ಒಂದು ಭಾಷೆಗೂ‌ ಸಂಸ್ಕೃತಿಗೂ ಅಜಗಜಾಂತರ ವ್ಯತ್ಯಾಸ- ಪ್ರೊ.ಎಚ್.ಎಸ್.ಹರಿಶಂಕರ್

Spread the love

ಮೈಸೂರು: ಒಂದು ಸಂಸ್ಕೃತಿಗೂ ಭಾಷೆಗೂ ಅಜಗಜಾಂತರ ವ್ಯತ್ಯಾಸವಿದ್ದು, ಸಂಸ್ಕೃತಿಯಲ್ಲಿ ಹಾಸುಹೊಕ್ಕಾಗಿರುವ ಪದಗಳನ್ನು ಭಾಷಾಂತರ ಮಾಡುವುದು ಕಷ್ಟಸಾಧ್ಯ ಎಂದು ಹಿರಿಯ ರಷ್ಯನ್ ವಿದ್ವಾಂಸ ಹಾಗೂ ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಎಚ್.ಎಸ್.ಹರಿಶಂಕರ್ ನುಡಿದರು.

ಇತ್ತೀಚೆಗೆ ಹೊಯ್ಸಳ ಕನ್ನಡ ಸಂಘ ಮತ್ತು ಸವಿಗನ್ನಡ ಪತ್ರಿಕಾ ಬಳಗ ಪ್ರೊ.ಎಚ್.ಎಸ್.ಹರಿಶಂಕರ್. ಅವರ ನಿವಾಸದಲ್ಲಿ ಆಯೋಜಿಸಿದ್ದ ‘ಸಾಹಿತಿಗಳೊಂದಿಗೆ ಸಂವಾದ’ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.

ಸಂಸ್ಕೃತಿ ಎಂಬುದು ಭಾವನಾತ್ಮಕ ನೆಲೆಯಲ್ಲಿ ಅರಳುವ ಕಲೆಯಾಗಿದ್ದು, ಪ್ರತಿಯೊಂದು ಭಾಷೆಗೂ ಅದರದೇ ಆದ ಸಾಂಸ್ಕೃತಿಕ ನೆಲೆಗಟ್ಟು ಇದ್ದು ಅದನ್ನು ಮತ್ತೊಂದು ಭಾಷೆಗೆ ಅನುವಾದ ಮಾಡುವ ಕ್ರಿಯೆಗೆ ಸಾಕಷ್ಟು ಪರಿಶ್ರಮ ಅಗತ್ಯ ಎಂದು ಹೇಳಿದರು.

ನವಿಲೊರಿನೊಳಗೆಲ್ಲ ನೀನೊಬ್ಬಳೇ ಚೆಲುವ ಎಂಬುದನ್ನು ಹೇಗೆ ಭಾಷಾಂತರಿಸುತ್ತೀರಿ. ಭಾವಾನುವಾದ ಸಾಧ್ಯವೇ ಎಂದು ಪ್ರಶ್ನಿಸಿದ ಹರಿಶಂಕರ್ ವಿಮರ್ಶೆ ಇತ್ತೀಚೆಗೆ ದಾರಿ ತಪ್ಪುತ್ತಿದ್ದು, ಲೇಖಕರು ವಿಮರ್ಶಕರ ಪರವಾಗಿದ್ದರೆ ಜೈ ವಿಮರ್ಶೆ, ವಿರೋಧವಾಗಿದ್ದರೆ ಬೈ ವಿಮರ್ಶೆ ಎಂದು ವಿಷಾದಿಸಿದರು.

ತಾವು ರಷ್ಯನ್ ವಿದ್ಯಾರ್ಥಿಗಳಿಗೆ ಕನ್ನಡ ಕಲಿಸುವ ಕೆಲಸ ಮಾಡುತ್ತಿದ್ದು ಪ್ರಸ್ತುತ ತಮ್ಮ ವಿದ್ಯಾರ್ಥಿನಿಯೊಂದಿಗೆ ಸೇರಿ ಬಸವಣ್ಣನ ವಚನಗಳನ್ನು ರಷ್ಯನ್ ಭಾಷೆಗೆ ಅನುವಾದಿಸುತ್ತಿರುವುದಾಗಿ ಪ್ರೊ.ಎಚ್.ಎಸ್.ಹರಿಶಂಕರ್ ತಿಳಿಸಿದರು.

ಇದೇ ಸಂದರ್ಭದಲ್ಲಿ 85ನೇ ವಸಂತಕ್ಕೆ ಕಾಲಿಟ್ಟ ಪ್ರೊ.ಹರಿಶಂಕರ್ ಅವರನ್ನು ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಕರ್ನಾಟಕ ಮುಕ್ತಕ ಸಾಹಿತ್ಯ ಅಕಾಡೆಮಿ ಟ್ರಸ್ಟ್, ಹೊಯ್ಸಳ ಕನ್ನಡ ಸಂಘ ಮತ್ತು ಸವಿಗನ್ನಡ ಪತ್ರಿಕಾ ಬಳಗ ಸೇರಿದಂತೆ ವಿವಿಧ ಸಂಘಟನೆಗಳು ಸನ್ಮಾನಿಸಿ ಗೌರವಿಸಿದವು.

ಪತ್ರಕರ್ತ ರಂಗನಾಥ್ ಮೈಸೂರು, ಮೇಲುಕೋಟೆಯ ಶ್ರೀ ಇಳೈ ಆಳ್ವಾರ್ ಸ್ವಾಮೀಜಿ, ಪ್ರೊ.ಎಸ್.ರಾಮಪ್ರಸಾದ್, ಪ್ರೊ.ಗೋಪಿನಾಥ್, ಪ್ರೊ.ಶ್ರೀಪಾದು ಗುಂಡಣ್ಣ, ಮಂಗಳಾ ಮುದ್ದು ಮಾದಪ್ಪ, ವಕೀಲ ರಾಘವೇಂದ್ರ, ಕೊ.ಸು.ನರಸಿಂಹ ಮೂರ್ತಿ, ಡಾ.ಕೆ.ಲೀಲಾ ಪ್ರಕಾಶ್ ದಂಪತಿ, ಲೇಖಕಿ ಬಿ.ಕೆ.ಮೀನಾಕ್ಷಿ, ಪೂಜಾಮಠದ್ , ರಷ್ಯನ್ ವಿದ್ಯಾರ್ಥಿನಿ, ಪ್ರೊ.ಎಚ್.ಎಂ.ನಾಗರಾಜರಾವ್, ಕಿರಣ್ ಶಿಡೇನಹಳ್ಳಿ ಸೇರಿದಂತೆ ಸಾಹಿತ್ಯಾಸಕ್ತರು ಹೆಚ್ಚಿನ ಪಾಲ್ಗೊಂಡಿದ್ದರು.