ಅಹಮದಾಬಾದ್: ಇತ್ತೀಚೆಗೆ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಲೇ ಇದ್ದು ಕೊನೆ ಇಲ್ಲ ದಂತಾಗಿದೆ.
ಒಂದೇ ಕುಟುಂಬದ ಐದು ಮಂದಿ ಮನೆಯಲ್ಲೇ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗುಜರಾತ್ನ ಅಹಮದಾಬಾದ್ನಲ್ಲಿ ನಡೆದಿದೆ.
ಅಹಮದಾಬಾದ್ ಜಿಲ್ಲೆಯ ಬಗೋದರ ಗ್ರಾಮದಲ್ಲಿ ಈ ಘಟನೆ ನಡೆದಿದ್ದು ವಿಷಕಾರಿ ದ್ರವ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ರಿಕ್ಷಾ ಚಾಲಕನಾಗಿದ್ದ ವಿಪುಲ್ ಕಾಂಜಿ ವಾಘೇಲಾ (34), ಅವರ ಪತ್ನಿ ಸೋನಾಲ್ (26), ಅವರ 11 ಮತ್ತು 5 ವರ್ಷದ ಹೆಣ್ಣುಮಕ್ಕಳು ಮತ್ತು ಅವರ 8 ವರ್ಷದ ಮಗ ಮೃತಪಟ್ಟಿದ್ದಾರೆ.
ಪೊಲೀಸರು ಮತ್ತು ಸ್ಥಳೀಯ ಅಪರಾಧ ಶಾಖೆ ವಿಶೇಷ ಕಾರ್ಯಾಚರಣೆ ಗುಂಪು ಮತ್ತು ವಿಧಿವಿಜ್ಞಾನ ಪ್ರಯೋಗಾಲಯ ದ ತಂಡಗಳು ಧಾವಿಸಿ ತನಿಖೆ ಆರಂಭಿಸಿವೆ.
ಆತ್ಮಹತ್ಯೆಗೆ ಕಾರಣ ಇನ್ನೂ ತಿಳಿದುಬಂದಿಲ್ಲ ಎಂದು ಅಹಮದಾಬಾದ್ ಗ್ರಾಮೀಣ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.
ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಬಗೋದರ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕಳುಹಿಸಲಾಗಿದೆ.
ಬಾಗೋದ್ರ ಬಸ್ ನಿಲ್ದಾಣದ ಬಳಿ ಬಾಡಿಗೆ ಮನೆಯಲ್ಲಿ ಈ ಕುಟುಂಬದವರು ವಾಸಿಸುತ್ತಿದ್ದರು.
ಇವರು ಮೂಲತಃ ಧೋಲ್ಕಾದ ಬಾರ್ಕೋಥಾದ ದೇವಿಪೂಜಕ್ ವಾಸ್ ಪ್ರದೇಶದವರಾಗಿದ್ದು, ಸ್ವಲ್ಪ ಸಮಯದಿಂದ ಬಾಗೋದ್ರಾದಲ್ಲಿ ವಾಸಿಸುತ್ತಿದ್ದರು. ವಿಪುಲ್ ವಘೇಲಾ ಆಟೋರಿಕ್ಷಾ ಓಡಿಸಿ ಜೀವನ ಸಾಗಿಸುತ್ತಿದ್ದರು.
ಬಹುಶಃ ಹೆಚ್ಚು ಸಾಲ ಮಾಡಿ ತೀರಿಸಲಾಗದೆ ಆರ್ಥಿಕ ಒತ್ತಡ ಇದ್ದುದರಿಂದ ಈ ದುಡುಕಿನ ನಿರ್ಧಾರ ತೆಗೆದುಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.