ಕಪಿಲೆ ಒಡಲು ಸೇರುತ್ತಿರುವ ಕೊಳಚೆ ನೀರು!

Spread the love

ನಂಜನಗೂಡು: ನಂಜನಗೂಡು ನಗರಸಭೆ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದಿಂದಾಗಿ ಕಪಿಲೆಯ ಒಡಲಿಗೆ ಪಟ್ಟಣದ ಕೊಳಚೆ ನೀರು ಹಾಗೂ ಕಲ್ಲಹಳ್ಳಿ ಕೈಗಾರಿಕಾ ಪ್ರದೇಶದ ನೀರು ಸೇರುತ್ತಿದ್ದು ನದಿ ಮಲಿನವಾಗುತ್ತಿದೆ

ಪಾಪ ಕಳೆದುಕೊಳ್ಳಲು ಬರುವ ಭಕ್ತರು ಈ ಮಲಿನ ನೀರಿನಲ್ಲಿ ಮಿಂದು ರೋಗರುಜಿನಗಳಿಗೆ ತುತ್ತಾಗುತ್ತಿದ್ದಾರೆ.

ಕೊಳಚೆ ನೀರು ಸರಾಗವಾಗಿ ಹರಿದು ಕಪಿಲಾ ನದಿಯನ್ನ ಸೇರುತ್ತಿದ್ದರೂ ಅಧಿಕಾರಿಗಳಾಗಲಿ ಜನಪ್ರತಿನಿಧಿಗಳಾಗಲಿ ತಲೆ ಕೆಡಿಸಿಕೊಳ್ಳದೆ ಭಕ್ತರ ಆರೋಗ್ಯದ ಬಗ್ಗೆ ಕಾಳಜಿ ವಹಿಸದೆ ನಿರ್ಲಕ್ಷ್ಯ ತಾಳಿದ್ದು ಜನ ಶಾಪ ಹಾಕುತ್ತಿದ್ದಾರೆ.

ನಂಜನಗೂಡು ಪಟ್ಟಣದಿಂದ ಹರಿದು ಬರುವ ಚರಂಡಿ ನೀರು ಬಸ್ ನಿಲ್ದಾಣದ ಬಳಿ ಕಪಿಲಾ ನದಿಯನ್ನ ಸೇರುತ್ತಿದೆ.

ನಗರಸಭೆ ಅಧಿಕಾರಿಗಳ ಗಮನಕ್ಕೆ ಬಂದರೂ ಯಾವುದೇ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿಲ್ಲ.

ಈಗಾಗಲೇ ಬೇಸಿಗೆ ಆರಂಭವಾಗಿದೆ.ಸಾಂಕ್ರಾಮಿಕ ರೋಗಗಳು ಕಾಣಿಸಿಕೊಳ್ಳುವ ಭೀತಿ ಇದೆ.ಇಂತಹ ಸಂಧರ್ಭದಲ್ಲಿ ಮಲಿನವಾದ ಕಪಿಲೆಯಲ್ಲಿ ಸ್ನಾನ ಮಾಡುವ ಭಕ್ತರು ರೋಗಪೀಡಿತರಾಗುವ ಸಂಭವ ಇದೆ.

ಕೊಳಚೆ ನೀರು ಕಪಿಲಾ ನದಿ ಸೇರುವುದನ್ನ ನಿಯಂತ್ರಿಸಲು ತಡೆಗೋಡೆ ‌ನಿರ್ಮಿಸಲಾಗಿದೆ.ಇದರಿಂದ ಯಾವುದೇ ಪ್ರಯೋಜನವಾಗಿಲ್ಲ.ಕೆಲವೇ ದಿನಗಳಲ್ಲಿ ದಕ್ಷಿಣಕಾಶಿಯಲ್ಲಿ ಜಾತ್ರಾಮಹೋತ್ಸವ ನೆರವೇರಲಿದೆ.ಸಹಸ್ರಾರು ಭಕ್ತರು ನಂಜನಗೂಡಿಗೆ ಭೇಟಿ ನೀಡುತ್ತಾರೆ.ಕಪಿಲೆಯಲ್ಲಿ ಪುಣ್ಯಸ್ನಾನ ಮಾಡಲಿದ್ದಾರೆ.ಮಲಿನ ನೀರು ಭಕ್ತರ ಆರೋಗ್ಯದ ಮೇಲೆ ಪರಿಣಾಮ ಬೀರುವಿದು ಶತಃಸಿದ್ದ.

ಅಪಾಯ ಸಂಭವಿಸುವ ಮುನ್ನ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಿದೆ.ಈ ಬಗ್ಗೆ ಜನಪ್ರತಿನಿಧಿಗಳು ತಕ್ಷಣ ಎಚ್ಚೆತ್ತು ಕ್ರಮ ತೆಗೆದುಕೊಳ್ಳಬೇಕಿದೆ.