ರಾಜ್ಯೋತ್ಸವ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಿಗೆ ನಿವೇಶನ ನೀಡಲು ಜಾನಪದ ಎಸ್ ಬಾಲಾಜಿ ಆಗ್ರಹ

Spread the love

ಬೆಂಗಳೂರು: ಕರ್ನಾಟಕ ಸರ್ಕಾರದ ರಾಜ್ಯೋತ್ಸವದ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಿಗೆ ನಿವೇಶನ ನೀಡಬೇಕೆಂದು ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷ ಹಾಗೂ ಭಾರತ ಸರ್ಕಾರದ ಐಸಿಸಿಆರ್ ಸದಸ್ಯ ಡಾ ಜಾನಪದ ಎಸ್ ಬಾಲಾಜಿ ಒತ್ತಾಯಿಸಿದ್ದಾರೆ.

ಬೆಂಗಳೂರಿನ ಬಸವೇಶ್ವರ ನಗರದ ಡಾ. ಬಿ ಆರ್ ಅಂಬೇಡ್ಕರ್ ಕ್ರೀಡಾಂಗಣ ಯೋಗ ಸಭಾಂಗಣದಲ್ಲಿ ಕನ್ನಡ ಜಾನಪದ ಪರಿಷತ್ ಗೋವಿಂದರಾಜ ನಗರ ವಿಧಾನಸಭಾ ಕ್ಷೇತ್ರದ ವತಿಯಿಂದ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸಾಧಕರನ್ನು ಸನ್ಮಾನಿಸಿ ಬಾಲಾಜಿ ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಪ್ರಶಸ್ತಿ ಪುರಸ್ಕಾರ ಪಡೆದವರನ್ನು ಗೌರವಿಸುವ, ಶುಭಾಶಯ ತಿಳಿಸುವ ಮನಸ್ಥಿತಿ ಕಡಿಮೆಯಾಗಿದೆ, ಪ್ರಶಸ್ತಿ ಪುರಸ್ಕಾರಗಳನ್ನು ಪಡೆದವರ ಜವಾಬ್ದಾರಿ ಹೆಚ್ಚುತ್ತದೆ ಹಾಗೂ ಮತ್ತೆ ಇನ್ನೂ ಹೆಚ್ಚು ಕ್ರಿಯಾಶೀಲವಾಗಿರಲು ಉತ್ತೇಜನ ನೀಡುತ್ತದೆ ಎಂದು ತಿಳಿಸಿದರು.

ಜೀವನ ಪೂರ್ತಿ ಸಾಧನೆ ಮಾಡುವ ಬಹುತೇಕ ಪ್ರಶಸ್ತಿ ಪುರಸ್ಕೃತರಿಗೆ ಸ್ವಂತ ನಿವೇಶನವಿಲ್ಲ, ಆದ್ದರಿಂದ ಸರ್ಕಾರ ಕೂಡಲೇ ರಾಜ್ಯೋತ್ಸವ ಹಾಗೂ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಿಗೆ ಉಚಿತ ನಿವೇಶನ ನೀಡಬೇಕೆಂದು ಡಾ ಜಾನಪದ ಎಸ್ ಬಾಲಾಜಿ ಆಗ್ರಹಿಸಿದರು.

ಗೋವಿಂದರಾಜ ನಗರ ವಿಧಾನಸಭಾ ಕ್ಷೇತ್ರ ಅಧ್ಯಕ್ಷ ರ ನರಸಿಂಹಮೂರ್ತಿ ಮಾತನಾಡಿ ಉತ್ತಮ ಕಾರ್ಯನಿರ್ವಹಿಸಿ ಸಾಧನೆ ಮಾಡಿ ಪ್ರಶಸ್ತಿ ಪಡೆದ ನಾಲ್ಕು ಜನ ಪ್ರಶಸ್ತಿ ಪುರಸ್ಕೃತರಿಗೆ ಗೌರವಿಸುತ್ತಿರುವುದು ಗೋವಿಂದರಾಜ ನಗರ ವಿಧಾನಸಭಾ ಕ್ಷೇತ್ರದ ಸೌಭಾಗ್ಯ, ಇನ್ನು ಹೆಚ್ಚು ಪ್ರಶಸ್ತಿ ಇವರಿಗೆ ಲಭಿಸಲಿ ಎಂದು ಹಾರೈಸಿದರು.

ಡಾ ಜೋಗಿಲು ಸಿದ್ದರಾಜು ಹಾಗೂ ಸಿದ್ದಯ್ಯ ಅವರು ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿಗೆ ಹಾಗೂ ಡಾ ರಿಯಾಜ್ಹ್ ಪಾಷಾ ಕರ್ನಾಟಕ ಸಾಹಿತ್ಯ ಪರಿಷತ್ತಿನ ಪುಸ್ತಕ ದತ್ತಿ ಪ್ರಶಸ್ತಿಗೆ, ಉಷಾ ಬಸಪ್ಪ ರಾಣಿ ಚೆನ್ನಮ್ಮ ಪ್ರಶಸ್ತಿಗೆ ಆಯ್ಕೆಯಾಗಿದ್ದು ಅವರನ್ನೆಲ್ಲ ಸನ್ಮಾನಿಸಿ ಅಭಿನಂದಿಸಿ‌ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಹಿರಿಯ ಕ್ರೀಡಾಪಟು ಹಾಗೂ ಮಾಜಿ ಸೈನಿಕ ವಿಜಯಕುಮಾರ್, ಪರಿಷತ್ತಿನ ಅಶ್ವಥ್ ನಾರಾಯಣ್, ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಮಹೇಂದ್ರ ಜಾದವ್ ಮತ್ತಿತರರು ಉಪಸ್ಥಿತರಿದ್ದರು.