ಮೈಸೂರು: ಮೈಸೂರಿನ ಸರಸ್ವತಿ ಭಾರತೀಯ ಸಂಸ್ಕಾರ ಕೇಂದ್ರದಲ್ಲಿ ಕೂಡ್ಲೂರು ಗುಂಡಪ್ಪ ಪ್ರತಿಷ್ಠಾನದ ವತಿಯಿಂದ ಋಗ್ವೇದ ಮತ್ತು ಯಜುರ್ವೇದದ ಉಪಾಕರ್ಮ ಹಮ್ಮಿಕೊಳ್ಳಲಾಯಿತು.
ಈ ವೇಳೆ ಮಾತನಾಡಿದ ಸರಸ್ವತಿ ಭಾರತೀಯ ಸಂಸ್ಕಾರ ಕೇಂದ್ರದ ಪುನೀತ್ ಜಿ ಕೂಡ್ಲೂರು ಅವರು, ಉಪಾಕರ್ಮ ಅಥವಾ ನೂಲಿನ ಹುಣ್ಣಿಮೆ ಅಂದರೆ ಕೇವಲ ನೂತನ ಜನಿವಾರ ಧರಿಸುವುದಲ್ಲ,ಉಪಾಕರ್ಮ ಅಂದರೆ ಉಪಕ್ರಮ ಅಂದರೆ ಆರಂಭ ಎಂದು ತಿಳಿಸಿಕೊಟ್ಟರು.
ವೇದಗಳ ಅಧ್ಯಯನದ ಆರಂಭ ಹಿಂದೆ ಗುರುಕುಲದಲ್ಲಿ ಶ್ರಾವಣ ಹುಣ್ಣಿಮೆಯಿಂದ ಪುಷ್ಯ ಹುಣ್ಣಿಮೆಯ ತನಕ ವೇದ ಅಧ್ಯಯನ ಮಾಡಿ ಸ್ವಲ್ಪ ವಿರಾಮದ ನಂತರ ಮತ್ತಷ್ಟು ವೇದಾಧ್ಯಯನ ಮಾಡುತ್ತಿದ್ದರು. ಈ ವಿರಾಮದ ಅವಧಿಗೆ ಉತ್ಸರ್ಜನ ವೆಂದು ಹೆಸರು. ಆದರೆ ಬದಲಾದ ಕಾಲಘಟ್ಟದಲ್ಲಿ ಉಪಾಕರ್ಮ ಹಾಗೂ ಉತ್ಸರ್ಜನ ಒಂದೇ ದಿನ ಮಾಡುತ್ತಿದ್ದೇವೆ ಎಂದು ಹೇಳಿದರು.
ಋಗ್ವೇದಿಗಳು ಸಪ್ತ ಋಷಿಗಳನ್ನು ಪೂಜಿಸಬೇಕು ಹಾಗೂ ಯಜುರ್ವೇದಿಗಳು ನವ ಋಷಿಗಳನ್ನು ಪೂಜಿಸಬೇಕು ಎಂದು ಶಾಸ್ತ್ರ ಹೇಳುತ್ತದೆ ಓಂ ಪ್ರಕಾರವಾಗಿ ಇಂದು ಋಷಿಗಳ ಪೂಜೆ ಮಾಡಿ ಬ್ರಹ್ಮಯಜ್ಞ ಮಾಡಿ ಋಗ್ವೇದದ ಮೊದಲ ಮಂತ್ರಗಳ ನಾಲ್ಕು ಅನುವಾಕ ಹಾಗೂ ಯಜುರ್ವೇದದ ಮೊದಲ ನಾಲ್ಕು ಅನುವಾಕ ಮಂತ್ರಗಳನ್ನು ಅಭ್ಯಾಸ ಮಾಡಲಾಯಿತು.
ಗಾಯತ್ರಿ ಪಾಡ್ಯದಲ್ಲಿ ಪ್ರತಿಯೊಬ್ಬರು ಸರಸ್ವತಿ ಭಾರತೀಯ ಸಂಸ್ಕಾರ ಕೇಂದ್ರದಲ್ಲಿ ಸಾವಿರ ಗಾಯತ್ರಿ ಜಪ ಮಾಡುತ್ತಾರೆ ಎಂದು ವಿವರಿಸಿದರು.
ಕಾರ್ಯಕ್ರಮದಲ್ಲಿ ಕೂಡ್ಲೂರು ಗುಂಡಪ್ಪ ಪ್ರತಿಷ್ಠಾನದ ಅಧ್ಯಕ್ಷ ಕೆ.ಆರ್. ಗಣೇಶ್, ವೇದ ಬ್ರಹ್ಮ ಕಾರ್ತಿಕ್ ಭಟ್, ನಿರಂಜನ್ ಶರ್ಮ, ಪೃಥು ಪಿ ಅದ್ವೈತ್, ಉದಯಾದಿತ್ಯ, ನರಸಿಂಹ ಮೂರ್ತಿ, ಸುಧಾಕರ್ ಭಟ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.