ಆರ್.ವಿ.ದೇಶಪಾಂಡೆ ಹೇಳಿಕೆ ಖಂಡನೀಯ:ಹೇಮಾ ನಂದೀಶ್

ಮೈಸೂರು: ಹಿರಿಯ ರಾಜಕಾರಣಿ, ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರು, ಆರ್.ವಿ.ದೇಶಪಾಂಡೆ ಅವರು ಮಹಿಳೆಯರಿಗೆ ಅವ ಹೇಳನಕಾರಿಯಾಗಿ ಮಾತ ನಾಡಿರುವುದು ಸರಿಯಲ್ಲ ಎಂದು ಮೈಸೂರು ನಗರ ಬಿಜೆಪಿ ಉಪಾಧ್ಯಕ್ಷರಾದ ಹೇಮಾನಂದೀಶ್ ತಿಳಿಸಿದ್ದಾರೆ.

ಆ‌ರ್.ವಿ.ದೇಶಪಾಂಡೆ ರಾಜಕೀಯ, ಸಾಮಾಜಿಕ ಜೀವನದಲ್ಲಿ ಅಪಾರ ಅನುಭವ ಇರುವವರು. ಜಿಲ್ಲೆಯ ಜ್ವಲಂತ ಸಮಸ್ಯೆ ಬಗ್ಗೆ ಹಿರಿಯ ಪತ್ರಕರ್ತೆಯೊಬ್ಬರು
ಪ್ರಶ್ನಿಸಿದಾಗ ಅದಕ್ಕೆ ಸಮಂಜಸವಾದ ಉತ್ತರ ನೀಡಬೇಕಿತ್ತು. ನಾನೂ ಒಬ್ಬ ಮಹಿಳೆಯಾಗಿ ದೇಶಪಾಂಡೆ ಅವರು ನೀಡಿರುವ ಉತ್ತರವನ್ನು ಖಂಡಿಸುತ್ತೇನೆ ಎಂದು ಹೇಳಿದ್ದಾರೆ.

ತಮ್ಮದೇ ಪಕ್ಷದ ವೇದಿಕೆಯಲ್ಲಿ ಮಹಿಳೆಯರಿಗೆ ಗೃಹಲಕ್ಷ್ಮಿ ಮತ್ತು ಶಕ್ತಿ ಯೋಜನೆ ಕೊಟ್ಟಿದ್ದೇವೆ ಎಂದು ಅನೇಕ ಸಲ ಹೇಳುತ್ತಾರೆ. ಮತ್ತೊಂದೆಡೆ ಈ ರೀತಿ ಅಪ್ರಬುದ್ಧ ಹೇಳಿಕೆಗಳನ್ನು ಕೊಟ್ಟು ಮಹಿಳೆಯರನ್ನು ಮತ್ತು ಪತ್ರಕರ್ತರನ್ನು ಅವಮಾನಿಸುತ್ತಾರೆ.

ಇದರಿಂದ ಮಹಿಳೆಯರ ಬಗ್ಗೆ ಕಾಂಗ್ರೆಸ್ ಪಕ್ಷಕ್ಕೆ ಇರುವ ಗೌರವ ಏನೆಂದು ಗೊತ್ತಾಗುತ್ತದೆ. ಶಾಸಕರು ಇಂತಹ ಮನಸ್ಥಿತಿಯಿಂದ ಹೊರಬರದಿದ್ದಲ್ಲಿ ಹೋರಾಟ ಅನಿವಾರ್ಯ ಎಂದು ಹೇಮಾ ನಂದೀಶ್‌ ಎಚ್ಚರಿಸಿದ್ದಾರೆ.

ಅಷ್ಟಕ್ಕೂ ಜಿಲ್ಲೆಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಬೇಕು ಎನ್ನುವ ಬೇಡಿಕೆ ಬಹು ಹಿಂದಿನದ್ದು, ಜಿಲ್ಲೆಯ ಜನತೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಇಲ್ಲದೆ ಬೇರೆ ಬೇರೆ ಜಿಲ್ಲೆಯನ್ನು ಅವಲಂಬಿಸುವಂತಾಗಿದೆ. ಇಂತಹ ಸಂದರ್ಭದಲ್ಲಿ ಪ್ರಭಾವಿ ನಾಯಕರಾದ ಆರ್.ವಿ.ದೇಶಪಾಂಡೆ ಈ ರೀತಿ ಹೇಳಿರುವುದು ಶೋಭೆ ತರದು ಎಂದು ಹೇಮಾನಂದೀಶ್ ತಿಳಿಸಿದ್ದಾರೆ.