ಮೈಸೂರು: ಮತಕಳ್ಳತನದ ಆರೋಪ ಮಾಡಿ ಚುನಾವಣಾ ಆಯೋಗಕ್ಕೆ ಮಸಿ ಬಳಿಯಲು ಯತ್ನಿಸುತ್ತಿರುವ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಪಕ್ಷದ ನಿಲುವು ಹಾಸ್ಯಾಸ್ಪದ ಎಂದು ಮೈಸೂರು ನಗರ ಬಿಜೆಪಿ ಉಪಾಧ್ಯಕ್ಷೆ ಹೇಮಾನಂದೀಶ್ ಟೀಕಿಸಿದ್ದಾರೆ.
ದೇಶದ ಜನರ ವಿಶ್ವಾಸ ವನ್ನು ಗಳಿಸುವಲ್ಲಿ ರಾಹುಲ್ ಗಾಂಧಿ ವಿಫಲರಾಗಿದ್ದಾರೆ.
ಸೋಲಿನ ಅವಮಾನದಿಂದ ಬಳಲಿ ಸಾಂವಿಧಾನಿಕ ಸಂಸ್ಥೆಗಳ ಮೇಲೆ ಆಧಾರರಹಿತ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಪ್ರಕಟಣೆಯಲ್ಲಿ ಅವರು ದೂರಿದ್ದಾರೆ.
ಇಂಅದಿರಾ ಗಾಂಧಿ ತುರ್ತು ಪರಿಸ್ಥಿತಿ ಹೇರುವ ಮೂಲಕ ಸಂವಿಧಾನದ ಕಗ್ಗೊಲೆ ಮಾಡಿದ್ದರು. ಈಗ ರಾಹುಲ್ ಗಾಂಧಿ ಚುನಾವಣಾ ಆಯೋಗದ ಮೇಲೆ ಸುಳ್ಳು ಅಪವಾದ ಹೊರಿಸುವ ಮೂಲಕ ದೇಶದ ಜನತೆ ಹಾಗೂ ಚುನಾವಣಾ ಆಯೋಗಕ್ಕೆ ಅವಮಾನ ಮಾಡುತ್ತಿದ್ದಾರೆ,ಈ ಸುಳ್ಳು ಆರೋಪದ ಹಿಂದೆ ಕಾಂಗ್ರೆಸ್ ಸಂಚು ರೂಪಿಸುತ್ತಿದೆ ಎಂದು ಕಿಡಿಕಾರಿದ್ದಾರೆ.
ಮತ ಕಳ್ಳತನ ಆಗಿದೆ ಎಂದು ತಮ್ಮ ಬಳಿ ಪುರಾವೆ ಇದೆ ಎಂದು ರಾಹುಲ್ ಗಾಂಧಿ ಆದಿಯಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳುತ್ತಿದ್ದಾರೆ. ಅವರ ಬಳಿ ಪುರಾವೆ ಇದ್ದಿದ್ದರೆ ಅವರು ನ್ಯಾಯಾಲಕ್ಕೆ ಹೋಗಲಿ, ಅದನ್ನ ಬಿಟ್ಟು ಜನರಲ್ಲಿ ಗೊಂದಲ ಉಂಟು ಮಾಡುತ್ತಿರುವುದು ಏಕೆ ಎಂದು ಪ್ರಶ್ನಿಸಿದ್ದಾರೆ.
ಮೂರನೇ ಬಾರಿ ನರೇಂದ್ರ ಮೋದಿಯವರು ದೇಶದ ಪ್ರಧಾನಿ ಆಗಿರುವುದನ್ನು ಸಹಿಸಿಕೊಳ್ಳದ ಕಾಂಗ್ರೆಸ್ ನಾಯಕರು ಈ ರೀತಿ ಅಪಪ್ರಚಾರ ಮಾಡುವ ಮೂಲಕ ದೇಶದ ಮತದಾರರ ಮುಂದೆ ನಗೆಪಾಟಲಿಗೆ ಈಡಾಗುತ್ತಿದ್ದಾರೆ’ ಎಂದು ಹೇಮಾ ನಂದೀಶ್ ವ್ಯಂಗ್ಯವಾಡಿದ್ದಾರೆ.