ಬೀದರ್: ತ್ರಿಭಾಷಾ ವಚನ ಗಾಯನದ ಪರಿಣತಿಯನ್ನು ಗುರುತಿಸಿ ಬೀದರಿನ ವಿಶ್ವ ಕನ್ನಡಿಗರ ಸಂಸ್ಥೆಯು ಹೈದರಾಬಾದ್ ಪ್ರಗತಿನಗರದ ನಿವಾಸಿ, ಕಲಬುರಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ನಿವೃತ್ತ ಉಪನಿರ್ದೇಶಕ ಜಿ. ಚಂದ್ರಕಾಂತ ಅವರನ್ನು ರಾಷ್ಟ್ರೀಯ ಮಟ್ಟದ ಕರ್ನಾಟಕ ಕಾಯಕ ರತ್ನ ರಾಷ್ಟ್ರೀಯ ಸದ್ಭಾವನಾ ಪ್ರಶಸ್ತಿಗಾಗಿ ಆಯ್ಕೆ ಮಾಡಿದೆ.
ಬೀದರ್ ಜಿಲ್ಲೆಯ ಭಾಲ್ಕಿ ತಾಲ್ಲೂಕಿನ ಗೋರಚಿಂಚೋಳಿ ಗ್ರಾಮದ ಜಿ. ಚಂದ್ರಕಾಂತ, ಬಾಲ್ಯದಿಂದಲೂ ಭಜನೆ ಮತ್ತು ನಾಟಕದ ಬಗ್ಗೆ ಒಲವು ಹೊಂದಿದ್ದರು.
ಸೌಭಾಗ್ಯ ಲಕ್ಷ್ಮೀ ಸಾಮಾಜಿಕ ನಾಟಕದಲ್ಲಿ ಬಾಲ ನಟನಾಗಿ ನಟಿಸಿದ್ದಾರೆ. ಶಿಕ್ಷಣವನ್ನು ಪೂರ್ಣಗೊಳಿಸಿದ ನಂತರ, ಅವರು ಸರ್ಕಾರದ ವಾರ್ತಾ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವಾಗ ಮನೆಯಲ್ಲಿಯೇ ಸಂಗೀತ ಕಲಿಯಲು ಪ್ರಾರಂಭಿಸಿದರು.
ಮಹಾನ್ ಮಾನವತಾವಾದಿ ಬಸವೇಶ್ವರರ ವಚನಗಳ ಸಾರವನ್ನು ಇತರ ಭಾಷಿಕರು ಮತ್ತು ಧಾರ್ಮಿಕರಿಗೂ ತಲುಪಿಸುವ ಉದ್ದೇಶದಿಂದ, ಅವರು ಕನ್ನಡ, ಹಿಂದಿ, ಮರಾಠಿ, ತೆಲುಗು ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ವಿವಿಧ ರಾಗಗಳಲ್ಲಿ ಸುಮಾರು 20-25 ವಚನಗಳನ್ನು ಹಾಡುವರು.
ಇದಲ್ಲದೆ ಅವರು ಗಜಲ್‌ಗಳು, ಜಾನಪದ ಗೀತೆಗಳು, ಕನ್ನಡ ಗೀತೆಗಳು ಮತ್ತು ಮರಾಠಿ ಅಭಂಗಗಳನ್ನು ಸಹ ಹಾಡುತ್ತಾರೆ. ಅವರು ವಿಶ್ವ ವಿಖ್ಯಾತ ಮೈಸೂರು ದಸರಾ, ಹಂಪಿ ಉತ್ಸವ ಸೇರಿದಂತೆ ವಿವಿಧ ರಾಜ್ಯ ಮಟ್ಟದ ಉತ್ಸವಗಳಲ್ಲಿ ತ್ರಿಭಾಷಾ ವಚನ ಮತ್ತು ಗಜಲ್‌ಗಳ ಗಾಯನ ಮಾಡಿದ್ದಾರೆ. ಅವರು ಆಲ್ ಇಂಡಿಯಾ ರೇಡಿಯೋದಿಂದ ಹಿಂದೂಸ್ತಾನಿ ಸುಗಮ ಸಂಗೀತದಲ್ಲಿ “ಬಿ” ದರ್ಜೆಯನ್ನು ಸಹ ಪಡೆದಿದ್ದಾರೆ.
ರಾಷ್ಟ್ರೀಯ ಮಟ್ಟದ ಕರ್ನಾಟಕ ಕಾಯಕ ರತ್ನ ರಾಷ್ಟ್ರೀಯ ಸದ್ಭಾವನಾ ಪ್ರಶಸ್ತಿಗೆ ವಿವಿಧ ಕ್ಷೇತ್ರಗಳ ಒಟ್ಟು 16 ಸಾಧಕರನ್ನು ಆಯ್ಕೆ ಮಾಡಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಸುಬ್ಬಣ್ಣ ಕರಕನಳ್ಳಿ ಹೇಳಿದ್ದಾರೆ.
ಅವರಲ್ಲಿ ಶ್ರೀ ಚಂದ್ರಕಾಂತ ಒಬ್ಬರು. 70ನೇ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಸಾಂಸ್ಕೃತಿಕ ಮತ್ತು ಸಂಗೀತ ಕಾರ್ಯಕ್ರಮದಲ್ಲಿ ಡಿಸೆಂಬರ್ 9, ಮಂಗಳವಾರ ಬೀದರಿನ ಶ್ರೀ ಚೆನ್ನಬಸವ ಪಟ್ಟದೇವರು ರಂಗ ಮಂದಿರದಲ್ಲಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.
ಕರ್ನಾಟಕ ಕಾಯಕ ರತ್ನ ರಾಷ್ಟ್ರೀಯ ಸದ್ಭಾವನಾ ಪ್ರಶಸ್ತಿಗೆ ಚಂದ್ರಕಾಂತ ಆಯ್ಕೆ