ಮೈಸೂರು: ಕಾಂತಾರ ಚಾಪ್ಟರ್ 1 ಯಶಸ್ಸಿನ ಬೆನ್ನಲ್ಲೇ ನಟ ರಿಷಬ್ ಶೆಟ್ಟಿ ಟೆಂಪಲ್ ರನ್ ಮಾಡುತ್ತಿದ್ದು ಗುರುವಾರ ಮೈಸೂರಿನ ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿ ತಾಯಿ ಚಾಮುಂಡೇಶ್ವರಿ ದರ್ಶನ ಪಡೆದರು.
ನಾಡ ಅಧಿದೇವತೆ ತಾಯಿ ಚಾಮುಂಡೇಶ್ವರಿ ದರ್ಶನ ಪಡೆದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ರಿಷಬ್ ಶೆಟ್ಟಿ, ತಾಯಿ ಚಾಮುಂಡೇಶ್ವರಿಯ ದರ್ಶನ ಪಡೆದಿದ್ದೇನೆ. ಕಾಂತಾರ ಚಾಪ್ಟರ್ 1 ಯಶಸ್ವಿಯಾಗಿದೆ. ನಮ್ಮ ತಂಡದ ಶ್ರಮವನ್ನ ಜನರು ಒಪ್ಪಿದ್ದಾರೆ. ನಮ್ಮ ಸಿನಿಮಾದ ಯಶಸ್ಸು ಮೊದಲು ಕನ್ನಡಿಗರಿಗೆ ಸಲ್ಲಬೇಕು ಎಂದು ಹೇಳಿದರು.
ಕಾಂತಾರ ಬಂದಾಗ ಜನರು ಇಷ್ಟ ಪಟ್ಟಿದ್ದರು. ಸಿನಿಮಾದ ಗಳಿಕೆ, ಆದಾಯದ ಬಗ್ಗೆ ನಾನು ಮಾತನಾಡುವುದಿಲ್ಲ ಎಂದು ತಿಳಿಸಿದರು.
ಸಿನಿಮಾದಲ್ಲಿ ಚಾಮುಂಡಿ ದೈವದ ಆಶೀರ್ವಾದ ಇರೋದಕ್ಕೆ ಸಿನಿಮಾ ಒಳ್ಳೆ ರೀತಿ ಆಗಿದೆ. ದೈವವನ್ನು ನಾನು ನಂಬುತ್ತೇನೆ ಆರಾಧನೆ ಮಾಡುತ್ತೇನೆ. ನಾನು ಅದನ್ನು ತೋರಿಸುವಾಗ ಎಲ್ಲರ ಹಿರಿಯರ ಮಾರ್ಗದರ್ಶನ ತೆಗೆದುಕೊಂಡಿದ್ದೇನೆ. ನನಗೂ ದೈವಕ್ಕೂ ಒಂದು ಸಂಬಂಧ ಇದೆ. ಇಂತಹ ದೊಡ್ಡ ಯಶಸ್ಸು ಸಿಕ್ಕಿರೋದು ಖುಷಿ ಇದೆ ಎಂದು ಸಂತಸ ವ್ಯಕ್ತಪಡಿಸಿದರು.
ನಾನು ಸಣ್ಣ ಊರಿನಿಂದ ಬಂದವನು, ಕರ್ನಾಟಕದಿಂದ ವಿಶ್ವದಾದ್ಯಂತ ಸಿನಿಮಾವನ್ನ ಜನ ಇಷ್ಟ ಪಟ್ಟಿದ್ದಾರೆ. ಇದು ಚಿತ್ರರಂಗಕ್ಕೆ ಒಳ್ಳೆಯ ಬೆಳವಣಿಗೆ. ಇದು ಇನ್ನೂ ಹೆಚ್ಚಿನ ಶಕ್ತಿ ಕೊಡುತ್ತದೆ. ಮುಂದಿನ ಚಿತ್ರ ಜೈ ಹನುಮಾನ್ ಮಾಡುತ್ತಿದ್ದೇನೆ ಎಂದು ನಟ ರಿಷಬ್ ಶೆಟ್ಟಿ ತಿಳಿಸಿದರು.
ನಟ ಅಮಿತಾಬ್ ಬಚ್ಚನ್ ಭೇಟಿ ಮಾಡಿದ್ದೆ. ಅಣ್ಣಾವ್ರ ಬಗ್ಗೆ ಅವರು ಬಹಳ ಮಾತನಾಡಿದರು,ಜತೆಗೆ ತಮ್ಮ ಅನುಭವ ಹಂಚಿಕೊಂಡರು. ಅಂತಹ ಲೆಜೆಂಡ್ ಜೊತೆ ನಾನು ಕಾಲ ಕಳೆದದ್ದು ಖುಷಿ ಕೊಟ್ಟಿದೆ ಎಂದು ನಟ ರಿಷಬ್ ಶೆಟ್ಟಿ ತಿಳಿಸಿದರು.
ಫ್ಯಾನ್ಸ್ ವಾರ್ ಬಗ್ಗೆ ಪ್ರತಿಕ್ರಿಯಿಸಿದ ನಟ ರಿಷಬ್ ಶೆಟ್ಟಿ, ಫ್ಯಾನ್ಸ್ ವಾರ್ ಬಗ್ಗೆ ಸಲಹೆ ಕೊಡುವಷ್ಟು ನಾನು ದೊಡ್ಡವನಲ್ಲ. ಎಲ್ಲರ ಸಿನಿಮಾ ನೋಡಿ ಕನ್ನಡ ಸಿನಿಮಾ ಗೆಲ್ಲಿಸಿ ಅಂತ ಕೇಳಿಕೊಳ್ಳುತ್ತೇವೆ ಎಂದು ಮನವಿ ಮಾಡಿದರು.
ಥಿಯೇಟರ್ ನಲ್ಲಿ ದೈವ ಆರಾಧನೆ ನೆಪದಲ್ಲಿ ಹುಚ್ಚಾಟ ಮಾಡಬೇಡಿ. ಅದಕ್ಕೆ ಒಂದು ಕ್ರಮ ಇರತ್ತದೆ. ದೈವ ಆರಾಧನೆಗೆ ಒಂದು ಶಿಸ್ತುಬದ್ಧ ಕ್ರಮವಿದೆ. ಆ ರೀತಿ ಮಾಡಬೇಡಿ ಅಂತ ಎಲ್ಲರಿಗೂ ಕೇಳಿಕೊಳ್ಳುತ್ತೇನೆ ಎಂದು ರಿಷಬ್ ಕೋರಿದರು.