ರೈಲ್ವೆ ನಿಲ್ದಾಣದಲ್ಲಿ ರೈಲ್ವೆ ಮೂಲಸೌಕರ್ಯ ಯೋಜನೆ ಪರಿಶೀಲಿಸಿದ ಯದುವೀರ್

Spread the love

ಮೈಸೂರು: ಸಂಸತ್ ಸದಸ್ಯ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಮೈಸೂರು ರೈಲ್ವೆ ನಿಲ್ದಾಣದಲ್ಲಿ ರೈಲ್ವೆ ಮೂಲಸೌಕರ್ಯ ಯೋಜನೆಗಳನ್ನು ಪರಿಶೀಲಿಸಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು

ವಿಭಾಗದಾದ್ಯಂತ ನಡೆಯುತ್ತಿರುವ ಪ್ರಮುಖ ಮೂಲಸೌಕರ್ಯ ಹಾಗೂ ಸೇವಾ ಸಂಬಂಧಿತ ಅಭಿವೃದ್ಧಿಗಳ ಕುರಿತು ವಿವರ ಪಡೆದರು‌

ಮೈಸೂರು–ಚಾಮರಾಜನಗರ ರೈಲ್ವೆ ಮಾರ್ಗದ ಡಬಲಿಂಗ್ ಕಾಮಗಾರಿಗೆ ಸಂಬಂಧಿಸಿದ ಅಂತಿಮ ಸ್ಥಳ ಸಮೀಕ್ಷೆ ಆಗಿದ್ದು, ಈ ಮಾರ್ಗದ ಉದ್ದವು 60 ಕಿಮೀ. ಈ ಯೋಜನೆಯ ಕ್ಷೇತ್ರ ಸಮೀಕ್ಷೆ ಪೂರ್ಣಗೊಂಡಿದ್ದು, ಈಗ ವಿವರವಾದ ಯೋಜನಾ ವರದಿ ತಯಾರಾಗುತ್ತಿದೆ. ಈ ವರದಿಯನ್ನು ಆಗಸ್ಟ್ 2025ರೊಳಗೆ ರೈಲ್ವೆ ಮಂಡಳಿಗೆ ಸಲ್ಲಿಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು

ಅರಸೀಕೆರೆಯ ಮೂಲಕ ಹಾಸನ–ಮೈಸೂರು ರೈಲ್ವೆ ಮಾರ್ಗದ ಡಬಲಿಂಗ್ ಕಾರ್ಯದ ಪರಿಶೀಲನೆಯಾಗಿದ್ದು, ಈ ಮಾರ್ಗವು 165.80 ಕಿಮೀ ವಿಸ್ತಾರ ಹೊಂದಿದೆ, ಇದರ ಅಂತಿಮ ಸ್ಥಳ ಸಮೀಕ್ಷೆಗೆ ರೈಲ್ವೆ ಮಂಡಳಿಯಿಂದ ಆಗಸ್ಟ್ 2024ರಲ್ಲಿ ಅನುಮೋದನೆ ದೊರಕಿದೆ. ಹೆಲಿಕಾಪ್ಟರ್ ಆಧಾರಿತ ಗಗನ ಸಮೀಕ್ಷೆ ಪೂರ್ಣಗೊಂಡಿದ್ದು, ಪ್ರಸ್ತುತ ಭೂಸಮೀಕ್ಷೆ ನಡೆಯುತ್ತಿದೆ. ಈ ಯೋಜನೆ ಪೂರ್ಣಗೊಂಡ ಬಳಿಕ ಈ ಮಾರ್ಗದಲ್ಲಿ ರೈಲು ಸಂಚಾರ
ಸಾಮರ್ಥ್ಯ ಹೆಚ್ಚಳವಾಗಲಿದ್ದು, ಕಾರ್ಯಾಚರಣೆ ದಕ್ಷತೆಗೂ ಸಹಕಾರಿ ಆಗಲಿದೆ ಎಂದು ಅಧಿಕಾರಿಗಳು ತಿಳಿಸಿದರು.

ಸಭೆಯಲ್ಲಿ ಮೈಸೂರಿನ ರೈಲ್ವೆ ನಿಲ್ದಾಣದ ಭಾರವನ್ನು ಕಡಿಮೆ ಮಾಡಲು ಪ್ರಸ್ತಾಪಿತ ನಾಗನಹಳ್ಳಿ ಹೊಸ ಟರ್ಮಿನಲ್ ಅಭಿವೃದ್ಧಿ ಕಾಮಗಾರಿಯ ಮೇಲೂ ಚರ್ಚೆ ನಡೆಯಿತು.

580 ಮೀ ಉದ್ದ ಮತ್ತು 10.5 ಮೀ ಅಗಲದ ವೇದಿಕೆಯನ್ನು ವಿಸ್ತರಿಸುವುದು
760 ಮೀ ಉದ್ದದ ಪ್ಯಾಸೆಂಜರ್ ಲೈನ್ ಮತ್ತು ಸ್ಟೆಬ್ಲಿಂಗ್ ಲೈನ್ ನಿರ್ಮಾಣ
750 ಮೀ ಉದ್ದದ ಶಂಟಿಂಗ್ ನೆಕ್, ಡ್ರೈ ಪಿಟ್ ಲೈನ್, 350 ಮೀ ಉದ್ದದ ಮೆಷಿನ್ ಸೈಡಿಂಗ್
1,176 ಚದರ ಮೀ ವ್ಯಾಪ್ತಿಯ ವೇದಿಕೆ ಛಾವಣಿ,ನಾಲ್ಕು ಸಣ್ಣ ಸೇತುವೆ ಹಾಗೂ ಒಂದು ರಸ್ತೆ ಕೆಳಸೇತುವೆ ವಿಸ್ತರಣೆ
ಈ ಯೋಜನೆಗಾಗಿ ಒಟ್ಟು 8 ಎಕರೆ 29 ಗುಂಟೆ ಭೂಮಿ ಗುರುತಿಸಲಾಗಿದ್ದು, ಭೂಸ್ವಾಧೀನ ಪ್ರಕ್ರಿಯೆಯನ್ನು ತ್ವರಿತಗೊಳಿಸುವಂತೆ ಯದುವೀರ್ ಅವರಿಗೆ ಮನವಿ ಮಾಡಲಾಯಿತು.

ಕುವೆಂಪುನಗರ, ಮೈಸೂರುನಲ್ಲಿರುವ ಪಿಆರ್‌ಎಸ್ ಕೌಂಟರ್‌ಗೆ ಬಾಡಿಗೆರಹಿತ ವಸತಿ ಒದಗಿಸುವ ಕುರಿತು ವಿನಂತಿಸಲಾಯಿತು.

ಯದುವೀರ್ ಅವರು ಮೈಸೂರು ರೈಲ್ವೆ ವಿಭಾಗದ ಶ್ಲಾಘನೀಯ ಕಾರ್ಯಗಳನ್ನು ಮೆಚ್ಚಿ ರೈಲು ಸಂಪರ್ಕ ವಿಸ್ತರಣೆ ಹಾಗೂ ಪ್ರಯಾಣಿಕ ಸೌಲಭ್ಯಗಳ ಅನುಕೂಲತೆಗೆ ಉಪಯುಕ್ತ ಸಲಹೆಗಳನ್ನು ನೀಡಿದರು.

ಮೈಸೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಮುದಿತ್ ಮಿತ್ತಲ್,ಶಮ್ಮಸ್ ಹಮೀದ್,
ಗಿರೀಶ ಧರ್ಮರಾಜ ಕಲಗೊಂಡ ಮತ್ತಿತರರು ಉಪಸ್ಥಿತರಿದ್ದರು.