ರಾಯಚೂರು: ಕಾವೇರಿ ಪ್ರಾಂತ್ಯದ ಜನರಿಗೆ ನೀರಿನ ವ್ಯವಸ್ಥೆ ಮಾಡಬೇಕು ಎಂಬ ಉದ್ದೇಶದಿಂದ ಮೈಸೂರು ಸಂಸ್ಥಾನದ ಆಗಿನ ರಾಜಮಾತೆ ತಮ್ಮ ಆಭರಣಗಳನ್ನ ಮಾರಾಟ ಮಾಡಿ ಕೆಆರ್‌ಎಸ್ ಜಲಾಶ ಕಟ್ಟಿಸಿದ್ದಾರೆ ಎಂದು ಗುರುರಾಘವೇಂದ್ರ ಸ್ವಾಮಿ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಸ್ವಾಮೀಜಿ ತಿಳಿಸಿದ್ದಾರೆ.
ಕೆಆರ್‌ಎಸ್ ಡ್ಯಾಂಗೆ ಟಿಪ್ಪು ಸುಲ್ತಾನ್ ಅಡಿಗಲ್ಲು ಹಾಕಿದ್ದು ಎಂಬ ಸಚಿವ ಮಹಾದೇವಪ್ಪ ಹೇಳಿಕೆ ವಿಚಾರಕ್ಕೆ ಮೇಲಿನಂತೆ ಶ್ರೀಗಳು ಪ್ರತಿಕ್ರಿಯಿಸಿದರು.
ರಾಜಮನೆತನದ ತ್ಯಾಗದ ಫಲವಾಗಿ ಕೆಆರ್‌ಎಸ್ ಡ್ಯಾಂ ನಿರ್ಮಾಣವಾಗಿದೆ. ಇನ್ನೂ ಬೇರೆ ಬೇರೆ ವಿಚಾರ ಬಂದರೆ, ಬೇರೆಯವರ ಹೆಸರುಗಳು ಬಂದರೆ ಅದರ ಬಗ್ಗೆ ಇತಿಹಾಸ ತಜ್ಞರೇ ಹೇಳಬೇಕು ಹೊರತು ನಾವು ಅದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಹೇಳಲು ಸಾಧ್ಯವಿಲ್ಲ ಎಂದು ಹೇಳಿದರು.
ಇದೇ ವೇಳೆ ಧರ್ಮಸ್ಥಳದ ಪ್ರಸ್ತುತ ವಿಚಾರಗಳ ಕುರಿತು ಪ್ರತಿಕ್ರಿಯಿಸಿದ ಅವರು, ಯಾವುದೇ ಧಾರ್ಮಿಕ ಸ್ಥಳ, ಕ್ಷೇತ್ರಗಳಲ್ಲಿ ಸಣ್ಣಪುಟ್ಟ ಲೋಪದೋಷಗಳಾದರೆ ಕ್ಷೇತ್ರದ ಪಾವಿತ್ರ್ಯತೆ ಹಾಗೂ ಕ್ಷೇತ್ರದ ಮಹತ್ವಕ್ಕೆ ಜೋಡಣೆ ಮಾಡಬಾರದು. ಅಲ್ಲಿನ ವ್ಯವಸ್ಥೆ, ಕಾನೂನು ವ್ಯವಸ್ಥೆ ಬಗ್ಗೆ ಮಾತನಾಡಬೇಕು. ಕ್ಷೇತ್ರ ಅತ್ಯಂತ ಪವಿತ್ರವಾದದ್ದು, ನಮ್ಮೆಲ್ಲರಿಗೂ ಅತ್ಯಂತ ಭಕ್ತಿ, ಶ್ರದ್ಧೆಯ ಕೇಂದ್ರವಾಗಿದೆ. ಅಲ್ಲಿ ಯಾವುದೇ ಪ್ರಕರಣ,ವಿಚಾರಗಳು ಇದ್ದರೂ ಕೂಡ ಕಾನೂನು ವಿಚಾರಣೆ ನಡೆಸುತ್ತದೆ ಎಂದು ಹೇಳಿದರು.
ರಾಜ್ಯದಲ್ಲಿ ಸಾರಿಗೆ ನೌಕರರ ಮುಷ್ಕರ ಹಿನ್ನೆಲೆ ಮಂತ್ರಾಲಯ ಭಕ್ತರಿಗೆ ತೊಂದರೆಯಾಗುವ ಕುರಿತು ಪ್ರತಿಕ್ರಿಯಿಸಿದ ಶ್ರೀಗಳು, ಸಾರಿಗೆ ಇಲಾಖೆಯವರು ತಮ್ಮ ಬೇಡಿಕೆ ಈಡೇರಿಕೆಗಾಗಿ ಹಲವಾರು ಬಾರಿ ಅಹವಾಲು ಕೊಟ್ಟಿದ್ದಾರೆ. ರಾಜ್ಯ ಸರ್ಕಾರ ಅವರ ಅಹವಾಲನ್ನ ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಸಾರಿಗೆ ನೌಕರರಿಗೆ ಸರ್ಕಾರ ಸೂಕ್ತ ಪರಿಹಾರ ಒದಗಿಸುತ್ತದೆ ಎಂಬ ಧೃಡ ವಿಶ್ವಾಸವಿದೆ ಎಂದು ಸುಬುದೇಂದ್ರ ತೀರ್ಥ ಸ್ವಾಮೀಜಿ ತಿಳಿಸಿದರು.