ಖ್ಯಾತ ಅಂತ ರಾಷ್ಟ್ರೀಯ ಕ್ರೀಡಾಪಟುಡಾ.ಕೆ.ಎಸ್ ರಾಜಣ್ಣ ಅವರಿಗೆ ಸನ್ಮಾನ

Spread the love

ಕೊಳ್ಳೇಗಾಲ: ಪಟ್ಟಣದ ಕಾವೇರಿ ರಸ್ತೆಯ ರಾಮಮಂದಿರದಲ್ಲಿ ವಿಶ್ವಕರ್ಮ ಸಮಾಜ ಹಾಗೂ ವಿಶ್ವಕರ್ಮ ಚಿನ್ನ ಬೆಳ್ಳಿ ಕೆಲಸಗಾರರ ಕ್ಷೇಮಾಭಿವೃದ್ಧಿ ಸಂಘದ ಸಂಯುಕ್ತಾಶ್ರಯದಲ್ಲಿ ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ ಹಾಗೂ ನಿವೃತ್ತ ನೌಕರರಿಗೆ, ಹಿರಿಯರಿಗೆ ಸನ್ಮಾನ ಮಾಡಲಾಯಿತು.

ಈ ಸಮಾರಂಭದಲ್ಲಿ ಪದ್ಮಶ್ರೀ ಪುರಸ್ಕೃತರು, ರಾಷ್ಟ್ರಪ್ರಶಸ್ತಿ ಪುರಸ್ಕೃತರು, ಖ್ಯಾತ ಅಂತ ರಾಷ್ಟ್ರೀಯ ಕ್ರೀಡಾಪಟು, ರಾಜ್ಯ ಅಂಗವಿಕಲ ವ್ಯಕ್ತಿಗಳ ಅದಿನಿಯಮದ ಮಾಜಿ ಆಯುಕ್ತರಾದ ಡಾ.ಕೆ.ಎಸ್ ರಾಜಣ್ಣ ಅವರನ್ನು ಸನ್ಮಾನಿಸಿದ್ದು ವಿಶೇಷವಾಗಿತ್ತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ರಾಜಣ್ಣ ಅವರು ಕೈ, ಕಾಲು ಇಲ್ಲದ ವ್ಯಕ್ತಿಗಳು ದೇಶದ ಬೆನ್ನೆಲುಬು, ದಿವ್ಯಾಂಗರನ್ನು ದೇವರೆಂದು ಪೂಜಿಸಿ ಅಂಗವಿಕಲರಿಗೆ ಕೆಲಸ ಮಾಡಲು ಅವಕಾಶ ಮಾಡಿಕೊಟ್ಟರೆ ಈ.ದೇಶಕ್ಕೆ ಗೌರವ ತಂದು ಕೊಡುತ್ತಾರೆ ಎಂದು ಹೇಳಿದರು.

ನನ್ನ ಜನಾಂಗದವರು ನನ್ನನ್ನು ಪ್ರೀತಿ ವಿಶ್ವಾಸದಿಂದ ಸನ್ಮಾನಿಸಿರುವುದು ನಾನು 2024 ರಲ್ಲಿ ಪಡೆದ ಪದ್ಮಶ್ರೀ ಪ್ರಶಸ್ತಿ ಪಡೆದ ಸಂತೋಷದಷ್ಟೇ ಆನಂದ ತಂದಿದೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ನನ್ನ ಜನಾಂಗದ ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲು ಸಹ ನನಗೆ ಸಂತೋಷವಾಗುತ್ತಿದೆ ಎಂದು ತಿಳಿಸಿದರು.

ಅಮರಶಿಲ್ಪಿ ಜಕಣಚಾರಿ ಸೇರಿದಂತೆ ನಮ್ಮ ಪೂರ್ವಿಕರು ಈ ದೇಶದ ಉದ್ದಗಲಕ್ಕೂ ಅನೇಕ ಕಲೆ ಮತ್ತು ವಾಸ್ತು ಶಿಲ್ಪ ಕೊಡುಗೆಯಾಗಿ ನೀಡಿದ್ದಾರೆ. ಅವರು ಕಟ್ಟಿದ ಕಲೆಗಳನ್ನು ನಮ್ಮ ಸಮಾಜದ ಇಂದಿನ ಪೀಳಿಗೆ ಮುಂದುವರೆಸಿಕೊಂಡು ಹೋಗಲು ವಿಫಲವಾಗಿದೆ, ಕಾರಣ ಬಡತನ ಎಂದು ವಿಷಾದಸಿದರು.

ನಮ್ಮ ಜನಾಂಗದವರು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ವಿರಳ, ಕೇಂದ್ರ ಸರ್ಕಾರ ಮನಸ್ಸು ಮಾಡಿದ್ದರೆ ನನ್ನ ಹಿರಿತನವನ್ನು ಗಮನಿಸಿ ರಾಜ್ಯಸಭಾ ಸದಸ್ಯನನ್ನಾಗಲಿ ಅಥವಾ ಯಾವುದಾದರೂ ಒಂದು ರಾಜ್ಯಕ್ಕೆ ರಾಜ್ಯಪಾಲರಾಗಿ ನೇಮಕ ಮಾಡಿದ್ದರೆ ನಾನು ರಾಜಕೀಯವಾಗಿ ಸೇವೆ ಸಲ್ಲಿಸಲು ಅವಕಾಶ ಕೊಟ್ಟಂತಾಗುತ್ತಿತ್ತು ಎಂದು ತಮ್ಮ ಮನದಾಳದ ಮಾತನ್ನಾಡಿದರು ರಾಜಣ್ಣ.

ಪ್ರಧಾನಿ ನರೇಂದ್ರ ಮೋದಿಯವರ ಕೈಯನ್ನು ಬಲಪಡಿಸಿ ಮೋದಿಯವರ ಕೈ ಬಲಪಡಿಸಿದರೆ ನಿಮ್ಮ ಮಕ್ಕಳ ಭವಿಷ್ಯ ಬಲವಾಗುತ್ತದೆ ಎಂದು ಸಲಹೆ ನೀಡಿದರು.

ನರೇಂದ್ರ ಮೋದಿಯವರು ನನಗೆ ಪದ್ಮಶ್ರೀ ಕೊಡಿಸಲು ನೆರವಾದರು. ಮುಖ್ಯಮಂತ್ರಿ ಸಿದ್ದರಾಮಯ್ಯ ನನ್ನನ್ನು 2023 ರಲ್ಲಿ ಅಂಗವಿಕಲರ ರಾಜ್ಯ ಆಯುಕ್ತ ನನ್ನಾಗಿ ಮಾಡಿ ಕೆಲಸ ಮಾಡಲು ಅವಕಾಶ ಮಾಡಿ ಕೊಟ್ಟಿದ್ದರು ಎಂದು ಅವರಯ ಸ್ಮರಿಸಿದರು.

ವಿಶ್ವಕರ್ಮ ಸಮಾಜ ಅಧ್ಯಕ್ಷ ಕೆ.ಪಿ.ಸಿದ್ದಪ್ಪಾಜಿ ಮಾತನಾಡಿ ಅಡುಗೆ ಕೆಟ್ಟರೆ ಒಂದು ದಿನದ ಊಟ ನಷ್ಟ, ಬೆಳೆ ನಾಶವಾದರೆ ಒಂದು ವರ್ಷ ಊಟ ನಷ್ಟ, ಮಕ್ಕಳ ವಿದ್ಯಾಬ್ಯಾಸ ನಷ್ಟವಾದರೆ ಜೀವನ ಪೂರ್ತಿ ನಷ್ಟ ಆದ್ದರಿಂದ ಸಮಾಜದ ಬಂಧುಗಳು ಮಕ್ಕಳ ವಿದ್ಯಾಭ್ಯಾಸಕ್ಕೆ ತೊಡಕಾಗದಂತೆ ನೋಡಿ ಕೊಳ್ಳಿ ಎಂದು ತಿಳಿಹೇಳಿದರು.

ಈ ವೇಳೆ ಮೈಸೂರು ನಾರಾಯಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಹೃದ್ರೋಗ ತಜ್ಞರಾದ ಡಾ.ಕೇಶವಮೂರ್ತಿ, ಕನಕಧಾಮ ಆಶ್ರಮದ ಸಂಸ್ಥಾಪಕರು ಧಾರ್ಮಿಕ ಮತ್ತು ಅಧ್ಯಾತ್ಮಿಕ ಚಿಂತಕರಾದ ಯೋಗರತ್ನ ಕೆ.ಎಸ್.ಮುಕುಂದನ್ ಅವರು ಮಾತನಾಡಿದರು.

ಸಮಾರಂಭದಲ್ಲಿ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿರುವ ವಿದ್ಯಾರ್ಥಿಗಳನ್ನು ಹಾಗೂ ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಸಮಾಜದ ಮಂಟೇಲಿಂಗಚಾರ್, ನಾಗಚಾರಿ ಮತ್ತಿತರರನ್ನು ಸನ್ಮಾನಿಸಲಾಯಿತು. 

ಕಾರ್ಯದರ್ಶಿ ಮುಳ್ಳೂರು ಸಿದ್ದಪ್ಪಾಜಿ, ಡಾ.ನಾಗೇಶ್, ಮಾಜಿ ಅಧ್ಯಕ್ಷ ಆರ್. ರವಿ, ಯೋಗ ಪ್ರಸಾದ್ ಮತ್ತಿತರರು‌ ಉಪಸ್ಥಿತರಿದ್ದರು.