ಕಾಂಗ್ರೆಸ್ ಸರ್ಕಾರದ ವಿರುದ್ಧ ಅಶೋಕ್ ಗುಡುಗು

Spread the love

ಬೆಂಗಳೂರು: ಗುಲ್ಬರ್ಗದಿಂದ ದಸರಾ ವೇಳೆ ಬಲೂನ್ ವ್ಯಾಪಾರಕ್ಕಾಗಿ ಮೈಸೂರಿಗೆ ಬಂದಿದ್ದ ಹಕ್ಕಿಪಿಕ್ಕಿ ಜನಾಂಗದ ಬಾಲಕಿಯ ಅಪಹರಿಸಿ ಅತ್ಯಾಚಾರ ಕೊಲೆ ನಡೆದು 5 ದಿನಗಳಾದರೂ ಸರ್ಕಾರ ಪರಿಹಾರ ನೀಡಿಲ್ಲ ಎಂದು ಪ್ರತಿಪಕ್ಷ ನಾಯಕ ಕಿಡಿಕಾರಿದರು.

ಪರಿಶಿಷ್ಟ ಪಂಗಡಕ್ಕೆ ಸೇರಿದ ಒಬ್ಬ ಅಪ್ರಾಪ್ತ ಬಾಲಕಿಗೆ ಆದ ಈ ಅನ್ಯಾಯಕ್ಕೆ ಸಿಎಂ‌ ಸಿದ್ದರಾಮಯ್ಯ ಸರ್ಕಾರ ಈವರೆಗೂ ಪರಿಹಾರವನ್ನೂ ನೀಡಿಲ್ಲ, ಕನಿಷ್ಠ ಪಕ್ಷ ಸೌಜನ್ಯಕ್ಕೂ ಬಾಲಕಿಯ ತಂದೆತಾಯಿಯನ್ನು ಭೇಟಿಯಾಗಿ ಸಾಂತ್ವನ ಹೇಳಿಲ್ಲ ಎಂದು ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ‌ ಮಾತನಾಡಿದ ಅವರು,
ಸ್ವಾಮಿ ಸಿದ್ದರಾಮಯ್ಯ ನವರೇ, ನಾವು ದಲಿತರು, ಹಿಂದುಳಿದವರ ಪರವಾಗಿದ್ದೇವೆ ಎಂದು ಬೊಗಳೆ ಭಾಷಣ ಮಾಡುತ್ತೀರಲ್ಲ, ನಿಮ್ಮ ತವರು ಜಿಲ್ಲೆಯಲ್ಲಿ, ಮೈಸೂರಿನ ಹೃದಯ ಭಾಗದಲ್ಲಿ ಪರಿಶಿಷ್ಟ ಪಂಗಡಕ್ಕೆ ಸೇರಿದ ಬಾಲಕಿಗೆ ಆದ ಘೋರ ಅನ್ಯಾಯ ನಿಮ್ಮ ಕಣ್ಣಿಗೆ ಕಾಣುತ್ತಿಲ್ಲವೇ ಎಂದು ಕಾರವಾಗಿ ಪ್ರಶ್ನಿಸಿದರು.

ಒಂದು ಕಡೆ ಮೈಸೂರು ಜಿಲ್ಲೆಯನ್ನ ಸಂಪೂರ್ಣವಾಗಿ ನಿಮ್ಮ ಪುತ್ರನಿಗೆ ಬಿಟ್ಟುಕೊಟ್ಟು ವರ್ಗಾವಣೆ, ಕಮಿಷನ್ ದಂಧೆಯಲ್ಲಿ ತೊಡಗಿಸಿದ್ದೀರಿ. ಇನ್ನೊಂದು ಕಡೆ ತಾವು ಬೆಂಗಳೂರಿನಲ್ಲಿ ಡಿನ್ನರ್ ಮೀಟಿಂಗ್, ಕಲೆಕ್ಷನ್ ಟಾರ್ಗೆಟ್ ಮೀಟಿಂಗ್ ಎಂದು ಬಿಹಾರ ಚುನಾವಣೆಗೆ ಫಂಡಿಂಗ್ ಕಳುಹಿಸಲು ಪೈಪೋಟಿಗೆ ಬಿದ್ದಂತೆ ಸಚಿವರಿಗೆ ವಸೂಲಿ ಟಾರ್ಗೆಟ್ ನೀಡಿ ಅಕ್ಟೋಬರ್ ಕ್ರಾಂತಿಯ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಳ್ಳುವಲ್ಲಿ ಬ್ಯುಸಿ ಆಗಿದ್ದೀರಿ ಎಂದು ವ್ಯಂಗ್ಯವಾಗಿ ಟೀಕಿಸಿದರು.

ಹೀಗಾದರೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿಯದೇ ಇನ್ನೇನಾಗುತ್ತೆ, ಒಬ್ಬ ದಲಿತ ಬಾಲಕಿಯ ಕೊಲೆಯ ರಕ್ತ ನಿಮ್ಮ ಕೈಗಂಟಿದೆ. ಈ ಪಾಪದ ಶಾಪ ನಿಮ್ಮನ್ನ ತಟ್ಟದೇ ಬಿಡುವುದಿಲ್ಲ ಎಂದು ಎಚ್ಚರಿಸಿದರು.

ಕಲಬುರ್ಗಿಯ ಗ್ರಂಥಾಲಯದ ನೌಕರಿಯಲ್ಲಿದ್ದ ಮಹಿಳೆಯದು ಆತ್ಮಹತ್ಯೆಯಲ್ಲ; ಅದು ಸರಕಾರಿ ಪ್ರಾಯೋಜಿತ ಕೊಲೆ ಎಂದು ಆರ್. ಅಶೋಕ್ ಇದೇ ವೇಳೆ ಆರೋಪಿಸಿದರು.

ಈ ಅತ್ಮಹತ್ಯೆ ಪ್ರಕರಣದ ತನಿಖೆಯನ್ನು ಸಿಬಿಐಗೆ ನೀಡುವಂತೆ ಆಗ್ರಹಿಸಿದರು.

ವೇತನ ಸಿಗದೇ ಗ್ರಂಥಪಾಲಕರ ಆತ್ಮಹತ್ಯೆ, ಬಿಲ್ ಪಾವತಿ ಆಗದೇ ಗುತ್ತಿಗೆದಾರರ ಆತ್ಮಹತ್ಯೆ, ವರ್ಗಾವಣೆ ಕಮಿಷನ್ ದಂಧೆಯಲ್ಲಿ ಪೊಲೀಸ್ ಅಧಿಕಾರಿಗಳ ಆತ್ಮಹತ್ಯೆ, ನಿಗಮಗಳಲ್ಲಿ ಸರಕಾರಿ ಸಾಲ ಸಿಗದೇ ಮೈಕ್ರೋ ಫೈನಾನ್ಸ್ ಕಿರುಕುಳದಲ್ಲಿ ಬಡವರ ಆತ್ಮಹತ್ಯೆ, ಬರ ಮತ್ತು ಅತಿವೃಷ್ಟಿಯಿಂದ ಪರಿಹಾರ ಸಿಗದೇ 300ಕ್ಕೂ ಹೆಚ್ಚು ರೈತರ ಆತ್ಮಹತ್ಯೆ ಆಗಿದೆ. ಇದು ಮನೆಹಾಳರ ಸರಕಾರ,
ದಿವಾಳಿ ಮಾಡಿ ಜನಸಾಮಾನ್ಯರಿಗೆ ಆತ್ಮಹತ್ಯೆ ಭಾಗ್ಯವನ್ನು ಆರನೇ ಗ್ಯಾರಂಟಿಯಾಗಿ ನೀಡಿದೆ ಎಂದು ತೀವ್ರ ವಾಗ್ದಾಳಿ ನಡೆಸಿದರು.

ಇವರು ಕಾಂಗ್ರೆಸ್ಸಿನ ಸಚಿವರಲ್ಲ; ಯಮ ಕಿಂಕರರು,ಸಾವಿನ ಗ್ಯಾರಂಟಿ ಕೊಡುತ್ತಿದ್ದಾರೆ, ಇದೊಂದು ಕೊಲೆಗಡುಕರ ಸರಕಾರ ಎಂದು ಆರೋಪಿಸಿದರು.

ಕೋಟಿ ಕೋಟಿ ಕೊಟ್ಟರೆ
ಸಿದ್ದರಾಮಯ್ಯ ಟಾರ್ಗೆಟ್ ಫಿಕ್ಸ್ ಆಗಿದೆ; ಕರ್ನಾಟಕದ ಬೊಕ್ಕಸ ಬರಿದಾಗಿದೆ. ಇದು ಡಿನ್ನರ್ ರಾಜಕೀಯದ ಕಾರ್ಯಸೂಚಿ ಎಂದು ಆರ್. ಅಶೋಕ್ ಟೀಕಿಸಿದರು.

ಬಿಹಾರಕ್ಕೆ 300 ಕೋಟಿಗೆ ಸಂಬಂಧಿಸಿ 300 ಚಿನ್ನದ ಗಟ್ಟಿಗಳು ಹೋಗಬೇಕಿತ್ತು. ಈಗ ಸಿದ್ದರಾಮಯ್ಯನವರು ಎಲ್ಲ ಸಚಿವರಿಗೆ ಒಂದೊಂದು ಚಿನ್ನದ ಗಟ್ಟಿ ಫಿಕ್ಸ್ ಮಾಡಿದ್ದಾರೆ. ಇಲಾಖೆ ಭಾರದನ್ವಯ ಕೋಟಿ ಕೋಟಿ ಕೊಟ್ಟರೆ ನೀವು ಡಿಸೆಂಬರ್‍ನಲ್ಲಿ ಸಚಿವರಾಗಿ ಇರುತ್ತೀರಿ; ಇಲ್ಲವಾದರೆ, ಜನವರಿಯಲ್ಲಿ ನೀವು ಇರುವುದಿಲ್ಲ ಎಂದು ತಿಳಿಸಿದ್ದಾರೆ, 300 ರೂ. ಊಟ ಕೊಟ್ಟು 300 ಕೋಟಿ ವಸೂಲಿ ಮಾಡಿದ್ದಾರೆ ಎಂದು ಲೇವಡಿ ಮಾಡಿದರು.

ಕಿರಣ್ ಮಜುಂದಾರ್ ಅವರು ಬೆಂಗಳೂರು ಕುರಿತು ಟ್ವೀಟ್ ಮಾಡಿದ್ದಾರೆ. ಇದು ಸರ್ಕಾರದ ಮುಖಕ್ಕೆ ಮಂಗಳಾರತಿ ಎತ್ತಿದಂತಲ್ಲವೇ ಎಂದು ಪ್ರತಿ ಪಕ್ಷದ ನಾಯಕ ಪ್ರಶ್ನಿಸಿದರು.

ಮಾಲೂರಿನ ವಿಷಯದಲ್ಲಿ ನ್ಯಾಯಾಲಯದ ತೀರ್ಪನ್ನು ಸ್ವಾಗತಿಸುತ್ತೇವೆ. ಸತ್ಯ ಹೊರಬರಲಿ; ಮತಗಳ್ಳರು ಯಾರೆಂದು ಗೊತ್ತಾಗಲಿ ಎಂದು ಸುದ್ದಿಗಾರರ ಪ್ರಶ್ನೆಗೆ ಅಶೋಕ್ ಉತ್ತರಿಸಿದರು.

ಸುದ್ದಿಗೋಷ್ಠಿಯಲ್ಲಿ ಶಾಸಕ ಡಾ.ಸಿ.ಎನ್. ಅಶ್ವತ್ಥನಾರಾಯಣ್, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್, ಬಿಜೆಪಿ ರಾಜ್ಯ ಮುಖ್ಯ ವಕ್ತಾರ ಅಶ್ವತ್ಥನಾರಾಯಣ್ ಉಪಸ್ಥಿತರಿದ್ದರು.