ಅತ್ಯಾಚಾರ ಆರೋಪಿ ಶಿಕ್ಷಕ ಗಿರೀಶ್ ಎಸ್ಕೇಪ್

ಮೈಸೂರು,ಮಾ.4: ಮೈಸೂರು ಜಿಲ್ಲೆ, ಹೆಚ್.ಡಿ ಕೋಟೆ ಸರ್ಕಾರಿ ಶಾಲೆಯಲ್ಲಿ ನಡೆದಿದ್ದ ವಿದ್ಯಾರ್ಥಿನಿಯರ ಮೇಲಿನ ಅತ್ಯಾಚಾರ ಪ್ರಕರಣದ ಆರೋಪಿ ಮುಖ್ಯ ಶಿಕ್ಷಕ ಗಿರೀಶ್ ನಾಪತ್ತೆಯಾಗಿದ್ದಾನೆ.

ಶಿಕ್ಷಕ ಗಿರೀಶ್ ವಿರುದ್ದ ಪೋಕ್ಸೋ ಪ್ರಕರಣ ದಾಖಲಾಗಿದ್ದು ಆತ ನಾಪತ್ತೆಯಾದ ಹಿನ್ನೆಲೆಯಲ್ಲಿ ಕರ್ತವ್ಯ ಲೋಪ‌ ತೋರಿದ ಆರೋಪದ ಮೇಲೆ ಮೂವರು ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ.

ಕಾಮುಕ ಶಿಕ್ಷಕ ಗಿರೀಶ್ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಇಒ ಕಾಂತರಾಜು, ಸಿಆರ್‌ಪಿ ದೀಪಾ, ಇಸಿಒ ಜಯರಾಂ ಅವರನ್ನು ಅಮಾನತು ಮಾಡಿ ಡಿಡಿಪಿಐ ಜವರೇಗೌಡ ಆದೇಶ ಹೊರಡಿಸಿದ್ದಾರೆ.

ಹೆಚ್.ಡಿ.ಕೋಟೆ ಠಾಣಾ ಪೊಲೀಸರು ಬಿಇಒ ಕಾಂತರಾಜು ಅವರನ್ನ ಕರೆದೊಯ್ದು ವಿಚಾರಣೆಗೊಳಪಡಿಸಿದ್ದಾರೆ.

ಮುಖ್ಯ ಶಿಕ್ಷಕ ಗಿರೀಶ್ ಜಂತುಹುಳ ಮಾತ್ರೆ ಎಂದು ನಂಬಿಸಿ ಮತ್ತು ಬರುವ ಮಾತ್ರೆ ಕೊಟ್ಟು ವಿದ್ಯಾರ್ಥಿನಿಯರ ಮೇಲೆ ಅತ್ಯಾಚಾರವೆಸಗುತ್ತಿದ್ದ ಎಂಬ ಆರೋಪ ಕೇಳಿ ಬಂದಿದೆ.

ಮುಖ್ಯ ಶಿಕ್ಷಕ ಗಿರೀಶ್ ಹಲವು ದಿನಗಳಿಂದ ಇದೇ ದುರ್ವರ್ತನೆ ತೋರಿಸುತ್ತಿದ್ದು ಸಾಕಷ್ಟು ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದ ಎನ್ನಲಾಗಿದೆ‌.

ಈ ಸಂಬಂಧ ಅದೇ ಶಾಲೆಯ ಶಿಕ್ಷಕರ ಬಳಿ ವಿದ್ಯಾರ್ಥಿನಿಯರು ದೂರು ಹೇಳಿದ್ದು ಪೋಷಕರಿಗೂ ಮಾಹಿತಿ ನೀಡಿದ್ದರು. ಹೆಚ್.ಡಿ ಕೋಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪ್ರಕರಣದ ಬಳಿಕ ಗಿರೀಶ್ ನಾಪತ್ತೆಯಾಗಿದ್ದಾನೆ.