ಮೈಸೂರು: ಮೈಸೂರಿನ ಸೈನಿಕ ಅಕಾಡೆಮಿ ಸಂಸ್ಥಯಿಂದ ಭಾರತೀಯ ಸೇನೆಯಲ್ಲಿ 30 ವರ್ಷಗಳ ಕಾಲ ಕಠಿಣ ಪ್ರದೇಶಗಳಲ್ಲಿ ರಾಷ್ಟ್ರ ಸೇವೆ ಸಲ್ಲಿಸಿ ನಿವೃತ್ತರಾದ ವೀರ ಯೋಧರಿಗೆ ಗೌರವಿಸಿ ಸನ್ಮಾನಿಸಲಾಯಿತು.
ಜಮ್ಮು ಕಾಶ್ಮೀರ, ಚೀನಾ ಗಡಿ,ಅಸ್ಸಾಂ, ರಾಜಸ್ಥಾನ ಗಡಿ, ಪಂಜಾಬ್, ವಿದೇಶ ಶಾಂತಿ ಸೇನೆ (ವಿಶ್ವ ಶಾಂತಿ ಸೇನಾ ಜೊತೆಗೆ ದಕ್ಷಿಣ ಸುಡಾನ್) ತಮಿಳುನಾಡು, ಕರ್ನಾಟಕ ಮತ್ತಿತರ ಕಠಿಣ ಪ್ರದೇಶಗಳಲ್ಲಿ ರಾಷ್ಟ್ರ ಸೇವೆ ಸಲ್ಲಿಸಿ ಸಿಪಾಯಿ ಆಗಿ ಸೇನೆಗೆ ಆಯ್ಕೆ ಆಗಿದ್ದ ಮಹದೇವಸ್ವಾಮಿ ಅವರು ನಿವೃತ್ತರಾಗುವ ಸಮಯದಲ್ಲಿ ಗೌರಾನ್ವಿತ ಕ್ಯಾಪ್ಟನ್ ಸೇನಾ ಅಧಿಕಾರಿ ಆಗಿ ಇದೇ ಜನವರಿ 1 ರಂದು ನಿವೃತ್ತರಾಗಿದ್ದಾರೆ.
ಈ ವೀರ ಯೋಧರಿಗೆ ಸೈನಿಕ ಅಕಾಡೆಮಿ ವತಿಯಿಂದ ಭವಿಷ್ಯದ ಸೈನಿಕರ ಸಮ್ಮುಖದಲ್ಲಿ ಹೂವಿನ ಸುರಿಮಳೆ ಸುರಿಸಿ ಜೈಯಘೋಷದೊಂದಿಗೆ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಸೇನಾಧಿಕಾರಿ ಗೌರವಾನ್ವಿತ ಕ್ಯಾಪ್ಟನ್ ಮಹಾದೇವ ಸ್ವಾಮಿ ಅವರು ಮಾತನಾಡಿ, ನಾನು ಭಾರತೀಯ. ನನ್ನ ಧರ್ಮ ರಾಷ್ಟ್ರ ರಕ್ಷಣೆ ಮಾಡುವುದು, ಇದು ಪ್ರತಿಯೊಬ್ಬ ಭಾರತೀಯನ ಹೊಣೆ ಎಂದು ಹೇಳಿದರು.
ನಾನು ಮೈಸೂರು ಜಿಲ್ಲೆ, ಗಾವಡಗೆರೆ ನಿವಾಸಿ ಆಗಿದ್ದು, ಸುಮಾರು 10 ವರ್ಷಗಳಿಂದ ಮೈಸೂರಿನ ವಿಜಯಲಕ್ಷ್ಮೀ ಪುರಂನಲ್ಲಿ ನನ್ನ ಕುಟುಂಬದ ಜೊತೆ ವಾಸವಾಗಿದ್ದೇನೆ ಎಂದು ತಿಳಿಸಿದರು.
ನಾನು ಭಾರತೀಯ ಸೇನೆಗೆ 1994 ರಲ್ಲಿ ಹುಣಸೂರಿನಲ್ಲಿ ನಡೆದ ಸೇನಾ ನೇಮಕಾತಿಯಲ್ಲಿ ಆಯ್ಕೆ ಆಗಿದ್ದು, ಭಾರತೀಯ ಸೇನೆಯ ಮದ್ರಾಸ್ ಇಂಜಿನಿಯರ್ ಗ್ರೂಪ್ ಗೆ ಆಯ್ಕೆ ಆಗಿದ್ದೆ. ನನಗೆ ಭಾರತೀಯ ಸೇನೆಯ ಯುದ್ಧ ಮಾಡುವ ಸೇನಾ ಪಡೆಗಳಿಗೆ ಬೆನ್ನೆಲುಬಾಗಿ ಕೆಲಸ ಮಾಡುವ ಗುಂಪಿನಲ್ಲಿ ಕರ್ತವ್ಯ ನಿರ್ವಹಿಸುವ ಅವಕಾಶ ಸಿಕ್ಕಿದ್ದು ನನ್ನ ಪುಣ್ಯ ಎಂದು ಹೇಳಿದರು.
ನಾನು ಕಾರ್ಗಿಲ್ ಯುದ್ಧದ (ಆಪರೇಷನ್ ವಿಜಯ್) ಸಂದರ್ಭದಲ್ಲಿ ಕಾಶ್ಮೀರದಲ್ಲಿ ಸೇವೆ ಸಲ್ಲಿಸಿದ್ದೇನೆ, ಹಲವಾರು ಗಡಿ ಪ್ರದೇಶ, ಶಾಂತಿ ಸೇನೆ, ಕಠಿಣ ಪ್ರದೇಶಗಳಲ್ಲೂ ಸೇವೆ ಸಲ್ಲಿಸುವ ಸೌಭಾಗ್ಯ ನನಗೆ ಸಿಕ್ಕಿತು. ಸಿಪಾಯಿ ಆಗಿ ಸೇನೆ ಸೇರಿದ ನಾನು ಇವಾಗ ಗೌರವಾನ್ವಿತ ಕ್ಯಾಪ್ಟನ್ ಆಗಿ ನಿವೃತ್ತಿ ಆಗಿರುವುದು ನಮಗೆ ಹೆಮ್ಮೆ ಎನಿಸುತ್ತದೆ ಎಂದು ಹೇಳಿದರು.
ನನ್ನ ಭಾರತೀಯ ಸೇನೆ ನನ್ನ ದೇವರಿಗೆ ಸಮಾನ, ನನಗೆ ಪ್ರಾಮಾಣಿಕತೆ, ಧೈರ್ಯ, ವಿದ್ಯೆ, ಬುದ್ಧಿ, ಶಕ್ತಿ, ವಿಶ್ವಾಸ, ಶಿಸ್ತು, ಆರೋಗ್ಯ ಎಲ್ಲವನ್ನೂ ನನ್ನ ಸೇನೆ ಕೊಟ್ಟಿದೆ, ಪ್ರತಿಯೊಬ್ಬ ಭಾರತೀಯ ನಾಗರಿಕರು ಸೇನೆಯಲ್ಲಿ 4 ವರ್ಷಗಳು ಸೇವೆ ಸಲ್ಲಿಸಿ ಬಂದರೆ ದೇಶದೊಳಗೆ ಇರುವ ತಾರತಮ್ಯಗಳು ನಿಂತು ಹೋಗುತ್ತವೆ, ನಾವೆಲ್ಲರೂ ಒಂದೇ ಎಂಬ ಒಗ್ಗಟ್ಟು ಹೆಚ್ಚುತ್ತದೆ, ನನ್ನ ದೇಶದ ಬಗ್ಗೆ ಗೌರವ, ಪ್ರೀತಿ ಹೆಚ್ಚುತ್ತದೆ ಎಂದು ನುಡಿದರು.
ನಾನು ಮದುವೆ ಆದ ಸಂದರ್ಭದಲ್ಲಿ ಕಾರ್ಗಿಲ್ ಯುದ್ಧದ ಸಮಯವಾಗಿದ್ದ ಕಾರಣ ಮದುವೆ ಆದ ಮರು ದಿನವೇ ಡ್ಯೂಟಿಗೆ ಹೋಗುವ ಪರಿಸ್ಥಿತಿ ಬಂತು ಎಂದು ಮಹದೇವಸ್ವಾಮಿ ಸ್ಮರಿಸಿದರು.
ಸೇನೆ ಸೇರಲು ಸೈನಿಕ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿರುವ ನಿಮ್ಮೆಲ್ಲರಿಗೂ ಶುಭವಾಗಲಿ, ನಮ್ಮ ದಕ್ಷಿಣ ಭಾರತದಲ್ಲಿ ಸೈನಿಕರು ಕಡಿಮೆ ಇರೋದನ್ನು ನಾವು ನೋಡುತ್ತಿದ್ದೇವೆ, ನಿಮ್ಮಂತ ಯುವಪೀಳಿಗೆ ಎತ್ತೆಚ್ಚುಕೊಳ್ಳಬೇಕು, ಹೆಚ್ಚಿನ ಮಕ್ಕಳು ಸೇನೆಗೆ ಸೇರಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಸೈನಿಕ ಅಕಾಡೆಮಿಯ ಸಂಸ್ಥಾಪಕರು ಮತ್ತು ಮಾಜಿ ಕಮಾಂಡೋ ಶ್ರೀಧರ ಸಿ ಎಂ ರವರು ಮಾತನಾಡಿ, ಸೈನಿಕರಿಗೆ 3 ಜೀವ, ಸೇನೆಗೆ ಹೋಗುವ ಮುಂಚೆ ಒಂದು, ಸೇನೆಗೆ ಹೋದ ನಂತರ ಮತ್ತೊಂದು, ಜೀವಂತವಾಗಿ ಮರಳಿ ನಿವೃತ್ತನಾಗಿ ಬಂದರೆ 3 ನೆ ಜೀವ ಆಗಿರುತ್ತದೆ ಎಂದು ಹೇಳಿದರು.
ಸೈನಿಕರು ಸಮಾಜದಲ್ಲಿ ಬೆರೆಯುವುದು ಬಹಳ ಕಷ್ಟಕರ, ಸಮಾಜವೇ ನಿವೃತ್ತ ಸೈನಿಕರಿಗೆ ಸಹಕರಿಸಬೇಕು ಎಂದು ಕೋರಿದರು.
ಮುಂದೊಂದು ದಿನ ಸೇನೆಯಿಂದ ನಮ್ಮ ಕ್ಷೇತ್ರದಲ್ಲಿ ಯಾರಾದರೂ ನಿವೃತ್ತರಾದರೇ ಮತ್ತು ಹುತಾತ್ಮರಾಗಿದ್ದರೆ ನಮ್ಮ ಸೈನಿಕ ಅಕಾಡೆಮಿಗೆ ತಿಳಿಸಿ ನಾವು ಅಂತಹ ಮಹಾನ್ ವ್ಯಕ್ತಿಗೆ ಗೌರವಿಸುತ್ತೇವೆ ಎಂದು ಮನವಿ ಮಾಡಿದರು.
ಈ ವೇಳೆ ಸಹ ಸಂಸ್ಥಾಪಕರಾದ ಅನಿತಾ ಶ್ರೀಧರ, ಅಧ್ಯಾಪಕರಾ್ ಪ್ರಫುಲ್ಲ ಕುಮಾರ್, ಸಿಬ್ಬಂದಿಗಳು, ಸಹ ಸಿಬ್ಬಂದಿಗಳು ಸೈನಿಕ ಅಕಾಡೆಮಿ ಅಭ್ಯರ್ಥಿಗಳು ಉಪಸ್ಥಿತರಿದ್ದರು.