ಸಮುದ್ರಾಲೋಂಘನ ಮಾಡಿಯಾದರೂ ಧರ್ಮ ಪ್ರಚಾರ ಮಾಡಬೇಕು ಗಣಪತಿ ಶ್ರೀ

Spread the love

ಮೈಸೂರು,ಸೆ.15: ಸಮುದ್ರಾಲೋಂಘನ ಮಾಡಿಯಾದರೂ ಧರ್ಮ ಪ್ರಚಾರ ನಡೆಸಬೇಕು ಎಂದು ಅವಧೂತ ದತ್ತಪೀಠದ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಹೇಳಿದರು.

ಜಿಲ್ಲಾ ಬ್ರಾಹ್ಮಣ ಮಹಾಸಭಾ, ದತ್ತ ಸೇನೆ ಹಾಗೂ ಮೈಸೂರು ನಾಗರೀಕರು ಆಶ್ರಮದ ನಾದಮಂಟಪದಲ್ಲಿ ಶ್ರೀಗಳು 170ನೇ ವಿಶ್ವಧರ್ಮ ವಿಜಯ ಯಾತ್ರೆ ಪೂರೈಸಿದ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಗುರುವಂದನೆ ಸ್ವೀಕರಿಸಿ ಮಾತನಾಡಿದರು.

ಪ್ರತಿಯೊಬ್ಬರೂ ಎಲ್ಲಾ ಧರ್ಮವನ್ನು ಗೌರವಿಸಬೇಕು,ಸತ್ಯ ಮತ್ತು ದಯೆ ಇರಬೇಕು ಯಾರೋ ನಿರಾಶ್ರಿತರಿಗೆ ಆಶ್ರಯ ಕಲ್ಪಿಸಿದರೆ, ಅವರು ಮನೆಯೇ ನಮ್ಮದು ಎಂದಾಗ ಸುಮ್ಮನಿರಬಾರದು ಎಂದು ತಿಳಿಹೇಳಿದರು.

ಇನ್ನೊಬ್ಬರನ್ನು ಹೊಡೆದು ಬದುಕುವುದನ್ನು ಒಪ್ಪಲಾಗದು,ಹಿಂದುಗಳು ಮನೆಗೆ ಒಂದು ಮಗು ಸಾಕು ಎಂದುಕೊಳ್ಳುವುದು ಸರಿಯಲ್ಲ, ಹಾಗೆ ಮಾಡುತ್ತ ಹೋದರೆ ಧರ್ಮ ಹೊರಟು ಹೋಗುತ್ತದೆ ಎಂದು ಎಚ್ಚರಿಸಿದರು.

ದತ್ತ ಜನಾಂಗದವರೆಲ್ಲ ಒಂದಾಗಬೇಕು. ನಾವು ಎಂಟು ಚರ್ಚ್ ಖರೀದಿಸಿ ಆಶ್ರಮ ಕಟ್ಟಿದ್ದೇವೆ. ವಿದೇಶಿಗರು ಅಲ್ಲಿ ಆಶ್ರಮಕಟ್ಟಲು 58 ಕೋಟಿ ಕೊಟ್ಟಿದ್ದಾರೆ. ಮನೆ ಕೂಡ ಇಲ್ಲದವರೂ ದೇಣಿಗೆ ನೀಡಿದ್ದಾರೆ.

ನಾವು ಉಳಿಸಬೇಕಿರುವುದು ಜನಗಳ ಧರ್ಮವನ್ನು. ಇಲ್ಲವಾದರೆ ನಿಮ್ಮ ಮೊಮ್ಮಕ್ಕಳ ಕಾಲಕ್ಕೆ ಪರಿಣಾಮ ಏನಾಗುತ್ತದೆಯೋ ನೋಡಿ ಎಂದು ಶ್ರೀಗಳು ಎಚ್ಚರಿಸಿದರು.

ನಾವು 1976 ರಿಂದ ವಿದೇಶಕ್ಕೆ ಹೋಗುತ್ತಿದ್ದೇನೆ. ಮೊದಲು ನಾನು ವೆಸ್ಟ್ ಇಂಡಿಸ್ನ ಗಯಾನ ಮುಂತಾದ ಕಡೆ ಹೋಗಿದ್ದೆ. ಅಲ್ಲಿ ಹೆಚ್ಚು ಹಿಂದುಗಳು ಇದ್ದಾರೆ. ಸುಮಾರು 180 ವರ್ಷದಿಂದ ಅಲ್ಲಿಯೇ ಇದ್ದಾರೆ. ಅವರೆಲ್ಲರೂ ಬಡವರು. ಗಯಾನದಲ್ಲಿ ಪ್ರಸಿದ್ಧ ಹಿಂದೂ ದೇವಾಲಯವಿದ್ದು, ಅಲ್ಲಿ ಬಲಿ ನೀಡಲಾಗುತ್ತಿತ್ತು. ನಮ್ಮನ್ನು ಆಹ್ವಾನಿಸಿದಾಗ ಬಲಿ ನಿಷೇಧಿಸಿದರೆ ಬರುವುದಾಗಿ ಷರತ್ತು ವಿಧಿಸಿದ್ದೆ. ಅದಕ್ಕೆ ಒಪ್ಪಿ ಅಲ್ಲಿ ಬಲಿ ನಿಷೇಧಿಸಿದ್ದಾಗಿ ಶ್ರೀಗಳು ಹೇಳಿದರು.

ಸನ್ಯಾಸಿಗಳು ಎಂದರೆ ಕೇವಲ ಭಜನೆ, ಉಪನ್ಯಾಸ ಮಾಡುವುದು ಮಾತ್ರವಲ್ಲ. ನಾನು ಕೊಟ್ಟದ್ದನ್ನು ನಿರ್ವಹಿಸಿಕೊಂಡು ಹೋಗಬೇಕು ಎಂದು ಇದೇ ವೇಳೆ ಕಿರಿಯ ಶ್ರೀಗಳಿಗೆ ಕಿವಿಮಾತು ಹೇಳಿದರು.

ಪತ್ರಕರ್ತ ರವಿ ಹೆಗಡೆ ಮಾತನಾಡಿದರು.
ವಿದ್ವಾಂಸ ಡಾ. ಪಾವಗಡ ಪ್ರಕಾಶರಾವ್ ಅವರು ಉಪನ್ಯಾಸ ನೀಡಿ ಮಾತನಾಡಿ
ಪ್ರಪಂಚದಲ್ಲಿ ಒಬ್ಬರೇ ವ್ಯಕ್ತಿ ಒಂಬತ್ತು ಗಿನ್ನಿಸ್‌ ದಾಖಲೆ ಮಾಡಿದ್ದರೆ ಅದು ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಎಂದು ಹೇಳಿದರು.

ಆಂಧ್ರಪ್ರದೇಶದ ತೆನಾಲಿಯಲ್ಲಿ ಶ್ರೀಗಳು ನಡೆಸಿಕೊಟ್ಟ ಭಜನೆಗೆ 1.28 ಲಕ್ಷ ಮಂದಿ ಸೇರಿದ್ದರು ಎಂಬುದೂ ಗಿನ್ನಿಸ್‌ ದಾಖಲೆಗೆ ಸೇರಿದೆ.

ಶ್ರೀ ದತ್ತ ವಿಜಯಾನಂದ ಸ್ವಾಮೀಜಿ, ಭಾನುಪ್ರಕಾಶ ಶರ್ಮ ಗುರೂಜಿ, ಶಾಸಕ ಟಿ.ಎಸ್. ಶ್ರೀವತ್ಸ, ಮಹೇಶ್ ಶೆಣೈ, ಬ್ರಾಹ್ಮಣ ಮಹಾಸಭಾದ ಉಪಾಧ್ಯಕ್ಷ ನಟರಾಜ ಜೋಯ್ಸ್, ಮುಖಂಡ ರಘುರಾಂ ವಾಜಪೇಯಿ, ದತ್ತಸೇನೆ ಅಧ್ಯಕ್ಷ ಆರ್.ಎನ್. ಸತ್ಯನಾರಾಯಣ, ಕಾರ್ಯದರ್ಶಿ ಮುರಳಿ, ಅರಿವು ಸಂಸ್ಥೆ ಅಧ್ಯಕ್ಷ ಎಚ್.ಎನ್. ಶ್ರೀಕಾಂತ್ ಕಶ್ಯಪ್, ಅಮರ ವಿಪ್ರ ಬಳಗ ಅಧ್ಯಕ್ಷ ರಾಜ್ಕುಮಾರ್ ಮತ್ತಿತರರು ಪಾಲ್ಗೊಂಡಿದ್ದರು.