ಮೈಸೂರು: ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳು ಕ್ರಮಬದ್ಧವಾಗಿ ಭಾಗವಹಿಸಿದರೆ ಉನ್ನತ ಮಟ್ಟಕ್ಕೆ ಹೋಗಲು ಸಾಧ್ಯ ಎಂದು ರಾಜ್ಯ ಪ್ರಶಸ್ತಿ ವಿಜೇತರಾದ
ಲಯನ್ ಸಿ.ಆರ್. ದಿನೇಶ್ ಹೇಳಿದರು.

ನಂಜನಗೂಡು ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರೂ ಆದ ಅವರು, ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮ ಅಧಿಕಾರಿಗಳಿಗೆ ತರಬೇತಿ ನೀಡುವ ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ಕಾರ್ಯಕ್ರಮ ಅಧಿಕಾರಿಗಳು ವಿದ್ಯಾರ್ಥಿಗಳಿಗೆ ಸರ್ಕಾರ,ಸರ್ಕಾರೇತರ ಹಾಗೂ ವಿವಿಧ ಸಂಘ ಸಂಸ್ಥೆಗಳ ಮೂಲಕ ಕಾರ್ಯಕ್ರಮಗಳನ್ನು ಆಯೋಜಿಸಿ ಜೀವನ ಮೌಲ್ಯ, ಜೀವನ ಕೌಶಲ್ಯ ಸಮಾಜ ಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಮೈಸೂರು ವಿಶ್ವವಿದ್ಯಾನಿಲಯದ ರಾಷ್ಟ್ರೀಯ ಸೇವಾ ಯೋಜನೆಯ ಸಂಯೋಜನಾಧಿಕಾರಿ ಡಾ. ಎಂ. ಬಿ ಸುರೇಶ್ ಅವರು ಮಾತನಾಡಿ ರಾಜಕೀಯ ಸೇವಾ ಯೋಜನೆಯಲ್ಲಿ ವಿಶ್ವವಿದ್ಯಾನಿಲಯ, ರಾಜ್ಯ ,ರಾಷ್ಟ್ರ ಪ್ರಶಸ್ತಿಗಳನ್ನು ಯಾವ ರೀತಿ ಪಡೆದುಕೊಳ್ಳಬೇಕು ಎಂದು ಮಾಹಿತಿ ನೀಡಿದರು.
ಮುಂಜಾನೆ ನಡೆದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ವಿಶ್ರಾಂತ ರಾ.ಸೇ.ಯೋ ಸಂಯೋಜನಾದಿಕಾರಿ ಡಾ.ರುದ್ರಯ್ಯ ಅವರು ಮಾತನಾಡಿ ಕಾರ್ಯಕ್ರಮ ಅಧಿಕಾರಿಗಳು ಖುಷಿಯಿಂದ ಸ್ವಂತ ಇಚ್ಛೆಯಿಂದ ಕಾರ್ಯಕ್ರಮ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದರೆ ಕಾರ್ಯಕ್ರಮದಲ್ಲಿ ಸಫಲತೆಯನ್ನು ಸಾಧಿಸಬಹುದು ಎಂದು ಹೇಳಿದರು.
ಡಾ. ಜಿ .ಬಿ ಶಿವರಾಜ್ ಅವರು ಮಾತನಾಡಿ ಸಣ್ಣ ಸಣ್ಣ ವಿಚಾರಗಳ ಬಗ್ಗೆ ಸೂಕ್ಷಮತೆಯಿಂದ ಗಮನ ವಹಿಸಬೇಕು, ಗಾಂಧೀಜಿಯವರ ಜೀವನ ತತ್ವಗಳನ್ನು ಸ್ವಲ್ಪ ಮಟ್ಟಿಗಾದರೂ ಕಾರ್ಯಕ್ರಮ ಅಧಿಕಾರಿಗಳು ತಮ್ಮ ಜೀವನದಲ್ಲಿ ಅಳವಡಿಸಿ ಕೊಳ್ಳಬೇಕೆಂದು ಕಿವಿ ಮಾತು ಹೇಳಿದರು.
ಡಾ.ವೀರಯ್ಯ, ಡಾ. ನಿಂಗರಾಜು ಹಾಗೂ ಪದವಿ ಕಾಲೇಜು ,ಇಂಜಿನಿಯರಿಂಗ್ ಕಾಲೇಜು , ಪದವಿ ಪೂರ್ವ ಕಾಲೇಜಿನ ನೂರು ಜನ ರಾಷ್ಟ್ರೀಯ ಯೋಜನೆಯ ಕಾರ್ಯಕ್ರಮ ಅಧಿಕಾರಿಗಳು ಕಾರ್ಯಗಾರದಲ್ಲಿ ಭಾಗವಹಿಸಿದ್ದರು.