ರಾಯಚೂರು: 14ನೇ ಹಣಕಾಸಿನ ಆಯೋಗಕ್ಕೂ 15 ನೇ ಹಣಕಾಸಿನ ಆಯೋಗಕ್ಕೂ ಹೋಲಿಸಿದರೆ, ರಾಜ್ಯಕ್ಕೆ ಅನುದಾನ ನೀಡಿಕೆಯಲ್ಲಿ 80 ಸಾವಿರ ಕೋಟಿ ನಷ್ಟವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ರಾಯಚೂರಿನಲ್ಲಿ ಕಾರ್ಯಕ್ರಮದಲ್ಲಿ ಭಾಗವಿಸಿದ ಸಂದರ್ಭದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಸಿಎಂ,ಅನುದಾನದಲ್ಲಿ ರಾಜ್ಯಕ್ಕೆ ನಷ್ಟವಾಗಿದ್ದರೂ ಬಿಜೆಪಿಯ ಯಾವ ಸಂಸದರೂ ಧ್ವನಿ ಎತ್ತುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕೇಂದ್ರ ಸಚಿವ ಪ್ರಹ್ಲಾದ್ ಜೋಷಿಯವರು ಪ್ರದಾನಿ ಮೋದಿಯವರೊಂದಿಗೆ ನಿಕಟಸಂಪರ್ಕ ಹೊಂದಿರುವ ಪ್ರಭಾವಿ ಸಚಿವ ಎಂದು ಹೇಳಲಾಗುತ್ತದೆ.11495 ಕೋಟಿ ರೂ.ಗಳನ್ನು ಹಣಕಾಸಿನ ಆಯೋಗದಲ್ಲಿ ವಿಶೇಷ ಅನುದಾನ ನೀಡಲು ಸಮ್ಮತಿ ನೀಡಲಾಗಿದ್ದರೂ ಕೇಂದ್ರ ಸರ್ಕಾರ ಈ ಅನುದಾನವನ್ನು ರಾಜ್ಯಕ್ಕೆ ಬಿಡುಗಡೆ ಮಾಡಲು ಅವರು ಯಾವುದೇ ಸಹಾಯವನ್ನು ಮಾಡಿಲ್ಲ. ಕರ್ನಾಟಕದ ಬಗ್ಗೆ ಮಾತನಾಡಲು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿಯವರಿಗೆ ಯಾವುದೇ ನೈತಿಕತೆ ಇಲ್ಲ ಎಂದು ಸಿದ್ದರಾಮಯ್ಯ ಗರಂ ಆಗಿ ನುಡಿದರು.
ದೆಹಲಿ ಪ್ರವಾಸದ ಕುರಿತು ಪ್ರತಿಕ್ರಿಯಿಸಿದ ಸಿಎಂ, ರಾಷ್ಟ್ರಪತಿಗಳ ಅಂಗಳಕ್ಕೆ ಹೋಗಿರುವ ಹಲವು ವಿಧೇಯಕಗಳ ಬಗ್ಗೆ ವಿವರಣೆ ನೀಡಲು ರಾಷ್ಟ್ರಪತಿಗಳನ್ನು ಭೇಟಿಯಾಗುವ ಸಮಯ ಕೋರಲಾಗಿದೆ. 16 ನೇ ಹಣಕಾಸಿನ ಆಯೋಗಕ್ಕೆ ಕರ್ನಾಟಕಕ್ಕೆ ಹೆಚ್ಚಿನ ಅನುದಾನ ನೀಡುವಂತೆ ಮನವಿ ಮಾಡಲಾಗಿತ್ತು. ಈ ಬಗ್ಗೆ ಚರ್ಚಿಸಲು ಪ್ರಧಾನಿಯವರನ್ನು, ಹಣಕಾಸಿನ ಸಚಿವರನ್ನು ಭೇಟಿ ಮಾಡಬೇಕಿದೆ ಎಂದು ತಿಳಿಸಿದರು.
ಕಲ್ಯಾಣ ಕರ್ನಾಟಕ ಭಾಗದಲ್ಲಿ ಎಸ್ ಎಸ್ ಎಲ್ ಸಿ ಫಲಿತಾಂಶ ಕುಸಿಯಲು ಶಿಕ್ಷಕರ ಕೊರತೆ ಕಾರಣವಾಗಿರುವ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿ, ಹೊಸ ಶಿಕ್ಷಕರ ನೇಮಕಾತಿಗೆ ಈಗಾಗಲೇ ಆದೇಶ ನೀಡಲಾಗಿದೆ. ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿಯಲ್ಲಿ ಉತ್ತಮ ಫಲಿತಾಂಶ ಹೊರಬರಲು ಸರ್ಕಾರ ಎಲ್ಲ ಪ್ರಯತ್ನಗಳನ್ನು ಕೈಗೊಳ್ಳಲಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ ನಡೆದ ಅಕ್ರಮ ಗಣಿಗಾರಿಕೆಯ ಬಗ್ಗೆ ಸಚಿವ ಎಚ್.ಕೆ.ಪಾಟೀಲ್ ಮುಖ್ಯಮಂತ್ರಿಗಳಿಗೆ ಬರೆದ ಪತ್ರದ ಬಗ್ಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಅಕ್ರಮ ಗಣಿಗಾರಿಕೆ ಪ್ರಕರಣಗಳು ಹಿಂದಿನ ಅವಧಿಯಲ್ಲಿ ನಡೆದಿದೆ, ಈ ಬಗ್ಗೆ ತ್ವರಿತ ತನಿಖೆ ನಡೆಸಲು ವಿಶೇಷ ಕೋರ್ಟ್ ರಚಿಸಿ, ಗಣಿಗಾರಿಕೆಯಲ್ಲಿರುವ ಬಾಕಿ ವಸೂಲಾತಿಗೆ ಶೀಘ್ರ ಕ್ರಮ ತೆಗೆದುಕೊಳ್ಳಲು ಪತ್ರದಲ್ಲಿ ತಿಳಿಸಿದ್ದಾರೆ. ಸಚಿವ ಸಂಪುಟದಲ್ಲಿ ಈ ವಿಷಯವನ್ನು ಚರ್ಚಿಸಿ ತೀರ್ಮಾನಿಸುತ್ತೇವೆ ಎಂದು ಹೇಳಿದರು.
ಅಂದಿನ ಲೋಕಾಯುಕ್ತ ಸಂತೋಷ್ ಹೆಗಡೆಯವರು ಅಕ್ರಮ ಗಣಿಗಾರಿಕೆ ಬಗ್ಗೆ ವರದಿಯನ್ನೂ ನೀಡಿದ್ದರು. ಈ ವರದಿಯ ಬಗ್ಗೆ ವಿಧಾನಸಭೆಯಲ್ಲಿ ನಾನು ಕೇಳಿದ ಪ್ರಶ್ನೆಗೆ ಸರ್ಕಾರದಿಂದ ಸಮರ್ಪಕ ಉತ್ತರ ಬಂದಿರಲಿಲ್ಲ. ಆಗ ಅಕ್ರಮ ಗಣಿಗಾರಿಕೆ ವಿರುದ್ಧ ಬಳ್ಳಾರಿಯಲ್ಲಿ ಪಾದಯಾತ್ರೆ ನಡೆಸಲಾಗಿತ್ತು ಎಂದು ಸಿಎಂ ಸ್ಮರಿಸಿದರು.
ಕಾಂಗ್ರೆಸ್ ಶಾಸಕ ರಾಜು ಕಾಗೇ ಯವರು ತಮ್ಮ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳು ಪ್ರಾರಂಭವಾಗದಿರುವ ಬಗ್ಗೆ ಅಸಮಧಾನ ವ್ಯಕ್ತಪಡಿಸಿ ರಾಜೀನಾಮೆ ನೀಡುವ ಇಂಗಿತ ವ್ಯಕ್ತಪಡಿಸಿದ್ದಾರಲ್ಲ ಎಂದುದಕ್ಕೆ ಈ ಬಗ್ಗೆ ಅವರೊಂದಿಗೆ ಚರ್ಚಿಸಲಾಗುವುದು. ವಿಶೇಷ ಅನುದಾನವನ್ನು ಅಗತ್ಯವಿರುವ ವಿಧಾನಸಭಾ ಕ್ಷೇತ್ರಗಳಿಗೆ ನೀಡಲಾಗುವುದು ಎಂದು ಹೇಳಿದರು.
ಶಾಸಕ ಬೇಳೂರು ಗೋಪಾಲಕೃಷ್ಣ ಅವರು, ವಸತಿ ಸಚಿವರು ರಾಜಿನಾಮೆ ನೀಡಬೇಕು ಎಂದು ಹೇಳಿದ್ದಾರಲ್ಲ ಎಂಬ ಪ್ರಶ್ನೆಗೆ,ಇದರ ಬಗ್ಗೆ ಮಾಹಿತಿ ಪಡೆಯುತ್ತೇನೆ. ವಸತಿ ಇಲಾಖೆಯ ವಿಷಯದ ಕುರಿತು ಚರ್ಚಿಸಲು ಶಾಸಕ ಬಿ.ಆರ್.ಪಾಟೀಲ್ ಅವರು ಇದೇ 25 ರಂದು ಭೇಟಿಯಾಗುವುದಾಗಿ ತಿಳಿಸಿದ್ದಾರೆ ಅವರ ಜೊತೆ ಮಾತನಾಡುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದರು.