ಮೈಸೂರು: ಹಾಡುಹಗಲೇ ಯುವಕರ ತಂಡವೊಂದು ರೌಡಿಶೀಟರ್ ಒಬ್ಬನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆ ಮಾಡಿರುವ ಘಟನೆ ಮೈಸೂರಿನ ದಸರಾ ವಸ್ತುಪ್ರದರ್ಶನ ಬಳಿ ಮಂಗಳವಾರ ಮಧ್ಯಾನ ನಡೆದಿದೆ.
ಕ್ಯಾತಮಾರನಹಳ್ಳಿ ನಿವಾಸಿ ವೆಂಕಟೇಶ್ ಅಲಿಯಾಸ್ ಗಿಲಿಗಿಲಿ ಎಂದು ಪೊಲೀಸರು ತಿಳಿಸಿದ್ದಾರೆ.
ಕಾರಿನಲ್ಲಿದ್ದ ವೆಂಕಟೇಶನ ಮೇಲೆ ಲಾಂಗ್ ಗಳಿಂದ ದಾಳಿ ನಡೆಸಿ,ನಂತರ ಕಾರಿನಿಂದ ಹೊರಗೆ ಎಳೆದು ಹಿಗ್ಗಾ ಮುಗ್ಗ ಥಳಿಸಿ ಗುಂಪು ಪರಾರಿಯಾಗಿದೆ.
ತಲೆ ಕೈ ಕಾಲು ಹಾಗೂ ದೇಹದ ವಿವಿಧೆಡೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಹತ್ಯೆ ಮಾಡಲಾಗಿದ್ದು ಜನ ಆತಂಕಕ್ಕೆ ಈಡಾಗಿದ್ದಾರೆ.
ಇತ್ತೀಚೆಗೆ ವರುಣಾ ಗ್ರಾಮದ ಹೋಟೆಲ್ ಮುಂಭಾಗ ಕ್ಯಾತಮಾರನಹಳ್ಳಿಯ ರೌಡಿ ಶೀಟರ್ ಕಾರ್ತಿಕ್ ಎಂಬಾತನ ಕೊಲೆ ಆಗಿತ್ತು. ಆತನಿಗೂ ಈಗ ಕೊಲೆಯಾಗಿರುವ ವೆಂಕಟೇಶ್ ಗೂ ನಿಕಟ ಸಂಪರ್ಕವಿತ್ತು ಎಂದು ತಿಳಿದುಬಂದಿದೆ.
ಕಾರ್ತಿಕ್ ಕೊಲೆಗೆ ವೆಂಕಟೇಶನ ಸಹಕಾರವಿತ್ತು ಎನ್ನಲಾಗಿದ್ದು,ಕಾರ್ತಿಕ್ ಕಡೆಯವರೇ ಈ ಕೊಲೆ ಮಾಡಿದ್ದಾರೆಂದು ಹೇಳಲಾಗಿದೆ.
ಕೊಲೆ ನಡೆದ ಸ್ಥಳಕ್ಕೆ ಪೊಲೀಸ್ ಕಮೀಷನರ್ ಸೀಮಾ ಲಾಟ್ಕರ್, ಡಿಸಿಪಿಗಳಾದ ಬಿಂದುಮಣಿ ಹಾಗೂ ಸುಂದರರಾಜ್ ಹಾಗೂ ನಜರಬಾದ್ ಠಾಣೆ ಪೊಲೀಸರು
ಭೇಟಿ ನೀಡಿ ಪರಿಶೀಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.