(ವರದಿ:ಸಿದ್ದರಾಜು,ಕೊಳ್ಳೇಗಾಲ)
ಕೊಳ್ಳೇಗಾಲ: ಲಕ್ಷಾಂತರ ಅಭಿಮಾನಿಗಳ ಆರಾಧ್ಯ ದೈವ ಡಾ.ವಿಷ್ಣುವರ್ಧನ್ ಸಮಾಧಿ ನೆಲಸಮ ಮಾಡಿರುವ ವಿಚಾರದಲ್ಲಿ ನಡೆದಿರುವ ಬೆಳವಣಿಗೆಗಳು ಅತ್ಯಂತ ನೋವಿನ ಸಂಗತಿ ಎಂದು ಡಾ.ವಿಷ್ಣು ಸಮಾಜ ಸೇವಾ ಟ್ರಸ್ಟ್ ಅಧ್ಯಕ್ಷ ಕೆ.ಆರ್.ಬಾಲರಾಜ್ ನೊಂದು ನುಡಿದಿದ್ದಾರೆ.
ಸರ್ಕಾರ ತಕ್ಷಣ ಈ ಬಗ್ಗೆ ಸ್ಪಷ್ಟನೆ ನೀಡಬೇಕು ಮತ್ತು ಸಮಾಧಿಯನ್ನು ಪುನರ್ ಸ್ಥಾಪಿಸಬೇಕು ಎಂದು ಕೆ.ಆರ್.ಬಾಲರಾಜ್ ಆಗ್ರಹಿಸಿದ್ದಾರೆ.
ಕನ್ನಡ ಚಿತ್ರರಂಗಕ್ಕೆ ತಮ್ಮ ಜೀವಿತಾವಧಿಯಲ್ಲಿ ಅಪಾರ ಸೇವೆ ಸಲ್ಲಿಸಿ, ಅದಮ್ಯ ಪ್ರತಿಭೆ ಮೂಲಕ ನಾಡಿನ ಪ್ರೀತಿಗಳಿಸಿದ ಮೇರು ನಟನೊಬ್ಬನಿಗೆ ಇಂತಹ ಅಗೌರವ ತೋರಿ ರುವುದು ನಿಜಕ್ಕೂ ಖಂಡನೀಯ ಎಂದು ಹೇಳಿದ್ದಾರೆ.
ಅವರ ವ್ಯಕ್ತಿತ್ವ ಮತ್ತು ಕಲಾಸೇವೆ ಅಜರಾಮರ, ನಟ ವಿಷ್ಣುವರ್ಧನ್ ಅವರು ಕನ್ನಡ ನಾಡಿನ ಹೆಮ್ಮೆಯ ಪ್ರತೀಕ. ಅವರ ಸಮಾಧಿಯನ್ನು ಭಂಗಪಡಿಸುವ ಕ್ರಮವು ನಮ್ಮ ಸಂಸ್ಕೃತಿ, ಗೌರವ ಮತ್ತು ಭಕ್ತಿಯ ಮೇಲೆ ಮಾಡಿದ ಅಪಮಾನ. ಇಂತಹ ಘಟನೆಗಳು ಪದೇ ಪದೇ ನಡೆಯುತ್ತಿರುವುದು ಡಾ. ವಿಷ್ಣುವರ್ಧನ್ ಅವರ ಮೇಲಿನ ಅಭಿಮಾನ ಮತ್ತು ಗೌರವಕ್ಕೆ ಧಕ್ಕೆ ತರುವಂತಹದ್ದು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದು ಕೇವಲ ಸ್ಮಾರಕದ ಪ್ರಶ್ನೆಯಲ್ಲ, ಅವರನ್ನು ಹೃದಯ ಪೂರ್ವಕವಾಗಿ ಆರಾಧಿಸುವ ಪ್ರತಿಯೊಬ್ಬ ಅಭಿಮಾನಿಗೂ ಇದು ಅತೀವ ನೋವುಂಟು ಮಾಡಿದೆ. ನಾಡಿನ ಮೇರು ನಟರೊಬ್ಬರ ವಿಚಾರದಲ್ಲಿ ಇಂತಹ ಘಟನೆಗಳು ಪದೇ ಪದೇ ನಡೆಯುತ್ತಿರುವುದು ಅವರ ವ್ಯಕ್ತಿತ್ವ ಮತ್ತು ಕಲಾಸೇವೆಗೆ ಆಗೌರವ ತೋರಿದಂತಾಗಿದೆ. ಅಭಿಮಾನಿಗಳ ಭಾವನೆಗಳಿಗೆ ಗೌರವ ನೀಡದೆ ಈ ರೀತಿ ಕ್ರಮ ತೆಗೆದುಕೊಳ್ಳುವುದು ಅತ್ಯಂತ ಬೇಸರದ ಸಂಗತಿ ಎಂದು ತಿಳಿಸಿದರು.
ನಾವು ಅವರ ಸ್ಮಾರಕದ ನಿರ್ಮಾಣಕ್ಕೆ ತಕ್ಷಣವೇ ಪರಿಹಾರ ಕಂಡುಕೊಳ್ಳಬೇಕು. ಇದು ಅವರಿಗೆ ನಾವು ನೀಡುವ ಗೌರವ ಮತ್ತು ಕೃತಜ್ಞತೆಯ ಸಂಕೇತವಾಗಿದೆ. ಮತ್ತು ಸ್ಮಾರಕ ವಿಚಾರವಾಗಿ ನಾಯಕ ನಟರಾದ ಸುದೀಪ್ ಅವರು ಜವಾಬ್ದಾರಿ ಮತ್ತು ಹಣಕಾಸಿನ ನೆರವು ನೀಡುತ್ತೇನೆ ಎಂದಿರುವ ಮಾಧ್ಯಮ ಹೇಳಿಕೆಯನ್ನು ಸ್ವಾಗತಿಸುತ್ತೇವೆ ಎಲ್ಲಾ ವಿಷ್ಣು ಅಭಿಮಾನಿಗಳ ಪರವಾಗಿ ಅವರಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇವೆ ಎಂದು ಹೇಳಿದರು.
ನಮ್ಮೆಲ್ಲರ ಪ್ರೀತಿಯ ಸಾಹಸಸಿಂಹ ಡಾ. ವಿಷ್ಣುವರ್ಧನ್ ಅವರ ಸ್ಮಾರಕದ ವಿಚಾರದಲ್ಲಿ ನಡೆದಿರುವ ಬೆಳವಣಿಗೆಗಳು ಅತ್ಯಂತ ಬೇಸರ ಮತ್ತು ನೋವಿನ ಸಂಗತಿ. ಇದನ್ನು ಸರ್ಕಾರ ತಕ್ಷಣವೇ ಸರಿಪಡಿಸಬೇಕು,ಎಂದು ಬಾಲರಾಜ್ ಒತ್ತಾಯಿಸಿದರು.