ನವದೆಹಲಿ: ಆಯುಷ್ಮಾನ್ ಭಾರತ್ ಕಾರ್ಯಕ್ರಮದಡಿಯಲ್ಲಿ ಹೃದಯಾಘಾತ ಮತ್ತು ಪಾರ್ಶ್ವವಾಯುಗೆ ಚಿಕಿತ್ಸೆ ಪಡೆಯಲು ರಾಷ್ಟ್ರವ್ಯಾಪಿ ಯೋಜನೆ ರೂಪಿಸಬೇಕು ಎಂದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಕೋರಿದರು
ರಾಜ್ಯಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಹೃದಯಾಘಾತ ಮತ್ತು ಪಾರ್ಶ್ವವಾಯುನಿಂದ ಮರಣ ಹೊಂದುವವರು ಭಾರತದಲ್ಲಿ ಹೆಚ್ಚುತ್ತಿದ್ದಾರೆ. ಪ್ರತಿ ವರ್ಷ ನಾವು ಲಕ್ಷಾಂತರ ಜನರನ್ನು ಕಳೆದುಕೊಳ್ಳುತ್ತಿದ್ದೇವೆ ಮತ್ತು ದುರದೃಷ್ಟವಶಾತ್ ಶೇ.30ರಷ್ಟು ಹೃದಯಾಘಾತಗಳು 45 ವರ್ಷಕ್ಕಿಂತ ಕಡಿಮೆ ವಯಸ್ಸಿನ ವ್ಯಕ್ತಿಗಳಲ್ಲಿ ಸಂಭವಿಸುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.
ಗ್ರಾಮೀಣ ಪ್ರದೇಶದಲ್ಲಿ ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡಿರುವ ಸಲುವಾಗಿ ತಾಲ್ಲೂಕು ಆಸ್ಪತ್ರೆಗಳಲ್ಲಿ 18,000 ಕ್ಕೆ ರಕ್ತ ಹೆಪ್ಪುಗಟ್ಟುವಿಕೆ ಕರಗಿಸುವ ಇಂಜೆಕ್ಷನ್‌ಗಳು ಲಭ್ಯವಾಗುವಂತೆ ಮಾಡಬೇಕು ಎಂದು
ಗೌಡರು ಮನವಿ ಮಾಡಿದರು.
ಆರಂಭಿಕವಾಗಿ ಆಯುಷ್ಮಾನ್ ಭಾರತ್ ಅಡಿಯಲ್ಲಿ ಆಂಜಿಯೋಪ್ಲ್ಯಾಸ್ಟಿ ಮತ್ತು ಸ್ಟಂಟ್ ಅಳವಡಿಸುವುದಕ್ಕಾಗಿ ರೋಗಿಗಳನ್ನು ಹತ್ತಿರದ ನಗರಗಳಿಗೆ ಸ್ಥಳಾಂತರಿಸುವ ವ್ಯವಸ್ಥೆ ಮಾಡಬೇಕು ಎಂದು ಅವರು ಹೇಳಿದರು.
ಆಯುಷ್ಮಾನ್ ಭಾರತ್ ಅಡಿಯಲ್ಲಿ ಆಂಜಿಯೋಪ್ಲ್ಯಾಸ್ಟಿ ಒಳಗೊಳ್ಳಲ್ಪಟ್ಟಿದ್ದರೂ ಜೀವ ರಕ್ಷಕ ಔಷಧಿಗಳನ್ನು ಸಹ ಈ ಯೋಜನೆಯಲ್ಲಿ ಸೇರಿಸಬೇಕು ಎಂದು ಹೇಳಿದರು.
ಗ್ರಾಮೀಣ ಪ್ರದೇಶಗಳಲ್ಲಿ ಕೆಲಸ ಮಾಡುವ ಎಂಬಿಬಿಎಸ್ ವೈದ್ಯರ ವೇತನ ಹೆಚ್ಚಳ ಮಾಡುವ ಅಗತ್ಯವಿದೆ ಎಂದು ದೇವೇಗೌಡರು ಒತ್ತಾಯಿಸಿದರು.
ಗ್ರಾಮೀಣ ಪ್ರದೇಶಗಳಲ್ಲಿ ಸೇವೆ ಸಲ್ಲಿಸುತ್ತಿರುವ ವೈದ್ಯರಿಗೆ ಪ್ರೋತ್ಸಾಹ ಧನ ನೀಡಬೇಕು. ಗ್ರಾಮೀಣ ಆರೋಗ್ಯವನ್ನು ನಾವು ಸುಧಾರಿಸದೇ ಇದ್ದರೆ, ನಮ್ಮ ಹಳ್ಳಿಗಳು ಸರಿಯಾದ ವೈದ್ಯಕೀಯ ಆರೈಕೆಯ ಕೊರತೆಯಿಂದ ಬಳಲುತ್ತಲೇ ಇರುತ್ತವೆ ಎಂದು ಎಚ್ಚರಿಸಿದರು.
ಸರ್ಕಾರಿ ಆಸ್ಪತ್ರೆಗಳಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿ ಮತ್ತು ದಾದಿಯರಿಗೆ ಕಡಿಮೆ ಸಂಬಳದ ಬಗ್ಗೆಯೂ ದೇವೇಗೌಡರು ಸರ್ಕಾರದ ಗಮನ ಸೆಳೆದರು.
ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟಲು ರಾಷ್ಟ್ರೀಯ ರೋಗನಿರೋಧಕ ಕಾರ್ಯಕ್ರಮದಲ್ಲಿ ಹೆಚ್ ಪಿವಿ ಲಸಿಕೆಯನ್ನು ಸೇರಿಸಬೇಕೆಂದು ದೇವೇಗೌಡರು ಮನವಿ ಮಾಡಿದರು.
ಸೇವೆಯಲ್ಲಿ ಹಿಂದುಳಿದ ಪ್ರದೇಶಗಳಲ್ಲಿ ಆರೋಗ್ಯ ಸೇವೆಯನ್ನು ಸುಧಾರಿಸಲು, ಗ್ರಾಮೀಣ ಪ್ರದೇಶಗಳಲ್ಲಿ ಸಣ್ಣ ವಿಶೇಷ ಕೇಂದ್ರಗಳನ್ನು ಸ್ಥಾಪಿಸುವ ಖಾಸಗಿ ಆಸ್ಪತ್ರೆಗಳಿಗೆ ಐದು ವರ್ಷಗಳ ತೆರಿಗೆ ವಿನಾಯಿತಿ ನೀಡುವಂತೆ ದೇವೇಗೌಡರು ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿದರು.