ಬೆಂಗಳೂರು, ಮಾ.3: ರಾಜ್ಯಪಾಲರ ಅಧಿಕಾರ ಕಿತ್ತುಕೊಂಡು ಈಗ ಅವರ ಮೂಲಕವೇ ಸಾಧನೆ ಮಾಡಿದ್ದೇವೆ ಎಂದು ಸುಳ್ಳು ಹೇಳಲಾಗಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಆಕ್ರೋಶ ವ್ಯಕ್ತಪಡಿಸಿದರು.
ಜಂಟಿ ಅಧಿವೇಶನದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರ ಭಾಷಣದ ಬಳಿಕ ಹಮ್ಮಿಕೊಂಡಿದ್ದ ಪಾದಯಾತ್ರೆ ವೇಳೆ ಅಶೋಕ ಮಾತನಾಡಿದರು.
ಅಭಿವೃದ್ಧಿ ಶೂನ್ಯವಾದ ಕಾಂಗ್ರೆಸ್ ಸರ್ಕಾರ ರಾಜ್ಯಪಾಲರ ಬಾಯಲ್ಲಿ ಸುಳ್ಳು ಹೇಳಿಸಿದೆ. ಅಭಿವೃದ್ಧಿ ಹಾಗೂ ವಿಕಾಸ ಎಂಬ ಮಾತನ್ನು ಅವರ ಬಾಯಲ್ಲಿ ಹೇಳಿಸಿದ್ದಾರೆ. ಕಾಂಗ್ರೆಸ್ ನಾಯಕರ ಜೇಬು ತುಂಬಿದೆ, ಕಾಂಗ್ರೆಸ್ ಶಾಸಕರ ಮನೆ ತುಂಬಿದೆಯೇ ಹೊರತು ರಾಜ್ಯದ ಅಭಿವೃದ್ಧಿ ಆಗಿಲ್ಲ. ರಾಜ್ಯದ ಆರ್ಥಿಕ ಸ್ಥಿತಿ ಅಧೋಗತಿಗೆ ಹೋಗಿದೆ. ರಾಜ್ಯಪಾಲರನ್ನು ಹೀಯಾಳಿಸುವ ಮಾತಾಡಿ, ಅವರ ಅಧಿಕಾರಗಳನ್ನು ಕಿತ್ತುಕೊಂಡು, ಈಗ ಅವರ ಕೈಯಲ್ಲೇ ನಾವೇ ನಂ.1 ಎಂಬ ರೀತಿಯಲ್ಲಿ ಹೇಳಿಸಲಾಗಿದೆ ಎಂದು ಟೀಕಿಸಿದರು
ಆರೋಗ್ಯ ಕೈಗೆಟುಕುತ್ತಿದೆ ಎನ್ನಲಾಗಿದೆ. ಆದರೆ ಸರ್ಕಾರಿ ಆಸ್ಪತ್ರೆಗಳಲ್ಲಿ ಶುಲ್ಕಗಳನ್ನು ಹೆಚ್ಚಿಸಲಾಗಿದೆ. ಬಾಣಂತಿಯರು ಹಾಗೂ ಮಕ್ಕಳು ಸಾಯುತ್ತಿದ್ದಾರೆ. ಆದರೆ ಮಕ್ಕಳನ್ನು ಕಾಪಾಡಲು ಕಟಿಬದ್ಧ ಎನ್ನಲಾಗಿದೆ. ಪರಿಶಿಷ್ಟ ಜಾತಿ, ವರ್ಗದವರ ಅಭಿವೃದ್ಧಿಗೆ ಒತ್ತು ನೀಡಿದ್ದೇವೆ ಎನ್ನುತ್ತಾರೆ. ಇತ್ತ ವಾಲ್ಮೀಕಿ ನಿಗಮದಲ್ಲಿ 187 ಕೋಟಿ ರೂ. ಲೂಟಿ ಮಾಡಲಾಗಿದೆ. ದಲಿತರಿಗೆ ಮೀಸಲಾದ ಹಣವನ್ನು ಗ್ಯಾರಂಟಿಗಳಿಗೆ ಬಳಸಲಾಗಿದೆ. ಬೆಂಗಳೂರಿನಲ್ಲಿ ರಸ್ತೆ ಗುಂಡಿಗಳು ಹೆಚ್ಚಾಗಿವೆ. ಕಸದ ರಾಶಿ ರಾಜರಾಜೇಶ್ವರಿಸಿದೆ. ಇಂತಹ ಸಮಯದಲ್ಲಿ ಹೊಸ ರಸ್ತೆಗಳನ್ನು ಮಾಡುತ್ತೇವೆ ಎಂದು ಹೇಳಿದ್ದಾರೆ. ಇ-ಖಾತಾ ಮಾಡಿಸಿಕೊಡಲು ಹಣ ಕೊಡಿ ಎಂದು ಜಾಹೀರಾತು ನೀಡಲಾಗುತ್ತಿದೆ. ನೀರಾವರಿಗೆ ಆದ್ಯತೆ ಎಂದಿದ್ದಾರೆ. ಈವರೆಗೆ ಎಷ್ಟು ಯೋಜನೆ ತರಲಾಗಿದೆ, ಗುದ್ದಲಿ ಪೂಜೆ ಮಾಡಲಾಗಿದೆ ಎಷ್ಟು ಅನುದಾನ ನೀಡಲಾಗಿದೆ ಎಂದು ತಿಳಿಸಲಿ ಎಂದು ಒತ್ತಾಯಿಸಿದರು.
ಕಳೆದ 19 ತಿಂಗಳಲ್ಲಿ ಗಂಭೀರ ಕಾನೂನು ಉಲ್ಲಂಘನೆಯಾದ ಪ್ರಕರಣ ನಡೆದಿಲ್ಲ ಎಂದು ಉಲ್ಲೇಖಿಸಿದ್ದಾರೆ. ಅತ್ಯಾಚಾರಗಳು, ಬ್ಯಾಂಕ್ ದರೋಡೆ, ಮೈಸೂರಿನಲ್ಲಿ ಪೊಲೀಸ್ ಠಾಣೆ ಮೇಲೆ ದಾಳಿ ಸೇರಿದಂತೆ ಅನೇಕ ಘಟನೆಗಳು ನಡೆದಿವೆ. ಆದರೂ ಸರ್ಕಾರದ ಪ್ರಕಾರ ಇವೆಲ್ಲ ಗಂಭೀರ ಘಟನೆಗಳಲ್ಲ. ಮೈಕ್ರೋ ಫೈನಾನ್ಸ್‌ನಿಂದ ಜನರು ಸಾಯುತ್ತಿದ್ದರೂ ಅದು ಸರ್ಕಾರಕ್ಕೆ ಗಂಭೀರವಾಗಿ ಕಂಡಿಲ್ಲ ಎಂದು ಅಶೋಕ್ ಕಿಡಿಕಾರಿದರು.
ಸಾಮಾನ್ಯವಾಗಿ ರಾಜ್ಯಪಾಲರ ಭಾಷಣ ಸರ್ಕಾರದ ಒಂದು ವರ್ಷದ ಸಾಧನೆ ಮತ್ತು ಮುಂದಿನ ವರ್ಷಕ್ಕೆ ಇರಬೇಕಾದ ಮುನ್ನೋಟದ ಗುರಿಗಳನ್ನು ಒಳಗೊಂಡಿರುತ್ತದೆ. ಆದರೆ ಈ ಸರ್ಕಾರ ಕಳೆದ ಒಂದು ವರ್ಷದಿಂದ ಏನನ್ನೂ ಮಾಡಿಲ್ಲ, ಮುಂದೆ ಏನನ್ನಾದರೂ ಮಾಡಲು ಯಾವ ದೂರದೃಷ್ಟಿಯೂ ಹೊಂದಿಲ್ಲ ಎಂಬುದಕ್ಕೆ ರಾಜ್ಯಪಾಲರ ಭಾಷಣವೇ ಸಾಕ್ಷಿ. ಕಾಂಗ್ರೆಸ್ ಸರ್ಕಾರ ರಾಜ್ಯಪಾಲರ ಭಾಷಣದ ಮೂಲಕ ಸುಳ್ಳು ಹೇಳಿಸಿ, ಅವರ ದಾರಿ ತಪ್ಪಿಸಿದೆ ಜತೆಗೆ ನಾಡಿನ ಜನರ ದಿಕ್ಕನ್ನೂ ತಪ್ಪಿಸಿದೆ ಎಂದು ಆರೋಪಿಸಿದರು.