ಅಪ್ರಾಪ್ತ ಬಾಲಕಿ ಮೇಲೆ‌ ಅತ್ಯಾಚಾರ ಎಸಗಿದ ಆರೋಪಿಗೆ 20 ವರ್ಷ ಜೈಲುಶಿಕ್ಷೆ

ಮೈಸೂರು: ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರವೆಸಗಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ವ್ಯಕ್ತಿಗೆ ಜೈಲುಶಿಕ್ಷೆ ಹಾಗೂ ದಂಡ ವಿಧಿಸಿ ಮೈಸೂರಿನ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ.

ದಡಘಟ್ಟ ಗ್ರಾಮದ ಆರೋಪಿ ಕಿರಣ ಎಂಬಾತ ಜೈಲುಶಿಕ್ಷೆಗೆ ಗುರಿಯಾದ ಆರೋಪಿ.

ಪಿರಿಯಾಪಟ್ಟಣ ತಾಲ್ಲೂಕು ಬೆಟ್ಟದಪುರ ಠಾಣಾ ವ್ಯಾಪ್ತಿಗೆ ಸೇರಿದ ಹಲಗನಹಳ್ಳಿ ಗ್ರಾಮದ ದೂರುದಾರರ ಮಗಳು ಪಿ.ಯು.ಸಿ ವಿದ್ಯಾರ್ಥಿನಿ.

ಆಕೆಯನ್ನು ಜಾತ್ರೆಯ ಸಮಯದಲ್ಲಿ ಮಕ್ಕಳ ಆಟದ ಸಾಮಾನುಗಳನ್ನು ಮಾರಾಟ ಮಾಡುವ ಕೆಲಸ ಮಾಡುತ್ತಿದ್ದ ದಡಘಟ್ಟ ಗ್ರಾಮದ ಆರೋಪಿ ಕಿರಣ ಎಂಬಾತ ಪರಿಚಯ ಮಾಡಿಕೊಂಡಿದ್ದನು.

ಆರೋಪಿಗೆ ಈಗಾಗಲೇ ಮದುವೆಯಾಗಿದ್ದರೂ ಸಹ ಅಪ್ರಾಪ್ತ ಬಾಲಕಿಯನ್ನು ಮದುವೆಯಾಗುವುದಾಗಿ ಪುಸಲಾಯಿಸಿ 23-3-2022 ರಂದು ನಿಮ್ಮ ತಾಯಿ ಕರೆಯುತ್ತಿದ್ದಾರೆ ಎಂದು ಹೇಳಿ ಹಲಗನಹಳ್ಳಿಯಿಂದ ಕರೆದುಕೊಂಡು ಹುಬ್ಬಳ್ಳಿಗೆ ಬಂದು ಅಲ್ಲಿ ಒಂದು ಮನೆಯಲ್ಲಿ ಇದ್ದನು.

ಈ ಸಮಯದಲ್ಲಿ ಬಾಲಕಿಗೆ ತಾಳಿಯನ್ನು ಕಟ್ಟಿ ಬಾಲ್ಯ ವಿವಾಹ ಮಾಡಿಕೊಂಡಿದ್ದು, ನಂತರ ಅದೇ ಮನೆಯಲ್ಲಿ ಹಲವಾರು ಬಾರಿ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ.

ಇದು ಸಾಬೀತಾದುದರಿಂದ ಬೈಲುಕುಪ್ಪೆ ವೃತ್ತ ನಿರೀಕ್ಷಕ ಬಿ.ಜಿ.ಪ್ರಕಾಶ್ ಅವರು ಆರೋಪಿತನ ವಿರುದ್ಧ ದೋಷಾರೋಪಣಾ ಪತ್ರವನ್ನು ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ಮೈಸೂರಿನ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಎಫ್.ಟಿ.ಎಸ್.ಸಿ. ನ್ಯಾಯಾಧೀಶ ಆನಂದ್ ಪಿ. ಹೊಗಾಡೆ ಅವರು, ಆರೋಪಿ ವಿರುದ್ಧ ಅಪರಾಧ ಸಾಬೀತಾಗಿದೆ ಎಂದು ತಿಳಿಸಿ ಆರೋಪಿ ಕಿರಣ ಹೆಚ್.ಎಂ.ಗೆ ಪೊಕ್ಸೋ ಕಾಯಿದೆಯಡಿ ಅಪರಾಧಗಳಿಗೆ ಒಟ್ಟು 20 ವರ್ಷ ಕಠಿಣ ಸಜೆ ಹಾಗೂ 5,000 ದಂಡ, ಬಾಲಕಿಯನ್ನು ಅಪಹರಣ ಮಾಡಿದ ಅಪರಾಧಕ್ಕೆ 10 ವರ್ಷ ಸಾದಾ ಸಜೆ ಮತ್ತು 5,000 ದಂಡ, ಬಾಲಕಿಯನ್ನು ಬಾಲ್ಯ ವಿವಾಹ ಮಾಡಿಕೊಂಡಿರುವ ಅಪರಾಧಕ್ಕೆ 1 ವರ್ಷ ಸಾದಾ ಸಜೆ ಹಾಗೂ 5,000 ರೂ ದಂಡ ವಿಧಿಸಿ ತೀರ್ಪು ಪ್ರಕಟಿಸಿದರು.

ಸರ್ಕಾರದ ಪರವಾಗಿ ಮೈಸೂರು ಪೋಕ್ಸೋ ವಿಶೇಷ ನ್ಯಾಯಾಲಯದ ವಿಶೇಷ ಸರ್ಕಾರಿ ಅಭಿಯೋಜಕರಾದ ಕೆ.ಬಿ.ಜಯಂತಿ ಅವರು ವಾದ ಮಂಡಿಸಿದರು.