 112 ಕಾಮಗಾರಿಗಳನ್ನು ನಡೆಸಲಾಗಿದೆ. ಈ ಕಾಮಗಾರಿಗಳಿಗೆ ಒಟ್ಟು 8137684 ರೂ.ಗಳು ಖರ್ಚಾಗಿದ್ದು ಅದರಲ್ಲಿ ಕೂಲಿ ಮೊತ್ತ  7845165 ರೂ., ಸಾಮಾಗ್ರಿ ಮೊತ್ತ 292519 ರೂ.ಆಗಿದೆ. ದನದ ಕೊಟ್ಟಿಗೆನಿರ್ಮಾಣ ಕಾಮಗಾರಿ, ವಿವಿಧ ವಸತಿ ಯೋಜನೆಗಳಡಿ ಮನೆಗಳ ನಿರ್ಮಾಣ ಕಾಮಗಾರಿ, ಕಾಲುವೆಗಳ ಹೂಳು ತೆಗೆಸುವ ಕಾಮಗಾರಿ, ಮಳೆ ನೀರು ಕೊಯ್ಲು ನಿರ್ಮಾಣ ಸೇರಿದಂತೆ ಇನ್ನಿತರ ಕಾಮಗಾರಿಗಳು ನಡೆಸಲಾಗಿದ್ದು, ಈ ಕಾಮಗಾರಿ ಕೂಲಿ ಮೊತ್ತ 7433741 ರೂ., ಸಾಮಾಗ್ರಿ ವೆಚ್ಚ 98363 ರೂ. ಒಟ್ಟು 7532104 ರೂ. ವೆಚ್ಚವಾಗಿದೆ.

ಕಾಮಗಾರಿ ಅನುಷ್ಠಾನ ಇಲಾಖೆಗಳಾದ ಅರಣ್ಯ ಇಲಾಖೆ, 7 ಕಾಮಗಾರಿಗಳು, ತೋಟಗಾರಿಕೆ ಇಲಾಖೆ 3 ಕಾಮಗಾರಿಗಳು, ರೇಷ್ಮೆಇಲಾಖೆಯ 1 ಕಾಮಗಾರಿ ಸೇರಿ ಒಟ್ಟು 11 ಕಾಮಗಾರಿಗಳನ್ನು ನಡೆಸಲಾಗಿದ್ದು ಅರಣ್ಯ ಇಲಾಖೆ ಗ್ರಾ.ಪಂ ವ್ಯಾಪ್ತಿಯಲ್ಲಿ ನಿರ್ಮಾಣ ಮಾಡಿರುವ ನೆಡುತೋಪು ನಿರ್ವಹಣೆ ಹಾಗೂ ವಿವಿಧೆಡೆ ಹೊಸದಾಗಿ ಸಸಿ ನೆಡುವ ಕಾಮಗಾರಿಗಳಿಗೆ ಬಳಕೆ ಯಾಗಿರುವ ಕೂಲಿ ಮೊತ್ತ  205514 ರೂ., ಸಾಮಾಗ್ರಿ ವೆಚ್ಚ 194156 ರೂ. ಒಟ್ಟು 399670 ರೂ. ಗಳು, ತೋಟಗಾರಿಕೆ ಇಲಾಖೆ ಸತ್ತೇಗಾಲ ಗ್ರಾಮದ ನಂಜುಂಡಯ್ಯ ಬಿನ್ ಲೇ.ಕೆಂಚಯ್ಯ ವೆಂಕಟೇಶ್ ಬಿನ್ ಲೇ. ವೆಂಕಟಯ್ಯ ಹಾಗೂ ಸಿದ್ದರಾಜು ಬಿನ್ ಸಿದ್ದನಾಯಕ ಅವರ ರೈತರ ಜಮೀನುಗಳಲ್ಲಿ ನಡೆಸಿರುವ ಅಂಗಾಂಶ ಬಾಳೆ ಪ್ರದೇಶ ವಿಸ್ತರಣೆ ಕಾಮಗಾರಿಯ ಕೂಲಿ ಮೊತ್ತ 169265 ರೂ., ರೇಷ್ಮೆಇಲಾಖೆ ಸತ್ತೇಗಾಲ ಗ್ರಾಮದ ಗೌರಮ್ಮ ಕೋಂ ಚಿಕ್ಕೆಂಚೇಗೌಡರ ಜಮೀನಿನಲ್ಲಿ ನಡೆಸಿರುವ ಹಿಪ್ಪುನೇರಳೆ ನಾಟಿ ಕಾಮಗಾರಿ ಕೂಲಿ 36645 ರೂ.ಗಳನ್ನು ಬಳಸಿಕೊಳ್ಳಲಾಗಿದೆ.

15 ನೆ ಹಣಕಾಸು ಯೋಜನೆ ಅನುದಾನದಲ್ಲಿ ಗ್ರಾಂ, ಪಂ. ತಾ. ಪಂ, ಜಿ.ಪಂ ಗಳ ವತಿಯಿಂದ ಕಾಮಗಾರಿಗಳನ್ನು ನಡೆಸಲಾಗಿದ್ದು ಅದರಲ್ಲಿ ಬಹುತೇಕ ಪಂಚಾಯಿತಿ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಶಾಲೆಗಳ ದುರಸ್ಥಿ, ಸುತ್ತುಗೋಡೆಗಳ ನಿರ್ಮಾಣ, ಅಂಗನವಾಡಿಗಳ ದುರಸ್ಥಿ, ಚರಂಡಿ, ರಸ್ತೆ ನಿರ್ಮಾಣ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ ಹಾಗೂ ಕುಡಿಯುವ ನೀರಿಗೆ ಕೊಳವೆ ಬಾವಿ ಕೊರೆಸುವುದು, ಪೈಪ್ ಲೈನ್, ವಿದ್ಯುತ್ ಬಿಲ್, ನೌಕರರ ವೇತನಕ್ಕಾಗಿ ಬಳಸಿಕೊಳ್ಳಲಾಗಿದೆ

ಗ್ರಾ. ಪಂ ಅನುಧಾನ 5136918 ರೂ.ಗಳು ತಾ. ಪಂ ಅನುಧಾನ 7825738 ರೂ. ಗಳು  ಜಿ. ಪಂ ಅನುಧಾನ 42.55 ಲಕ್ಷ ರೂ.ಗಳು ಸೇರಿದಂತೆ ಒಟ್ಟು 13, 52.17 ರೂ.ಗಳನ್ನು ಖರ್ಚು ಮಾಡಲಾಗಿದೆ ಎಂದು ತಿಳಿಸಿದರು.

ಗ್ರಾ.ಪಂ. ನೋಡಲ್ ಅಧಿಕಾರಿ ಹಾಗೂ ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ರಂಗಸ್ವಾಮಿ ಮಾತನಾಡಿ ಮಹಾತ್ಮ ಗಾಂಧೀಜಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿಯಲ್ಲಿ ಹಲವಾರು ಉಪಯೋಗಗಳಿವೆ. ಕೇಂದ್ರ ಸರ್ಕಾರ ಗ್ರಾಮೀಣ ಭಾಗದ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸುವ ಸಲುವಾಗಿ ಮಹಾತ್ಮ ಗಾಂಧೀಜಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು ಅನುಷ್ಠಾನಕ್ಕೆ ತಂದು ಸಧ್ಯದ ಮಟ್ಟಿಗೆ ಈ ಯೋಜನೆಯಿಂದ ಬಡ ಜನರು ಆರ್ಥಿಕವಾಗಿ ಚೇತರಿಸಿ ಕೊಳ್ಳಲು ಅನುಕೂಲವಾಗಿದೆ. ಆದ್ದರಿಂದ ಸಾರ್ವಜನಿಕರು ಜಾಬ್ ಕಾರ್ಡ್ ಗಳನ್ನು ಮಾಡಿಸಿಕೊಂಡು ಪಂಚಾಯಿತಿಗೆ ಮುಂಚಿತವಾಗಿ ಕೆಲಸವನ್ನು ಕೇಳಿ ಅರ್ಜಿ ಸಲ್ಲಿಸಿ ಆಗತ್ಯವಾದ ಕೆಲಸಗಳನ್ನು ಮಾಡಿಸಿ ಕೂಲಿ ಹಣವನ್ನು ಪಡೆದುಕೊಳ್ಳುತ್ತಿದ್ದಾರೆ ಯಾರಾದರೂ ಜಾಬ್ ಕಾರ್ಡ್ ಮಾಡಿಸಿಕೊಂಡಿಲ್ಲದಿದ್ದರೆ ಪಂಚಾಯಿತಿಗೆ ಅರ್ಜಿ ಸಲ್ಲಿಸಿ ಜಾಬ್ ಕಾರ್ಡ್ ಗಳನ್ನು ಮಾಡಿಸಿಕೊಂಡು ಯೋಜನೆಯ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಸಭೆಯಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಎಂ.ಎಸ್.ಸುವರ್ಣ,
ಸದಸ್ಯರುಗಳಾದ ಮಂಟ್ಯಲಿಂಗ ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಜುನೇದ್ ಅಹಮದ್, ಕಾರ್ಯದರ್ಶಿ ಶಿವಪ್ರಸಾದ್ ಮತ್ತು ಸಿಬ್ಬಂದಿ ವರ್ಗ ಹಾಜರಿದ್ದರು.